Advertisement

ಹಬ್ಬ ದಿಬ್ಬಣದ ಕಲಶಕನ್ನಡಿ

08:33 PM Aug 08, 2019 | mahesh |

ಭಾರತದಲ್ಲಿರುವಷ್ಟು ಹಬ್ಬಗಳ ಆಚರಣೆ ಬೇರೆಲ್ಲಿಯೂ ಇರಲಾರದು. ಉಳಿದ ಪ್ರದೇಶಗಳೆಲ್ಲ ಕೆಲವೇ ಹಬ್ಬಗಳಿಗೆ ಸೀಮಿತವಾದರೆ, ನಮ್ಮಲ್ಲಿ ವರ್ಷವಿಡೀ ಹಬ್ಬಗಳ ಸಂಭ್ರಮಾಚರಣೆ. ಸಾಂಪ್ರದಾಯಿಕ ಹಬ್ಬಗಳು ಹರುಷ ಹೊತ್ತ ಬದುಕಿನ ಅರ್ಥಕ್ಕೆ ಬಣ್ಣ ನೀಡುವ ಪುರುಷಾರ್ಥಗಳಾಗಿ ಕಾಣುತ್ತವೆ. ಈ ಹಬ್ಬಗಳ ದಿಬ್ಬಣದಲ್ಲಿ ಗೃಹಿಣಿ ಕಲಶಕನ್ನಡಿ ಹಿಡಿಯುತ್ತಾಳೆ. ಗೃಹಿಣಿ ಆಯಾಯ ಹಬ್ಬದ ವಿಶೇಷ ಖಾದ್ಯ ತಯಾರಿಸಿ ತುಂಬಿ ಸುವ ಪಾತ್ರೆಯೇ ಕಲಶವಾಗುತ್ತದೆ. ಹಾಗೆಯೇ ತನ್ನ ಮನೋಲೋಕದಲ್ಲಿ ಪ್ರವಹಿಸುವ ಜೀವೋತ್ಸಾಹವೆಂಬ ಗಂಗೆಗೆ ಹೊಸ ಉಡುಪು ತೊಡಿಸಿ ಕನ್ನಡಿ ಹಿಡಿಯುತ್ತಾಳೆ. ಹೀಗೆ ಕಲಶಕನ್ನಡಿ ಹಿಡಿದ ಗೃಹಿಣಿ ಹಬ್ಬಗಳ ಆಚರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾಳೆ.

Advertisement

ಪ್ರತಿ ಹಬ್ಬವೂ ಅಡಿಗೆ, ಆರಾಧನೆ, ಆಚರಣೆಯೆಂಬ ವೈಶಿಷ್ಟ್ಯದೊಂದಿಗೆ ತಳುಕು ಹಾಕಿಕೊಂಡಿದೆ. ಇವೆಲ್ಲ ವಿಶೇಷವಾಗುವುದು “ಗೃಹ’ ಎಂಬ ಗೃಹಿಣಿಯ ಹಿಗ್ಗಿನರಮನೆಯ ಒಡ್ಡೋಲಗದಲ್ಲಿ.

ಮನೆಯ ಮಾಸಲು ಛಾಯೆಗೆ ಹೊಸತನದ ಬಣ್ಣ ಹಚ್ಚಿ , ಸಂಪ್ರದಾಯ ದ ತೇರಿಗೆ ಸಂಭ್ರಮದ ರೆಕ್ಕೆ ತೊಡಿಸಿ, ದಿನದ ಸಡಗರದ ಮನೋರಥ ಮನೆತುಂಬ ಹೆಜ್ಜೆಗೆಜ್ಜೆಯ ಓಡಾಟದಲ್ಲಿ ತೊಡಗಿಕೊಂಡರೆ, ಕಂಬಕ್ಕೆ, ಬಾಗಿಲಿಗೆ ಕಟ್ಟಿದ ತಳಿರು-ತೋರಣದಲ್ಲಿ ಗೃಹಿಣಿಯ ಶ್ರದ್ಧೆ, ಉತ್ಸಾಹವೆಂಬ ಲವಲವಿಕೆಯ ಉಸಿರು ಹಸಿರಾಗಿ ಕಂಗೊಳಿಸಿದರೆ ಅದು “ಹಬ್ಬ’.

ಶ್ರಾವಣ ಮಾಸವೆಂದರೆ ಹಬ್ಬಗಳ ಹೆಬ್ಟಾಗಿಲು. ಹೊರಗೆ ಮುಗಿಲ ಮುತ್ತು ಮಳೆಯಾಗಿ ಭುವಿಯ ಚುಂಬಿಸುವ ಗತ್ತು, ಒಂದೇ ಸಮನೆ ಸುರಿವ ಸೋನೆಧಾರೆಗೆ ಧರೆ ತಂಪಾಗಿ, ಹಿತವಾಗಿ, ಹಸಿರ ಒಡಲ ಬಳ್ಳಿ ಬಯಲಲ್ಲಿ ಬಣ್ಣ ಬಣ್ಣದ ಹೂ ಹಣ್ಣಿನ ಚಿತ್ತಾರ ಅರಳಿಸುತ್ತ, ಪತಂಗ ದುಂಬಿಗಳ ಕಚಗುಳಿಯಾಟಕ್ಕೆ ಕಿಲಕಿಲ ನಗುವ ಕಾರಂಜಿ ಹೊಮ್ಮಿಸುತ್ತಿದ್ದರೆ, ಇಳೆಯ ಈ ಸಂಭ್ರಮ ಮನೆಯೊಳಗೆ “ಹಬ್ಬ’ವೆಂಬ ಹಾಡಾಗಿ ಪ್ರತಿಧ್ವನಿಸುತ್ತದೆ.

ಹಬ್ಬವೆಂದರೆ ಖುಷಿಯ ದಿಬ್ಬ. ಇದು ಮನೆಯ ಹಳಸಲನ್ನು ತೊಳೆದು, ತೆಗೆದು ಹೊಸತನವ ಪಸರಿಸುವ ದಿವ್ಯ ಮಾಯೆ. ಮನಸು ಮನಸನ್ನು ಬೆಸೆವ ಸೌಗಂಧಿಕೆ. ಎದೆಯ ಉಲ್ಲಾಸ, “ಹಬ್ಬ’ ಎಂಬ ಶರಗಳಾಗಿ, ಮನದ ಬತ್ತಳಿಕೆಯಲ್ಲಿ ಸ್ಥಾನ ಪಡೆದುಕೊಂಡು ಒಂದೊಂದಾಗಿ ಪುಟಿಯುತ್ತ, ಚಿಮ್ಮುತ್ತ ಒಂದರ ಹಿಂದೆ ಒಂದು ಸರದಿಯಾಗಿ ದಿಬ್ಬಣದ ನೆಂಟರಂತೆ, ಜಾತ್ರೆಯ ತೇರಿನಂತೆ, ಪೂರ್ಣಕುಂಭ ಸ್ವಾಗತಕ್ಕೆ ನಿಂತ ಸುಮಂಗಲೆಯರಂತೆ ತನ್ನದೇ ಗಂಭೀರ ನಡಿಗೆಯಲ್ಲಿ ಬರುತ್ತಿದ್ದರೆ ಅದರ ವಿಶೇಷತೆ ಸಾಕಾರಗೊಳ್ಳುವುದು ಗೃಹಿಣಿಯಿಂದ. ಒಂದೊಂದು ಹಬ್ಬಕ್ಕೂ ಒಂದೊಂದು ವಿಶೇಷ ತಿನಿಸು-ದಿರಿಸು. ಒಂದೊಂದು ಸಂದೇಶ. ನೀತಿ-ನಿಯಮ, ಮಡಿ, ಅರ್ಥಗಳ ಪ್ರಾಮುಖ್ಯದ ಪ್ರಾತ್ಯಕ್ಷಿಕೆ. ಮನೆಯಲ್ಲಿ ಮಕ್ಕಳು, ದೊಡ್ಡವರೆಲ್ಲ ಒಂದಾಗಿ ತಿಂದು, ಉಟ್ಟು , ಕಥೆ ಕೇಳಿ, ಕನಸು ಹಂಚಿಕೊಳ್ಳುವ ಪರ್ವಕಾಲ ತೆರೆಯುವುದೇ ಈ ಹಬ್ಬದುಬ್ಬರದಲ್ಲಿ. ಗುಡುಗು, ಸಿಡಿಲಿನ ಅಬ್ಬರವಿಲ್ಲದ ಶಾಂತ ವರ್ಷಧಾರೆಯ ಕಡ್ಡಿ ಸೋನೆಯ ಸಂಗೀತಕ್ಕೆ ಶುೃತಿಯಾಗಿ ಬರುತ್ತವೆ ಒಂದೊಂದೇ ಹಬ್ಬಗಳು.

Advertisement

ನಮ್ಮೆದುರು ಹರಡಿ ನಮ್ಮ ನೋಟದೊಳಗಿಂದ ಒಳಗಿಳಿದು ಮೈಮನವನ್ನೆಲ್ಲ ಪುಳಕಗೊಳಿಸುವ ಪ್ರಕೃತಿಯ ಆರಾಧನೆ ಮೊದಲು. ಇದರ ಸಂಕೇತವಾಗಿ ಬರುವ ಶ್ರಾವಣದ ಮೊದಲ ಹಬ್ಬ ನಾಗರಪಂಚಮಿ. ಅರಣ್ಯವೆಂಬ ಸಸ್ಯ ಸಂಪತ್ತಿನಲ್ಲಿ ಆಶ್ರಯ ಪಡೆದ ಸರ್ಪವೆಂಬ ಸರೀಸೃಪಗಳನ್ನು ಆರಾಧಿಸುವುದು ನಿಸರ್ಗ ಪ್ರೀತಿಯ ಪೋಷಣೆ, ರಕ್ಷಣೆಯ ಪ್ರತೀಕ. ನಾಗರಪಂಚಮಿಯಂದು ನಾಗನ ಕಲ್ಲುಗಳಿಗೆ ಹಾಲೆರೆಯುವುದು, ಅರಸಿನ, ಸೀಯಾಳದ ಅಭಿಷೇಕದೊಂದಿಗೆ ಕೇದಗೆ, ಸುರಗಿ, ಸಿಂಗಾರದ ಪುಷ್ಪಗಳನ್ನೆಲ್ಲ ಅರ್ಪಿಸಿ ಧನ್ಯರಾಗುವುದೆಂದರೆ ಪರೋಕ್ಷವಾಗಿ “ಗೋವು’ ಎಂಬ ಕಾಮಧೇನುವಿಗೆ, ತೆಂಗೆಂಬ ಕಲ್ಪವೃಕ್ಷಕ್ಕೆ , ಹೂಬಿಡುವ ವನರಾಜಿಗಳಿಗೆಲ್ಲ ಅರಿತೊ ಅರಿಯದೆಯೊ ನಾವು ಭಕ್ತಿಪೂರ್ವಕವಾಗಿ ಗೌರವ ಸಲ್ಲಿಸುತ್ತೇವೆ. ಆ ಮೂಲಕ ಪರಿಸರ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಿರುತ್ತೇವೆ.

ಶ್ರಾವಣದ ಗೃಹಿಣಿಯ ಬಹುಸಂಭ್ರಮದ ಹಬ್ಬವೆಂದರೆ ವರಮಹಾಲಕ್ಷ್ಮಿ. ಆ ದಿನ ಎಲ್ಲ ಮುತ್ತೈದೆಯರೂ ಅರಸಿನ-ಕುಂಕುಮದ ಮುಖಮುದ್ರೆಯಲ್ಲಿ, ತಲೆತುಂಬ ಹೂವು, ಕೊರಳ ತುಂಬ ಆಭರಣಗಳು, ಮೈತುಂಬ ರೇಷ್ಮೆ ಜರಿ ಸೀರೆಯ ಸೊಬಗಿನಲ್ಲಿ ಅಪ್ಪಟ ಭಾರತೀಯ ಸಂಸ್ಕೃತಿಯ ಮೂರ್ತ ರೂಪಿಣಿಯರಾಗುತ್ತಾರೆ. ಈ ಸಮಯದಲ್ಲಿ ಗೃಹಿಣಿಗೆ ಪುರುಸೊತ್ತಿಲ್ಲದಷ್ಟು ಕಾರ್ಯಬಹುಳ್ಯ. ಮನೆಯನ್ನೆಲ್ಲ ಶುಚಿಗೊಳಿಸಿ, ಮನೆಯ ಹೊಸ್ತಿಲನ್ನು ರಂಗೋಲಿಯಿಂದ ಸಿಂಗರಿಸಿ, ಪೂಜೆ ಮಾಡಿ, ದೇವರ ಕೋಣೆಯನ್ನೆಲ್ಲ ಗುಡಿಸಿ, ಸಾರಿಸಿ, ದೇವರ ವಿಗ್ರಹವನ್ನೆಲ್ಲ ಸ್ವತ್ಛಗೊಳಿಸಿ, ದೀಪ ಬೆಳಗಿ, ಧೂಪ ಹಚ್ಚಿ , ಆರತಿಯೊಂದಿಗೆ ಪೂಜೆ ಸಂಪನ್ನಗೊಳಿಸುತ್ತಾಳೆ. ಅಕ್ಕಪಕ್ಕದ ಮನೆಯವರನ್ನು , ಗೆಳತಿಯರನ್ನೆಲ್ಲ ಕರೆದು, ಹಾಡು-ರಂಗೋಲಿಯೊಂದಿಗೆ ಸಂಭ್ರಮಿಸಿ ಅವರಿಗೆಲ್ಲ ಅರಸಿನ-ಕುಂಕುಮ, ರವಿಕೆ ಕಣ, ಬಾಗಿನವನ್ನೆಲ್ಲ ನೀಡಿ, ನಮಸ್ಕರಿಸಿ ತಾನು ಪಾವನೆಯಾದೆನೆಂಬ ಧನ್ಯತಾಭಾವವನ್ನು ಹೊತ್ತು ತೃಪ್ತಿಪಡುತ್ತಾಳೆ. ಈ ಬಗೆಯ ಆಚರಣೆಯ ಪರಿಧಿಯಲ್ಲಿ ಗೃಹಿಣಿಯ ದೈಹಿಕ ದೃಢತೆ ಹಾಗೂ ಮಾನಸಿಕ ಸಮತೋಲನ ಎರಡೂ ಸಮಾನಾಂತರವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತವೆ.

ಇದಾಗಿ ಬರುವ ಗೋಕುಲಾಷ್ಟಮಿ ಗೃಹಿಣಿಯ ಮಾತೃ ವಾತ್ಸಲ್ಯವನ್ನು ಜಾಗ್ರತಗೊಳಿಸುವ ಶುಭಕಾಲ. ಅಮ್ಮಂದಿರೆಲ್ಲ ತಮ್ಮ ಚಿಕ್ಕ ಮಕ್ಕಳೊಂದಿಗೆ ಪ್ರಾಯಪ್ರಬುದ್ಧರಾದ ಮಕ್ಕಳನ್ನು “ಬಾಲಕೃಷ್ಣ’ರೆಂದು ಕಲ್ಪಿಸಿ ಮುದ್ದುಗರೆಯುವ ಹಬ್ಬ ಕೃಷ್ಣ ಜನ್ಮಾಷ್ಟಮಿ. ಕೃಷ್ಣನಿಗೆ ಬೆಣ್ಣೆ ತಿನ್ನಿಸುವ ಯಶೋದೆ ತಮ್ಮ ಮಕ್ಕಳಿಗೆ ಪುಷ್ಟಿದಾಯಕ ಆಹಾರದಲ್ಲಿ ಪ್ರೀತಿಯೆಂಬ ಜೀವಾಂಶವನ್ನು ಸಮೃದ್ಧವಾಗಿ ತುಂಬಿಸಿ ನೀಡಿ ಆರೋಗ್ಯವಂತ ಜೀವದ ಕುಡಿಗಳನ್ನು ರೂಪಿಸುವುದು ಹೇಗೆ ಎಂದು ನಿರೂಪಿಸುವ ಆದರ್ಶ ತಾಯಿಯಾಗಿ ನಮ್ಮೆದುರು ಕಾಣಿಸಿಕೊಳ್ಳುತ್ತಾಳೆ.

ಇನ್ನು ಮನೆಗೆ ಸೀಮಿತವಾದ ಹಬ್ಬ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಾರ್ವಜನಿಕವಾಗಿ ಸಮುದಾಯ ಹಬ್ಬವಾಗಿ ರೂಪುಗೊಂಡಿತು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಗಣೇಶ ಚೌತಿ. ಒಂದೊಮ್ಮೆ ದೇವರು, ನಾವು ಇಟ್ಟ ನೈವೇದ್ಯವನ್ನೆಲ್ಲ ತಿಂದುಬಿಟ್ಟರೆ ಹೇಗಿರುತ್ತದೆ ಎನ್ನುವುದಕ್ಕೆ, ಉಬ್ಬಿದ ಹೊಟ್ಟೆಯೊಂದಿಗೆ, ಲಾಡನ್ನೂ ಸೊಂಡಿಲಿನಲ್ಲಿ ಹಿಡಿದು, ಅಭಯಹಸ್ತದಿಂದ, ಕ್ಷಿಪ್ರವರದನಾಗಿ, ಆತ್ಮೋನ್ನತಿಯ ಗತಿಯನ್ನು ದರ್ಶಿಸುವ ಲಂಬೋದರ ದೃಶ್ಯರೂಪಕವಾಗುತ್ತಾನೆ. ಈ ನಿಟ್ಟಿನಲ್ಲಿ ಮನೆಯ ಗೃಹಿಣಿ ಅತಿ ಹೆಚ್ಚು ವೈವಿಧ್ಯದ ಕಜ್ಜಾಯ, ಪಾಯಸವನ್ನೆಲ್ಲ ತಯಾರಿಸುವ ಹಬ್ಬವೆಂದರೆ ಗೌರಿಗಣೇಶ ಹಬ್ಬ. ಮಿಕ್ಸಿ , ಗ್ರೈಂಡರ್‌ ಇಲ್ಲದ ನಮ್ಮಜ್ಜಿಯ ಕಾಲದಲ್ಲಿ ಕುಟ್ಟುವುದು, ಬೀಸುವುದು, ಕಡೆಯುವುದು, ಸೌದೆ ಒಲೆಯಲ್ಲಿ ಬೇಯಿಸುವುದು, ಕುದಿಸುವುದು. ಅಬ್ಟಾ ! ಅಮ್ಮ ಹೇಳುವುದುಂಟು, ಅಜ್ಜಿಯ ಕಾಲದಲ್ಲಿ ನೀರನ್ನೂ ಕುಡಿಯದೆ ಮಡಿಯಲ್ಲಿ ಮನೆಯ ಗೃಹಿಣಿಯರು ಮೋದಕ, ಉಂಡೆ, ಪಂಚಕಜ್ಜಾಯ, ಪಾಯಸ, ಅಂಬೊಡೆ, ಪತ್ರೊಡೆ, ಕೊಟ್ಟಿಗೆ, ಸಾಸಿವೆ, ಸಾರು-ಸಾಂಬಾರು, ಪಲ್ಯ… ಎಲ್ಲ ತಯಾರಾಗಿ ನೈವೇದ್ಯ ದೇವರಿಗಿಟ್ಟು, ಮನೆಮಂದಿ ಎಲ್ಲರೂ ಮಧ್ಯಾಹ್ನದ ಊಟ ಮಾಡುವಾಗ ಅಪರಾಹ್ನ 4 ಗಂಟೆ. ಇದನ್ನು ಸಾಧ್ಯವಾಗಿಸುವ ಆ ಕಾಲದ ಗೃಹಿಣಿಯರ ಮನೋದಾಡ್ಯತೆ ಹಾಗೂ ದೈಹಿಕ ಕ್ಷಮತೆಗೆ ಹಬ್ಬವೇ ಹುಬ್ಬೇರಿಸುತ್ತಿರಬಹುದು.

ಇನ್ನು ನವರಾತ್ರಿಯಂತೂ ಸ್ತ್ರೀ, ಹೆಣ್ಣು , ಮಹಿಳೆ, ಗೃಹಿಣಿ, ಮಡದಿ, ಮಾತೆ ಎಂಬ ಎಲ್ಲಾ ಪಾತ್ರವನ್ನೂ ಮೀರಿ, ಆಕೆ ಋಣಾತ್ಮಕ ದುಷ್ಟಶಕ್ತಿಯನ್ನು ಧೂಳೀಪಟಗೊಳಿಸುವ “ಕಾಳಿ’ಯೂ ಆಗಬಲ್ಲಳು ಎಂಬ ಬಲವಾದ ಸಂದೇಶದೊಂದಿಗೆ ಗೃಹಿಣಿಯ ಶ್ರದ್ಧೆ , ಆತ್ಮವಿಶ್ವಾಸವನ್ನು ವಿಜಯದಶಮಿ ಆಚರಣೆಯೊಂದಿಗೆ ಅರ್ಥಪೂರ್ಣವಾಗಿಸುವ ವಿಶೇಷ ಹಬ್ಬ.

ಕನಸು ಸಾಕಾರವಾಗುವ ಬೆಳಕಿಗಾಗಿ, ಗೃಹಿಣಿ ಮನದ ಬಯಕೆಗಳ ಹಣತೆ ಬೆಳಗಿಸಿ, ಖುಷಿಯ ಚಿಟಿಕೆ ಬಾರಿಸಿ, ಪಟಾಕಿ, ನಕ್ಷತ್ರ ಕಡ್ಡಿ ಸಿಡಿಸಿ ಸಂಭ್ರಮಿಸುವ ಹಬ್ಬ ದೀಪಾವಳಿ. ಕಷ್ಟದ ಕತ್ತಲೆ ಕಳೆದು, ಗೃಹಿಣಿ ಆನಂದದ ಬೆಳಕಿಗೆ ಮೈಯೊಡ್ಡಿ, ನಿರಾಳತೆಯಲ್ಲಿ ಮೀಯುವ ಜುಗಲ್‌ಬಂದಿ ಹೊನಲಿನ ನಾದ ದೀಪಾವಳಿ.

ವಿಜಯಲಕ್ಷ್ಮಿ ಶ್ಯಾನ್‌ಭೋಗ್‌

Advertisement

Udayavani is now on Telegram. Click here to join our channel and stay updated with the latest news.

Next