Advertisement

Feticide Case: 8 ವರ್ಷದಲ್ಲಿ 5 ಭ್ರೂಣ ಲಿಂಗ ಪತ್ತೆ ಪ್ರಕರಣ!

09:27 AM Dec 14, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇತ್ತೀಚೆಗೆ ತೀವ್ರ ಕಳವಳ ಮೂಡಿಸಿ ಚರ್ಚೆಗೆ ಗ್ರಾಸವಾಗಿರುವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಜಿಲ್ಲೆಯಲ್ಲಿ ಕೂಡ ವರದಿಯಾಗಿದ್ದು, ಕಳೆದ 8 ವರ್ಷದಲ್ಲಿ 5 ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.

Advertisement

ಹಣದ ಆಸೆಗೆ ಬಿದ್ದು ವೈದ್ಯರು ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಬದ್ಧತೆಯಿಂದ ಅನುಷ್ಠಾನಗೊಳಿಸುವುದರ ಬದಲು, ಅದನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ, ಜಿಲ್ಲೆಯಲ್ಲಿ ಕೆಲ ಖಾಸಗಿ ರೋಗ ನಿರ್ಣಯ ಮಾಡುವ ತಂತ್ರಗಳನ್ನು ತಿಳಿಸಿ ಕೊಡುವ ಪ್ರಯೋಗಾಲಯಗಳು ಕದ್ದು ಮುಚ್ಚಿ ಈ ಕರಾಳ ದಂಧೆಯಲ್ಲಿ ತೊಡಗಿಸಿಕೊಂಡಿವೆ.

ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಸಾಕಷ್ಟು ಬಲಿಷ್ಠವಾಗಿದ್ದರೂ, ಜಿಲ್ಲೆಯಲ್ಲಿ ಕದ್ದು ಮುಚ್ಚಿ ಭ್ರೂಣ ಲಿಂಗ ಪತ್ತೆ ಮಾಡುವ ಕಾರ್ಯ ನಡೆಯುತ್ತಲೇ ಇರುವುದನ್ನು ಇತ್ತೀಚೆಗೆ ಮಂಡ್ಯ ಮತ್ತಿತರರ ಜಿಲ್ಲೆಗಳಲ್ಲಿ ಹೇರಳ ಪ್ರಮಾಣದಲ್ಲಿ ನಡೆದಿರುವುದನ್ನು ಕೇಳಿದರೆ ನಿಜಕ್ಕೂ ಗಾಬರಿ ಹಾಗೂ ಅಘಾತವಾಗುತ್ತದೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಈ ಕೇಂದ್ರಗಳ ಮೇಲೆ ಮೇಲ್ವಿಚಾರಣೆ ನಡೆಸಿ ಆಗಾಗ ಕಾರ್ಯಾಚರಣೆ ಮೂಲಕ ತಪಾಸಣೆ ನಡೆಸುತ್ತಲೇ ಬರುತ್ತಿದ್ದರೂ, ಜಿಲ್ಲೆಯಲ್ಲಿ 8 ವರ್ಷದಲ್ಲಿ 5 ಪ್ರಕರಣಗಳು ಮಾತ್ರ ದಾಖಲಾಗಿದ್ದು, ಪರದೆಯ ಹಿಂದೆ ನಡೆಯುವ ಕರಾಳ ದಂಧೆಗಳಿಗೆ ಯಾರು ಕಡಿವಾಣ ಹಾಕುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

ದಾಖಲಾದ 5 ಪ್ರಕರಣಗಳು ಎಲ್ಲಲ್ಲಿ?: ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಡಿ ಜಿಲ್ಲೆಯಲ್ಲಿ ಕಳೆದ 8 ವರ್ಷದಲ್ಲಿ ಕೇವಲ 5 ಪ್ರಕರಣಗಳು ಮಾತ್ರ ದಾಖಲಾಗಿದ್ದು, ಆ ಪೈಕಿ ಚಿಂತಾಮಣಿ ತಾಲೂಕಿನಲ್ಲಿ 3, ಬಾಗೇಪಲ್ಲಿ ಹಾಗೂ ಗೌರಿಬಿದ ನೂರು ತಾಲೂಕಿನಲ್ಲಿ ತಲಾ 1 ಪ್ರಕರಣವನ್ನು ದಾಖಲು ಮಾಡಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. 2015ರಲ್ಲಿ 1, 2016ರಲ್ಲಿ 2, 2018ರಲ್ಲಿ 1, 2022ರಲ್ಲಿ 1 ಪ್ರಕರಣ ದಾಖಲುಗೊಂಡಿವೆಯೆಂದು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎಸ್‌. ಮಹೇಶ್‌ ಕುಮಾರ್‌ ತಿಳಿಸಿದರು.

67 ಕೇಂದ್ರಗಳು ನೋಂದಣಿ: ಜಿಲ್ಲೆಯಲ್ಲಿ ಪೂರ್ವ ಪರಿಕಲ್ಪನೆ ಮತ್ತು ಪ್ರಸವ ಪೂರ್ವ ರೋಗ ನಿರ್ಣದ ಕುರಿತು ತಿಳಿಸಿ ಕೊಡುವ ಬರೋಬ್ಬರಿ 67 ಕೇಂದ್ರಗಳು (ಡಯೋಗೋಸ್ಟಿಕ್‌) ನೋಂದಣಿ ಯಾಗಿ ದ್ದರೂ ಸದಸ್ಯ ಕಾರ್ಯ ನಿರ್ವಹಿಸು ತ್ತಿರುವುದು ಕೇವಲ 40 ಮಾತ್ರ ಮಾತ್ರ. ಉಳಿದಂತೆ 5 ಸ್ಕ್ಯಾನಿಂಗ್‌ ಕೇಂದ್ರಗಳು ಮುಚ್ಚಿದ್ದರೆ 1 ಸ್ಕ್ಯಾನಿಂಗ್‌ ಕೇಂದ್ರವನ್ನು ಆರೋಗ್ಯ ಇಲಾಖೆ ತನ್ನ ವಶಕ್ಕೆ ಪಡೆದಿದೆ. ಬಾಗೇಪಲ್ಲಿ 1, ಚಿಕ್ಕಬಳ್ಳಾಪುರ 5, ಗೌರಿಬಿದನೂರು 2, ಶಿಡ್ಲಘಟ್ಟದಲ್ಲಿ 5 ಸೇರಿ ಒಟ್ಟು 13 ಸ್ಕ್ಯಾನಿಂಗ್‌ ಕೇಂದ್ರಗಳು ಶಾಶ್ವತವಾಗಿ ಮುಚ್ಚಿವೆ. ಬಾಗೇಪಲ್ಲಿ 3, ಚಿಕ್ಕಬಳ್ಳಾಪುರ 10, ಚಿಂತಾಮಣಿ 3, ಗೌರಿಬಿದನೂರು 5, ಗುಡಿಬಂಡೆ 1, ಶಿಡ್ಲಘಘಟ್ಟ 5 ಸೇರಿ ಒಟ್ಟು 27 ಸ್ಕ್ಯಾನಿಂಗ್‌ ಕೇಂದ್ರಗಳು ಸದ್ಯ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Advertisement

ಜಿಲ್ಲೆಗೆ ಕಂಟಕವಾದ ಮದನಪಲ್ಲಿ, ಕದಿರಿ, ಅನಂತಪುರ: ಜಿಲ್ಲೆಯಲ್ಲಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಉಲ್ಲಂಘನೆ ಆಗದಂತೆ ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿ ಮೂಡಿಸಿದೆ. ಶೇ.90 ರಷ್ಟು ಕಡಿವಾಣ ಕೂಡ ಬಿದ್ದಿದೆ. ಆದರೆ ಜಿಲ್ಲೆಗೆ ಅಂಟಿಕೊಂಡಿರುವ ನೆರೆಯ ಆಂಧ್ರದ ಮದನಪಲ್ಲಿ, ಕದಿರಿ, ಅನಂತಪುರ, ಹಿಂದೂಪುರಕ್ಕೆ ಹೋಗಿ ಕೆಲವರು ಪ್ರಸವ ಪೂರ್ವಕ್ಕೂ ಮೊದಲು ಭ್ರೂಣ ಲಿಂಗ ಪತ್ತೆ ಮಾಡಿಸಿಕೊಂಡು ಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 40 ಸ್ಕ್ಯಾನಿಂಗ್‌ ಕೇಂದ್ರಗಳು ಕಾರ್ಯ ನಿರ್ವಹಣೆ: ಇನ್ನೂ ಜಿಲ್ಲೆಯಲ್ಲಿ ಪೂರ್ವ ಪರಿಕಲ್ಪನೆ ಮತ್ತು ಪ್ರಸವ ಪೂರ್ವ ರೋಗ ನಿರ್ಣದ ಕುರಿತು ತಿಳಿಸಿ ಕೊಡುವ ಬರೋಬ್ಬರಿ 40 ಸ್ಕ್ಯಾನಿಂಗ್‌ ಕೇಂದ್ರಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪೈಕಿ ಸರ್ಕಾರಿ ಆಸ್ಪತ್ರೆಗಳಲ್ಲಿ 8 ಕೇಂದ್ರಗಳಿದ್ದು ಬಾಗೇಪಲ್ಲಿ 1, ಚಿಕ್ಕಬಳ್ಳಾಪುರ 2, ಚಿಂತಾಮಣಿ 2, ಗೌರಿಬಿದನೂರು, ಗುಡಿಬಂಡೆ ಹಾಗೂ ಶಿಡ್ಲಘಟ್ಟದಲ್ಲಿ ತಲಾ 1 ಕೇಂದ್ರ ಇದ್ದರೆ ಖಾಸಗಿಯಾಗಿ ಕಾರ್ಯನಿರ್ವಹಿಸುತ್ತಿರುವ 32 ಕೇಂದ್ರಗಳ ಪೈಕಿ ಬಾಗೇಪಲ್ಲಿ 3, ಚಿಕ್ಕಬಳ್ಳಾಪುರ 13, ಚಿಂತಾಮಣಿಯಲ್ಲಿ 9, ಗೌರಿಬಿದನೂರಲ್ಲಿ 6, ಶಿಡ್ಲಘಟ್ಟದಲ್ಲಿ 1 ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲೆಯಲ್ಲಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಎಲ್ಲೂ ಉಲ್ಲಂಘನೆಯಾಗದಂತೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ಜಿಲ್ಲೆಯಲ್ಲಿ ಕಳೆದ 8 ವರ್ಷದಲ್ಲಿ 5 ಪ್ರಕರಣ ನಡೆದಿದ್ದು, ಈ ಸಂಬಂಧ ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಯೋಗಾಲಯಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.- ಡಾ.ಎಸ್‌.ಎಸ್‌.ಮಹೇಶ್‌ ಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next