ಮಡಿಕೇರಿ : ಕೊಡವರ ವಿಶಿಷ್ಟ ಸಂಸ್ಕೃತಿ, ಆಚಾರ, ವಿಚಾರಗಳು ಅನಾವರಣಗೊಳ್ಳಲು ಕೊಡಗಿನ ಸಾಂಪ್ರದಾಯಿಕ ಹಬ್ಬಗಳು ಹೆಚ್ಚು ಸಹಕಾರಿಯಾಗಿವೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೊಡವ ಸಮಾಜಗಳ ಒಕ್ಕೂಟ ಮತ್ತು ಪೊಮ್ಮಕಡ ಕೂಟದ ವತಿಯಿಂದ ಬಾಳುಗೋಡಿನ ಕೊಡವ ಸಮಾಜದಲ್ಲಿ ”ಕೈಲ್ ಪೊಳ್ದ್” ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಾಕೃತಿಕ ವಿಕೋಪ ಸಂಭವಿಸಿದ ಕಾರಣ ಒಕ್ಕೂಟದ ವತಿಯಿಂದ ಪ್ರತಿವರ್ಷ ಆಚರಿಸುತ್ತಿದ್ದ ಹಬ್ಬವನ್ನು ರದ್ದುಗೊಳಿಸಲಾಗಿತ್ತು, ಆದರೆ ಈ ಬಾರಿ ಮಳೆ ಇದ್ದರೂ ಾಗಿ ಕೊಡಗಿನ ”ಕೈಲ್ ಪೊಳ್ದ್” ನ್ನು ಸರಳವಾಗಿ ಆಚರಿಸುವುದು ಅನಿವಾರ್ಯವಾಯಿತು ಎಂದರು. ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಉಳಿೆಸುವ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದರು. ಕೋವಿ, ಕತ್ತಿ ಸೇರಿದಂತೆ ಕೊಡವ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನೆಲ್ಲಕ್ಕಿಯಲ್ಲಿ ದೀಪವನ್ನಿಟ್ಟು, ಕುಲದೇವತೆ ಕಾವೇರಿ ಮಾತೆ, ಇಗ್ಗುತ್ತಪ್ಪ, ಈಶ್ವರ, ಕಾಳಿಮಾತೆಯನ್ನು ಪ್ರಾರ್ಥಿಸಿ, ಗುರು ಹಿರಿಯರನ್ನು ಸ್ಮರಿಸಲಾಯಿತು. ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಸ್ವಾಗತಿಸಿ, ಪೊಮ್ಮಕ್ಕಡ ಕೂಟದ ಗೌರವ ಕಾರ್ಯದರ್ಶಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ವಂದಿಸಿದರು. ಕೂಟದ ಅಧ್ಯಕ್ಷೆ ಇಮ್ಮಿ ಉತ್ತಪ್ಪ ಕಾರ್ಯಕ್ರಮ ನಿರ್ವಹಿಸಿದರು.