ಬೆಂಗಳೂರು ಹೆಣ್ಣುಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸುತ್ತಿದ್ದ ಪ್ರಕರಣದಲ್ಲಿ ಮೈಸೂರಿನ ಚಂದನ್ ಬಲ್ಲಾಳ್ ಮಾತ್ರವಲ್ಲದೆ ಚೆನ್ನೈಯಲ್ಲಿ ಬಂಧನಕ್ಕೊಳಗಾದ ಮಕ್ಕಳ ತಜ್ಞ ತುಳಸಿರಾಮ್ ಕೂಡ ಕಿಂಗ್‌ಪಿನ್ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಈತ ಚಂದನ್ ಬಲ್ಲಾಳ್‌ನಿಂದ ಪ್ರತೀ ರೋಗಿಗೆ ಕಮಿಷನ್ ಪಡೆಯುತ್ತಿದ್ದ ಎಂಬುದು ಗೊತ್ತಾಗಿದೆ.
ಮೈಸೂರು ಮೂಲದ ತುಳಸಿರಾಮ್‌ನ ತಾಯಿ ಪ್ರಖ್ಯಾತ ಸ್ತ್ರೀರೋಗ ತಜ್ಞೆಯಾಗಿದ್ದರು. ಮೈಸೂರಿನ ಉದಯಗಿರಿಯಲ್ಲಿ ಲತಾ ಎಂಬ ಆಸ್ಪತ್ರೆ ನಡೆಸುತ್ತಿದ್ದರು. ಈತ ಕೂಡ ಮಕ್ಕಳ ತಜ್ಞನಾಗಿ ಅದೇ ಆಸ್ಪತ್ರೆ ನಡೆಸುತ್ತಿದ್ದ. ತಾಯಿ ಮೃತಪಟ್ಟ ಬಳಿಕ ಅಕ್ರಮ ದಂಧೆಗೆ ಕೈಹಾಕಿದ್ದ ಆತ ಹೆಣ್ಣುಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸುತ್ತಿದ್ದ. ಅನಂತರ ವೈಯಕ್ತಿಕ ಕಾರಣಕ್ಕೆ ಕುಟುಂಬ ಸಮೇತ ಚೆನ್ನೈಗೆ ಸ್ಥಳಾಂತರಗೊಂಡಿದ್ದ. ಹೀಗಾಗಿ ತನ್ನ ಲತಾ ಆಸ್ಪತ್ರೆಯನ್ನು ಡಾ| ಚಂದನ್ ಬಲ್ಲಾಳ್‌ಗೆ ಮಾರಾಟ ಮಾಡಿದ್ದ. ಚಂದನ್ ಅದನ್ನು ಮಾತಾ ಎಂದು ಹೆಸರು ಬದಲಿಸಿ ನಡೆಸುತ್ತಿದ್ದ. ಅದಕ್ಕೆ ಪತ್ನಿ ಮೀನಾಳನ್ನು ಎಂಡಿಯಾಗಿ ಮತ್ತು ತುಳಸಿರಾಮ್ ಸೂಚಿಸಿದ ರಿಜ್ಮಾ ಖಾನುಂಳನ್ನು ಸ್ವಾಗತಕಾರಿಣಿಯಾಗಿ ನೇಮಿಸಿಕೊಂಡಿದ್ದ ಎಂಬುದಾಗಿ ತಿಳಿದು ಬಂದಿದೆ.
ಚಂದನ್ ಬಲ್ಲಾಳ್ ಆಯುರ್ವೇದ ವೈದ್ಯನಾಗಿದ್ದರೂ ಸಾಮಾನ್ಯ ವೈದ್ಯರ ಮೂಲಕ ಆಸ್ಪತ್ರೆ ನಡೆಸುತ್ತಿದ್ದ. ಮಾತಾ ಆಸ್ಪತ್ರೆಯ ಮೇಲ್ಭಾಗದಲ್ಲಿ ಪ್ರತ್ಯೇಕ ಕೊಠಡಿ ಹಾಗೂ ರೋಗಿಗಳ ಕೋಣೆ ನಿರ್ಮಿಸಿಕೊಂಡಿದ್ದ. ತುಳಸಿರಾಮ್ ಚೆನ್ನೈಯಲ್ಲಿದ್ದುಕೊಂಡೇ ಮಧ್ಯವರ್ತಿ ವೀರೇಶ್, ಶಿವಲಿಂಗೇಗೌಡ ಹಾಗೂ ಇತರರ ಮೂಲಕ ಗರ್ಭಪಾತ ಮಾಡಿಸಿಕೊಳ್ಳುವವರನ್ನು ಪತ್ತೆ ಹಚ್ಚಿ ಚಂದನ್ ಬಲ್ಲಾಳನ ಆಸ್ಪತ್ರೆಗೆ ಕಳುಹಿಸುತ್ತಿದ್ದ. ಪ್ರತೀ ರೋಗಿಗೆ 10-15 ಸಾವಿರ ರೂ. ಕಮಿಷನ್ ಪಡೆಯುತ್ತಿದ್ದ. ಬಲ್ಲಾಳ್ ಕೂಡ ತನ್ನ ಜಾಲದಲ್ಲಿದ್ದ ನೂರಾರು ಮಂದಿಗೆ ಪ್ರತ್ಯೇಕವಾಗಿ ಗರ್ಭಪಾತ ಮಾಡಿಸಿದ್ದಾನೆ.
ಮಾತಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಜತೆಗೆ ಸಾರ್ವಜನಿಕವಾಗಿ ತನ್ನ ಕೃತ್ಯ ಬಯಲಾದ ಹಿನ್ನೆಲೆಯಲ್ಲಿ ರಾಜಕುಮಾರ್ ರಸ್ತೆಯಲ್ಲಿ ಆಯುರ್ವೇದಿಕ್ ಪೈಲ್ಸ್ ಡೇ ಕೇರ್ ಸೆಂಟರ್ ಎಂಬ ಆಸ್ಪತ್ರೆ ತೆರೆದು ಅಲ್ಲಿಯೂ ಗರ್ಭಪಾತ ಮಾಡಿಸುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧನಕ್ಕೆ ಒಳಗಾಗಿರುವ ಮಧ್ಯವರ್ತಿ ನವೀನ್‌ಕುಮಾರ್ ಮಂಡ್ಯದಿಂದ ಮೇಲುಕೋಟೆಗೆ ಹೋಗುವ ಮಾರ್ಗದಲ್ಲಿರುವ ಸಂಬಂಧಿಕರ ಆಲೆಮನೆಯಲ್ಲಿ ಸ್ಕ್ಯಾನ್ ಮಾಡಲು ವ್ಯವಸ್ಥಿತವಾದ ಜಾಗ ಸಿದ್ಧಪಡಿಸಿದ್ದ. ಬಳಿಕ ಶಿವಲಿಂಗೇಗೌಡ, ನಯನ್ ಕುಮಾರ್, ವೀರೇಶ್ ಜತೆ ಸೇರಿ ಗ್ರಾಹಕರನ್ನು ಗುರುತಿಸಿ, ಆಲೆಮನೆಗೆ ಕರೆತಂದು ಪ್ರಯೋಗಾಲಯದ ಸಿಬಂದಿ ಮೂಲಕ ಹೆಣ್ಣುಭ್ರೂಣ ಪತ್ತೆ ಹಚ್ಚುತ್ತಿದ್ದರು. ಬಳಿಕ ಮಾತಾ ಆಸ್ಪತ್ರೆಗೆ ಕಳುಹಿಸಿ ಗರ್ಭಪಾತ ಮಾಡಿಸುತ್ತಿದ್ದರು. ಅದಕ್ಕೆ ತುಳಸಿರಾಮ್ ಇಂತಿಷ್ಟು ಕಮಿಷನ್ ಪಡೆಯುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.