Advertisement

ಹಬ್ಬದ ಪ್ರಯಾಣ ಬಲು ದುಬಾರಿ

11:06 AM Aug 30, 2019 | Team Udayavani |

ಬೆಳಗಾವಿ: ಊರು ಬಿಟ್ಟು ರಾಜಧಾನಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಜನರಿಗೆ ಹಬ್ಬಗಳು ಬಂದರೆ ಖಾಸಗಿ ಸಾರಿಗೆ ಸಂಸ್ಥೆಗಳು ನೀಡುವ ಶಾಕ್‌ ತಡೆದುಕೊಳ್ಳಲು ಆಗುವುದಿಲ್ಲ. ಹಬ್ಬಗಳು ಸಮೀಪಿಸುತ್ತಿದ್ದಂತೆ ಬಸ್‌ ದರ ವಿಪರೀತ ಹೆಚ್ಚಿಸುವ ಮೂಲಕ ಜನರ ಜೇಬಿಗೆ ಕತ್ತರಿ ಬೀಳುವುದಂತೂ ಗ್ಯಾರಂಟಿ.

Advertisement

ಉತ್ತರ ಕರ್ನಾಟಕದ ಬಹುತೇಕ ಯುವಕ, ಯುವತಿಯರು ರಾಜಧಾನಿ ಬೆಂಗಳೂರಿನಲ್ಲಿ ದುಡಿಯಲು ಹೋಗಿದ್ದಾರೆ. ವರ್ಷಕ್ಕೆ ಮೂರ್‍ನಾಲ್ಕು ಹಬ್ಬಗಳಿದ್ದಾಗ ಊರಿಗೆ ಬರಲು ಹಾತೊರೆಯುತ್ತಿರುತ್ತಾರೆ. ಆದರೆ ಸಾರಿಗೆ ಸಂಸ್ಥೆಗಳು ಬಸ್‌ ದರ ದಿಢೀರ್‌ ಹೆಚ್ಚಳ ಮಾಡುವ ಮೂಲಕ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಸಾಮಾನ್ಯ ದಿನಗಳಿಗಿಂತಲೂ ನಾಲ್ಕೈದು ಪಟ್ಟು ಹೆಚ್ಚು ಹಣ ನೀಡಿ ಊರಿಗೆ ಬರಬೇಕಾದ ಅನಿವಾರ್ಯತೆ ಈಗ ಉದ್ಭವವಾಗಿದೆ.ಹಬ್ಬ ಕಹಿ: ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ, ಗದಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಜನರು ಬೆಂಗಳೂರು, ಮೈಸೂರು, ಮಂಗಳೂರು, ತುಮಕೂರು ಮಹಾನಗರಗಳಲ್ಲಿ ದುಡಿಯುತ್ತಿದ್ದಾರೆ. ಗಣೇಶೋತ್ಸವ, ದೀಪಾವಳಿ, ದಸರಾ ಹಬ್ಬಗಳಿಗೆ ರಜೆ ಪಡೆದು ಊರಿಗೆ ಬರುತ್ತಿರುತ್ತಾರೆ. ರೈಲ್ವೆ ಹಾಗೂ ಸರ್ಕಾರಿ ಸಾರಿಗೆ ಬಸ್‌ಗಳು ಸೀಟ್ ಫುಲ್ ಆದಾಗ ಅನಿವಾರ್ಯವಾಗಿ ಖಾಸಗಿ ಸಾರಿಗೆಗಳನ್ನು ಅವಲಂಬಿಸಿದಾಗ ಬಸ್‌ ದರ 2-3 ಸಾವಿರ ರೂ. ಮುಟ್ಟಿರುತ್ತದೆ. ಸದ್ಯ ಗಣಪತಿ ಹಬ್ಬಕ್ಕಾಗಿ ಲಕ್ಷಾಂತರ ಜನರು ಬೆಂಗಳೂರಿನಿಂದ ತಮ್ಮ ಊರಿಗೆ ಬರುತ್ತಿರುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ಖಾಸಗಿ ಬಸ್‌ನವರು ಹಬ್ಬದ 2-3 ತಿಂಗಳ ಮುಂಚೆಯೇ ಹೆಚ್ಚು ದರ ನಿಗದಿ ಪಡಿಸುತ್ತಾರೆ. ಆನ್‌ಲೈನ್‌ನಲ್ಲಿ ಬಸ್‌ ಸೀಟ್ ಕಾಯ್ದಿರಿಸಲು ಎರಡು ತಿಂಗಳ ಮುಂಚೆ ಮಾಡಿದರೂ 2 ಸಾವಿರ ದರ ನಿಗದಿ ಪಡಿಸಿರುತ್ತಾರೆ. ಇದರಿಂದ ಜನರು ಈ ದರ ಮಾಫಿಯಾದಿಂದ ರೋಸಿ ಹೋಗಿದ್ದಾರೆ.

ರೈಲು ಸಂಚಾರ ಅನುಕೂಲ: ಈ ಬಸ್‌ ದರ ಹಾವಳಿಯಿಂದ ತಪ್ಪಿಸಲು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಕಳೆದ ಎರಡು ತಿಂಗಳಿಂದ ಬೆಳಗಾವಿ-ಬೆಂಗಳೂರು ನೂತನ ಎಕ್ಸಪ್ರಸ್‌ ರೈಲು ಆರಂಭಿಸಿದ್ದು, ಇದು ನಿತ್ಯ ಸಂಚರಿಸುತ್ತಿದೆ. ಇದರಿಂದಾಗಿ ಎಷ್ಟೋ ಜನರಿಗೆ ಅನುಕೂಲಕರವಾಗಿದೆ. ರಾಣಿ ಚನ್ನಮ್ಮ ಎಕ್ಸಪ್ರಸ್‌ ಹಾಗೂ ಹೊಸ ರೈಲು ಸಂಚಾರದಿಂದ ಹೆಚ್ಚಿನ ಸಂಖ್ಯೆಯ ಜನರು ಈ 2 ರೈಲುಗಳ ಮೇಲೆ ಅವಲಂಬನೆಯಾಗಿದ್ದಾರೆ. ಸರ್ಕಾರಿ ಬಸ್‌ ಹಾಗೂ ರೈಲುಗಳು ಭರ್ತಿ ಆಗಿದ್ದರಿಂದ ಜನರು ಖಾಸಗಿ ಬಸ್‌ಗಳಲ್ಲಿ ಬರುತ್ತಾರೆ. ಆದರೆ ಎಸಿ, ನಾನ್‌ ಎಸಿಗಳ ದರ ನೋಡಿದರೆ ತಲೆ ತಿರುಗಿ ಬೀಳುವುದು ಖಚಿತ. ಆದ್ದರಿಂದ ಖಾಸಗಿ ಬಸ್‌ ದರಗಳಿಗೆ ಕಡಿವಾಣ ಹಾಕಿದರೆ ಜನರಿಗೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಪ್ರಯಾಣಿಕರು.

 

•ಭೈರೋಬಾ ಕಾಂಬಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next