ಬೆಂಗಳೂರು: ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ, ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಬೃಹತ್ ಜಾಲವನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದಾರೆ.
ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವನಂಜೇಗೌಡ, ಮಂಡ್ಯದ ಕಾಳೇನಹಳ್ಳಿಯ ನಯನ್, ಪಾಂಡವುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನ್ ಕುಮಾರ್ ಮತ್ತು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ವೀರೇಶ್ ಬಂಧಿತರು.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ವೀರೇಶ್ ಸಂಬಂಧಿ ಡಾ ಮಲ್ಲಿಕಾರ್ಜುನ್ ಮತ್ತು ಸಹಾಯಕ ಸಿದ್ದೇಶ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಮಂಡ್ಯ, ಮೈಸೂರು ಭಾಗದ ಹತ್ತಾರು ಕಡೆಗಳಲ್ಲಿ ಸ್ಕ್ಯಾನಿಂಗ್ ಮಾಡುವ ಮೂಲಕ ಭ್ರೂಣ ಲಿಂಗ ಪತ್ತೆ ಹಚ್ಚಿ, ಬಳಿಕ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.
ಇತ್ತೀಚೆಗೆ ಹಳೇ ಮದ್ರಾಸ್ ರಸ್ತೆಯಲ್ಲಿ ಗರ್ಭಿಣಿಯನ್ನು ಆರೋಪಿಗಳಾದ ಶಿವನಂಜೇಗೌಡ ಹಾಗೂ ಇತರರು ಕರೆದೊಯ್ಯುತ್ತಿದ್ದರು. ಈ ಮಾಹಿತಿ ಮೇರೆಗೆ ಠಾಣಾಧಿಕಾರಿ ಪ್ರಶಾಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಎಲ್ಲೆಂದರಲ್ಲಿ ಸ್ಕ್ಯಾನಿಂಗ್: 3-4 ವರ್ಷಗಳಿಂದ ದಂಧೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲಿ ಸಕ್ರಿಯವಾಗಿದ್ದಾರೆ. ಶಿವಲಿಂಗೇಗೌಡ ಈ ಮೊದಲು ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದರಿಂದ ಭ್ರೂಣ ಪತ್ತೆ ಬಗ್ಗೆ ಮಾಹಿತಿ ಇತ್ತು. ತಲೆಮರೆಸಿಕೊಂಡಿರುವ ವೈದ್ಯ ಮಲ್ಲಿಕಾರ್ಜುನ್ ಕೂಡ ಶಿವಲಿಂಗೇಗೌಡ ಮತ್ತು ಸಂಬಂಧಿ ವೀರೇಶ್‌ಗೆ ಸಹಕಾರ ನೀಡುತ್ತಿದ್ದ. ಇನ್ನು ನವೀನ್ ಮತ್ತು ನಯನ್ ಮಧ್ಯವರ್ತಿಗಳಾಗಿದ್ದು, ಭ್ರೂಣ ಪತ್ತೆಗಾಗಿ ಗರ್ಭಿಣಿಯರನ್ನು ಹುಡುಕುತ್ತಿದ್ದರು. ಬಳಿಕ ಕೈಯಲ್ಲಿ ಕೊಂಡೊಯ್ಯುವ ಸ್ಕ್ಯಾನಿಂಗ್ ಯಂತ್ರದಿಂದ ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲಿ ಖಾಸಗಿ ಹೋಟೆಲ್ ಅಥವಾ ಕೊಠಡಿಯಲ್ಲಿ ಸ್ಕ್ಯಾನಿಂಗ್ ಮಾಡಿ, ಹೆಣ್ಣು ಭ್ರೂಣ ಪತ್ತೆ ಹಚ್ಚುತ್ತಿದ್ದರು.
ಬಳಿಕ ಗರ್ಭಪಾತ ಮಾಡುತ್ತಿದ್ದರು. ಆರೋಪಿಗಳ ಮಾಹಿತಿ ಮೇರೆಗೆ ಆರೋಪಿ ನವೀನ್ ಸಂಬಂಧಿಕರಿಗೆ ಸೇರಿದ ಮಂಡ್ಯದ ಆಲೆ ಮನೆ ಮೇಲೆ ದಾಳಿ ನಡೆಸಿದಾಗ ಆಲೆ ಮನೆಯನ್ನೇ ಸ್ಕ್ಯಾನಿಂಗ್ ಸೆಂಟರ್ ಮಾಡಿಕೊಂಡಿರುವುದು ಗೊತ್ತಾಗಿದೆ. ಪ್ರತಿ ಹೆಣ್ಣು ಭ್ರೂಣ ಲಿಂಗ ಪತ್ತೆಗೆ 15-20 ಸಾವಿರ ರೂ. ಪಡೆಯುತ್ತಿದ್ದರು. ಜತೆಗೆ ಗರ್ಭಪಾತ ಮಾಡಲು 20-30 ಸಾವಿರ ರೂ. ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದರು.
ಚರಂಡಿಯಲ್ಲಿ ನವಜಾತ ಶಿಶು ಪತ್ತೆ!: ಈ ಮಧ್ಯೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯ ನಾಗವಾರಪಾಳ್ಯದ ಮೋರಿ ಬಳಿ ನವಜಾತ ಶಿಶು ಪತ್ತೆಯಾಗಿದೆ. 3 ದಿನದ ಹಿಂದೆ ಜನಿಸಿದ ಹೆಣ್ಣು ಮಗುವನ್ನು ಅಪರಿಚಿತರು ಮೋರಿ ಬಳಿ ಇಟ್ಟು ಹೋಗಿದ್ದು, ಬೈಯಪ್ಪನಹಳ್ಳಿ ಪೊಲೀಸರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಶಿಶು ಪತ್ತೆಯಾಗಿದ್ದು, ಮಗುವಿನ ಆರೈಕೆಗಾಗಿ ಇಬ್ಬರು ಮಹಿಳಾ ಕಾನ್‌ಸ್ಟೆàಬಲ್ ನಿಯೋಜಿಸಲಾಗಿದ್ದು, ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಗು ಬಗ್ಗೆ ಮಾಹಿತಿ ನೀಡಲಾಗಿದೆ. ಈ ಸಂಬಂಧ ಕೌಶಿಕ್ ಎಂಬಾತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.