Advertisement
ಹಬ್ಬಗಳ ದಿನದಂದು ಎಲ್ಲವೂ ವರ್ಣರಂಜಿತವಾಗಿ, ಚೇತೋಹಾರಿಯಾಗಿ, ಬೆಳಗುತ್ತಿರಲಿ ಎಂಬುದು ಎಲ್ಲರ ಆಸೆ. ಹೊಸ ಬಟ್ಟೆ, ತೋರಣ, ತಿಂಡಿತಿನಿಸುಗಳ ಘಮಘಮದ ಜೊತೆಗೆ ಎಲ್ಲಕ್ಕಿಂತ ಹೆಚ್ಚು ಎದ್ದು ಕಾಣುವುದು ಮನೆಯ ಸಿಂಗಾರ! ಹಾಗಾಗಿ, ಮನೆಯನ್ನು ಹಬ್ಬಗಳ ಸಂಭ್ರಮಾಚರಣೆಗೆ ಸಜ್ಜುಗೊಳಿಸುವುದು ಮನೆಯ ವಿನ್ಯಾಸ ಮಾಡುವಾಗಲಿಂದ ಶುರು. ಆದರೆ ಮುಂದೆ ಪ್ರತಿ ಬಾರಿಯೂ ನಾವು ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ!
Related Articles
Advertisement
ಹಬ್ಬದಂದು ಒಂದಷ್ಟು ಫರ್ನಿಚರ್ ಅನ್ನು ನಿರಾಯಾಸವಾಗಿ ಈ ಸ್ಥಳಗಳಿಗೆ ಸಾಗಿಸಿದರೆ, ಮನೆಯೊಳಗೆ, ದೇವರ ಕೋಣೆಯ ಮುಂದೆ ಮುಖ್ಯವಾಗಿ ಹೆಚ್ಚು ಸ್ಥಳಾವಕಾಶ ಮಾಡಿಕೊಳ್ಳಬಹುದು. ಜೊತೆಗೆ ಒಳಾಂಗಣ ತುಂಬಿಹೋದರೆ, ಒಂದಷ್ಟು ಜನ ಹೊರಗಿರಿಸಿರುವ ಪಿಠೊಪಕರಣಗಳ ಮೇಲೂ ಕೂತುಕೊಳ್ಳಬಹುದು. ಇನ್ನು ಹೋಮದ ಹೊಗೆ, ಊದುಬತ್ತಿಯ ತೀಕ್ಷ್ಣವಾದ ವಾಸನೆಗೆ ಅಲರ್ಜಿ ಇರುವವರೂ ಕೂಡ ಗಾಳಿಗೆ ಹೆಚ್ಚು ತೆರೆದುಕೊಂಡಿರುವ ತೆರೆದ ಸ್ಥಳವನ್ನು ಉಪಯೋಗಿಸಬಹುದು.
ಕಿಟಕಿ ಮುಂದೆ- ಲೆಡ್ಜ್ ಅಗಲ ಮಾಡಿಕೊಳ್ಳಿ: ಈ ಹಿಂದೆ ಗೋಡೆಗಳು ಒಂದೂವರೆ ಇಟ್ಟಿಗೆ ದಪ್ಪ ಇರುತ್ತಿದ್ದಾಗ ಕಿಟಕಿ ಇಟ್ಟನಂತರವೂ ಒಳಗೆ ಕಡೆಪಕ್ಷ ಒಂದು ಅಡಿಯಷ್ಟಾದರೂ ಅದರ ಉದ್ದಕ್ಕೂ ಕೂರಲ ಸ್ಥಳ ದೊರೆಯುತ್ತಿತ್ತು. ಈ ಸ್ಥಳದಲ್ಲೇ ನಾಲ್ಕಾರು ಜನ ಆರಾಮವಾಗಿ ಕೂರಬಹುದಾಗಿತ್ತು. ಆದರೆ ಈಗ ಗೋಡೆಗಳ ದಪ್ಪ ಕೇವಲ ಆರು ಇಂಚು ಇರುವುದರಿಂದ ಹೆಚ್ಚು ಸ್ಥಳ ಸಿಗದ ಕಾರಣ,
ಕಿಟಕಿ ಕೂರಿಸುವಾಗ ಸುತ್ತಲೂ ಒಂದೂವರೆ ಅಡಿಯಷ್ಟಾದರೂ ಬಾಕ್ಸ್ ಮಾದರಿಯಲ್ಲಿ ಮೂರು ಇಂಚು ದಪ್ಪದ ಕಾಂಕ್ರಿಟ್ ಇಲ್ಲವೇ ಮೆಷ್‌ನಲ್ಲಿ ಮಾಡಿಕೊಳ್ಳಬಹುದು. ಈ ಗೂಡಿನಂಥ ಸ್ಥಳದ ಹೊರಗಿನ ಮುಖಕ್ಕೆ ಕಿಟಕಿಯನ್ನು ಕೂರಿಸಿದರೆ, ನಮಗೆ ನಿರಾಯಾಸವಾಗಿ ಒಂದೂಕಾಲು ಅಡಿಗಳಷ್ಟು ಅಗಲದ ಕೂರುವ ಸ್ಥಳ ಸಿಗುತ್ತದೆ. ಅದೇ ರೀತಿಯಲ್ಲಿ ಬೆಂಡೊ- ಉಬ್ಬು ಕಿಟಕಿಗಳನ್ನು ವಿನ್ಯಾಸ ಮಾಡಿಕೊಂಡರೂ ನಮಗೆ ಹೆಚ್ಚುವರಿ ಕೂರುವ ಸ್ಥಳ ದೊರೆಯುತ್ತದೆ.
ಹೆಚ್ಚುವರಿ ಸ್ಥಳಗಳನ್ನು ಸಜ್ಜುಗೊಳಿಸುವ ವಿಧಾನ: ಗಾರೆ ಪೂಸಿದ ನಂತರ ಬಣ್ಣ ಬಳಿದ ಸ್ಥಳಗಳ ಮೇಲೆ ಕೂರುವುದು ಹೆಚ್ಚು ಆರಾಮದಾಯಕವಲ್ಲ. ಹಾಗಾಗಿ, ಈ ಸ್ಥಳಗಳಿಗೆ ಕುಶನ್‌ಗಳನ್ನು ಅಳವಡಿಸಬಹುದು. ಆಯಾ ಆಕಾರ ಹಾಗೂ ಅಳತೆಗೆ ತಕ್ಕಂತೆ ಸೂಕ್ತ ಮೆತ್ತನೆಗಳನ್ನು ಹಾಕಿದರೆ ನೋಡಲು ಆಕರ್ಷಕವಾಗಿರುವಂತೆಯೇ ಕೂರಲೂ ಕೂಡ ಅನುಕೂಲಕರವಾಗಿರುತ್ತದೆ. ಕಿಟಕಿಗಳಿಗೆ ಸೊಳ್ಳೆ ಬಾಗಿಲುಗಳನ್ನು ಹಾಕಿದ್ದರೆ, ಈ ಮಸ್ಕಿಟೊ ಶಟರ್ಗಳನ್ನು ತೆರೆಯಲು ತೊಂದರೆ ಆಗದಂತೆ ಕಿಟಕಿಗಳನ್ನು ಲೆಡ್ಜ್ ಮಟ್ಟದಿಂದ ಕಡೇ ಪಕ್ಷ ಆರು ಇಂಚುಗಳಷ್ಟು ಎತ್ತರದಲ್ಲಿ ಇಡುವುದು ಉತ್ತಮ.
ಹಬ್ಬದ ದಿನಗಳಲ್ಲಿ ಹಾಗೂ ಇತರೆ ಸಂಭ್ರಮಾಚರಣೆಯ ದಿನಗಳಲ್ಲಿ ಮನೆಗೆ ಮೇಲಿನಿಂದ ಕೆಳಗಿನವರೆಗೂ, ಅದರ ಉದ್ದಗಲಕ್ಕೂ ಸೀರಿಯಲ್ ಲೈಟ್ಸ್ ಹಾಕುವುದು ಸಾಮಾನ್ಯ. ಅದಕ್ಕೆ ಬದಲಾಗಿ ಮನೆಯ ವಿನ್ಯಾಸ ಮಾಡುವಾಗಲೇ ಎಲಿವೇಷನ್‌ನಲ್ಲಿ ವಿಶೇಷವಾಗಿ ಹಾಕಲಾಗಿರುವ ಅಲಂಕಾರಿಕ ವಸ್ತುಗಳಾದ ಕ್ಲಾಡಿಂಗ್, ಫಿನಿಶ್, ಡಿಸೈನ್ ಗಳು ಎದ್ದು ಕಾಣುವಂತೆ ವಿವಿಧೆಡೆಗಳಿಂದ ಫೋಕಸ್ ಲೈಟ್‌ಗಳನ್ನು ಅಳವಡಿಸಬಹುದು. ಈ ದೀಪಗಳು ಮನೆಯ ಮುಮ್ಮುಖದಲ್ಲಿ ಏನೇನು ವಿಶೇಷವಾಗಿದೆಯೋ ಅವನ್ನೆಲ್ಲ ಹೈಲೈಟ್ – ಬೆಳಗಿಸುವ ಮೂಲಕ ಎತ್ತಿತೋರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಎಲ್ ಇ ಡಿ ಲೈಟ್‌ಗಳು ಜನಪ್ರಿಯವಾಗುತ್ತಿದ್ದು ಇವು ಹೆಚ್ಚೇನೂ ವಿದ್ಯುತ್ ಬಳಸುವುದಿಲ್ಲ. ಜೊತೆಗೆ ಇವನ್ನು ನೀರು ತಗುಲದಂತೆ ಗಾಜು ಹಾಕಿ ಗೋಡೆಗಳಲ್ಲಿ ಹುದುಗಿಸಿಟ್ಟರೂ ಹತ್ತಾರು ವರ್ಷ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲವು. ಎಲ್ಲವೂ ಬೆಳಗಬೇಕು ಎಂದೇನೂ ಇಲ್ಲ. ಕೆಲವು ಹೈಲೈಟ್‌ಗಳನ್ನು- ಹೆಚ್ಚು ಪ್ರಕಾಶಿಸುವಂತೆ ಮಾಡಿ, ಮಟ್ಟಸವಾಗಿರುವ ಪ್ರದೇಶಗಳಲ್ಲಿ ಬೆಳಕಿಲ್ಲದಿದ್ದರೂ ನಡೆಯುತ್ತದೆ. ಈ ಪ್ರದೇಶ ತಾವು ಹಿನ್ನೆಲೆಯಂತಿದ್ದು, ವಿನ್ಯಾಸಗಳನ್ನು ಮುನ್ನೆಲೆಗೆ ತರುತ್ತವೆ. ಮನೆಯ ಎತ್ತರ ಹಾಗೂ ವಿಸ್ತಾರ ಎದ್ದು ಕಾಣಬೇಕೆನ್ನುವುದು ಎಲ್ಲರ ಆಶಯ.
ಹಾಗಾಗಿ, ಕೊನೆಗಳನ್ನು ಹಾಗೂ ಎತ್ತರ ಸ್ಥಳಗಳು ಹೈಲೈಟ್ ಆಗುವಂತೆ ಪ್ರಕಾಶಮಾನವಾದ ಬೆಳಕು ಬೀಳುವಂತೆ ಲೈಟಿಂಗ್ ಡಿಸೈನ್ ಮಾಡಬಹುದು. ಅನೇಕ ಮನೆಗಳಲ್ಲಿ ಹೊರಾಂಗಣದ ಬೆಳಕು ವ್ಯವಸ್ಥೆಯ ಬಗ್ಗೆ ಹೆಚ್ಚು ಯೋಚಿಸಿರುವುದಿಲ್ಲ. ಇಂಥ ಕಡೆ ಸೀರಿಯಲ್ ಸೆಟ್‌ಗಳು ಅನಿವಾರ್ಯ ಅಗುತ್ತದೆ. ಆದರೆ ಹೀಗೆ ಮಾಡಿದಾಗ ಮನೆಯ ವಿಶೇಷತೆಗಳು ಎದ್ದು ಕಾಣುವುದಿಲ್ಲ. ಆದುದರಿಂದ ನಾವು ನಮ್ಮ ಮನೆಯ ವಿಶೇಷತೆಗಳು ಹೊರಗೂ ಕಾಣುವಂತೆ ಲೈಟಿಂಟ್ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ.
ಒಳಾಂಗಣದಲ್ಲಿ ಲೈಟಿಂಗ್ ವ್ಯವಸ್ಥೆ: ಸಾಮಾನ್ಯವಾಗಿ ಹಾಲ್ ಎಂದರೆ ಮಧ್ಯೆ ಒಂದು ದೀಪಪುಂಜ- ಶಾಂಡೆಲಿಯರ್, ಗೋಡೆಗಳ ಮೇಲೆ ವಿವಿಧ ನಮೂನೆಯ ಬ್ರಾಕೆಟ್ ಲೈಟ್ಸ್ – ಸಿಗಿಸುವುದು ಇದ್ದದ್ದೇ. ಇವೆಲ್ಲವನ್ನೂ ಮಾಮೂಲಿ ದಿನಗಳಲ್ಲಿ ಬಳಸುವುದು ಕಡಿಮೆ. ಹಾಗಾಗಿ, ವಿಶೇಷ ದಿನಗಳಲ್ಲಿ ಈ ಎಲ್ಲ ದೀಪಗಳೂ ಬೆಳಗಿದರೆ ಸಾಕಷ್ಟು ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತದೆ.
ಜೊತೆಗೆ ನಾವು ಹೆಚ್ಚುವರಿಯಾಗಿ ಕೆಲ ವಿನ್ಯಾಸ – ಡಿಸೈನ್‌ಗಳನ್ನೂ ಕೂಡ ಹೈಲೈಟ್ ಮಾಡಬಹುದು. ಪೂಜಾ ಕೋಣೆಗೆ ವಿಶೇಷ ಕೆತ್ತನೆಯ ಕೆಲಸ ಆಗಿದ್ದರೆ, ಇದನ್ನು ಎತ್ತಿತೋರಿಸಲು ಅಕ್ಕಪಕ್ಕದ ಗೊಡೆಗಳಿಂದ ಫೋಕಸ್ ಲೈಟ್‌ಗಳನ್ನು ಅಳವಡಿಸಬಹುದು. ಬಾಗಿಲಿನ ಮೇಲೆ ಅಳವಡಿಸಬೇಕಾದರೆ, ಕಡೇ ಪಕ್ಷ ಒಂದು ಅಡಿ ಹೊರಚಾಚಿದಂತೆ ಇರುವ ಬ್ರಾಕೆಟ್ ಫಿಟಿಂಗ್ ಬಳಸಿದರೆ, ನೆರಳು ಕಡಿಮೆ ಆಗಿ ವಿನ್ಯಾಸ ಸುಂದರವಾಗಿ ಮೂಡಿಬರುತ್ತದೆ.
ಮನೆಯಲ್ಲಿ ಕಲಾತ್ಮಕವಾದ ಪೇಂಟಿಂಗ್ – ಚಿತ್ರಗಳನ್ನು ಸುಂದರ ಚೌಕಟ್ಟುಗಳಲ್ಲಿ ಸಿಂಗರಿಸಿ ಗೋಡೆಗೆ ತಗುಲು ಹಾಕಿದ್ದರೆ, ಇವನ್ನೂ ಕೂಡ ಎತ್ತಿತೋರಿಸಲು ಸೂಕ್ತ ಫೋಕಸ್ ಲೈಟ್‌ಗಳನ್ನು ಬಳಸಬಹುದು. ಬೆಳಗುವ ಕಲೆ ಮನೆಯ ಒಳಾಂಗಣಕ್ಕೆ ವಿಶೇಷ ಮೆರಗು ತರುವುದರ ಜೊತೆಗೆ ನಾವು ಮೆರೆಸಲು ಬಯಸುವ ಅಂಶಗಳೂ ಚಿತ್ತಾಕರ್ಷಕವಾಗಿ ಮೂಡಿಬರುತ್ತದೆ.
ಹೆಚ್ಚಿನ ಮಾಹಿತಿಗೆ ಫೋನ್: 98441 32826
* ಆರ್ಕಿಟೆಕ್ಟ್ ಕೆ. ಜಯರಾಮ್