Advertisement

ಪಿಒಎಸ್‌ನಿಂದ ಗೊಬ್ಬರ ಮಾರಾಟ

05:47 PM Jun 03, 2018 | Team Udayavani |

ಹಾವೇರಿ: ರಸಗೊಬ್ಬರ ದುರುಪಯೋಗ, ಅಕ್ರಮ ದಾಸ್ತಾನು, ಕೃತಕ ಅಭಾವ ತಡೆಯುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಬಯೋಮೆಟ್ರಿಕ್‌ ದಾಖಲೆ ಮೂಲಕ ರೈತರಿಗೆ ರಸಗೊಬ್ಬರ ವಿತರಿಸುವ ನೂತನ ಪದ್ಧತಿ ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಂಡಿದೆ.

Advertisement

ಕೇಂದ್ರ ಸರ್ಕಾರದ ಈ ಹೊಸ ಪದ್ಧತಿಯಿಂದ ರೈತರು ತಮ್ಮ ಆಧಾರ್‌ ಕಾರ್ಡ್‌ನೊಂದಿಗೆ ಗೊಬ್ಬರದ ಅಂಗಡಿಗೆ ಹೋಗಿ ಅಲ್ಲಿ ಆಧಾರ್‌ ನಂಬರ್‌ ದಾಖಲಿಸಿ, ಅಲ್ಲಿರುವ ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಯಂತ್ರದಲ್ಲಿ ತಮ್ಮ ಬೆರಳಿನ ಮುದ್ರೆ ಒತ್ತಿಯೇ ತಮಗೆ ಬೇಕಾದ ರಸಗೊಬ್ಬರ
ಪಡೆಯಬೇಕಾಗಿದೆ. ಈ ಹಿಂದೆ ಬೇಕಾಬಿಟ್ಟಿಯಾಗಿ ಗೊಬ್ಬರ ಮಾರಾಟ, ದಾಸ್ತಾನು, ಖರೀದಿ ಮಾಡಿ ಕೃತಕ ಅಭಾವ ಸೃಷ್ಟಿಸುವುದು ಸಾಮಾನ್ಯವಾಗಿತ್ತು.

ಗೊಬ್ಬರ ಸಿಗದೆ ಗಲಾಟೆ, ನೂಕುನುಗ್ಗಲು ಕಂಡುಬರುತ್ತಿತ್ತು. ರಸಗೊಬ್ಬರಕ್ಕಾಗಿಯೇ ಹೋರಾಟ ಮಾಡುತ್ತಿದ್ದಾಗ 2008ರಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್‌ ನಡೆದು ಇಬ್ಬರು ರೈತರ ಸಾವು ಸಂಭವಿಸಿತ್ತು. ರಸಗೊಬ್ಬರದ ಅಕ್ರಮ ತಡೆದು, ರೈತರಿಗೆ ಅಗತ್ಯ ರಸಗೊಬ್ಬರ ಪೂರೈಸುವ ದೃಷ್ಟಿಯಿಂದ ಸರ್ಕಾರ ತಂದಿರುವ ಈ ನೂತನ ಪದ್ಧತಿ ರೈತರಿಗೆ ಹೆಚ್ಚು ಅನುಕೂಲಕರವಾಗಿದೆ.

ಬಯೋಮೆಟ್ರಿಕ್‌ ಕಡ್ಡಾಯ: ರಸಗೊಬ್ಬರ ಮಾರಾಟಕ್ಕಾಗಿ ಚಿಲ್ಲರೆ ಗೊಬ್ಬರ ಮಾರಾಟಗಾರರು ಸಹ ಪಿಒಎಸ್‌ ಯಂತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಆ ಮೂಲಕವೇ ಗೊಬ್ಬರ ಮಾರಾಟ ಮಾಡಬೇಕಾಗಿದೆ. ಬಯೋಮೆಟ್ರಿಕ್‌ ದಾಖಲೆ ಪಡೆದುಕೊಂಡು ಮಾರಾಟ ಮಾಡಿದರೆ ಮಾತ್ರ ಅಂಗಡಿಯವರಿಗೆ ಸಹಾಯಧನ ಸಿಗಲು ಸಾಧ್ಯ. ಕೇಂದ್ರ ಸರ್ಕಾರದ ಸೂಚನೆಯಂತೆ ಚಿಲ್ಲರೆ ಮಾರಾಟಗಾರರು ಪಿಒಎಸ್‌ ಮೂಲಕ ಮಾರಾಟ ಮಾಡಲು ನಿರಾಕರಿಸಿದಲ್ಲಿ ಸರ್ಕಾರದ ಸೂಚನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ನಿರ್ಧರಿಸಿ ಆ ಮಾರಾಟಗಾರರ ಪರವಾನಗಿ ರದ್ದುಗೊಳಿಸಬಹುದಾಗಿದೆ. ಈ ರಸಗೊಬ್ಬರ ಮಾರಾಟಗಾರರು ಸಹ ಪಿಒಎಸ್‌ ಯಂತ್ರ ಹೊಂದುವುದು ಅನಿವಾರ್ಯವಾಗಿದೆ.

430 ಪಿಒಎಸ್‌ ವಿತರಣೆ: ಕೇಂದ್ರ ಸರ್ಕಾರದಿಂದಲೇ ಜಿಲ್ಲೆಯ ಖಾಸಗಿ ಮಾರಾಟಗಾರರು, ಸಹಕಾರಿ ಸಂಘಗಳಿಗೆ 430 ಪಿಒಎಸ್‌ ಯಂತ್ರಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 185 ಸಹಕಾರಿ ಸಂಘ, 396 ಖಾಸಗಿ ಮಾರಾಟಗಾರರು ಸೇರಿ ಒಟ್ಟು 581 ಗೊಬ್ಬರ ಮಾರಾಟಗಾರರಿದ್ದಾರೆ. ಇವರಲ್ಲಿ 430 ಮಾರಾಟಗಾರರಿಗೆ ಪಿಒಎಸ್‌ ಯಂತ್ರಗಳನ್ನು ವಿತರಿಸಲಾಗಿದ್ದು, 40 ಯಂತ್ರಗಳು ದಾಸ್ತಾನು ಇದೆ. ಹಾವೇರಿ ತಾಲೂಕಿನಲ್ಲಿ 76, ಹಾನಗಲ್ಲನಲ್ಲಿ 71, ಸವಣೂರಿಗೆ 35, ಶಿಗ್ಗಾವಿಗೆ 41, ಬ್ಯಾಡಗಿಗೆ 36, ಹಿರೇಕೆರೂರಗೆ 85, ರಾಣಿಬೆನ್ನೂರ ತಾಲೂಕಿನಲ್ಲಿ 86 ಯಂತ್ರಗಳನ್ನು ವಿತರಿಸಲಾಗಿದೆ.

Advertisement

ಗೊಬ್ಬರ ದಾಸ್ತಾನು: ಮುಂಗಾರು ಹಂಗಾಮಿಗೆ ಜಿಲ್ಲೆಗೆ ಒಟ್ಟು 86346 ಟನ್‌ ರಸಗೊಬ್ಬರ ಹಂಚಿಕೆಯಾಗಿದ್ದು, ಯೂರಿಯಾ 45100 ಟನ್‌, ಡಿಎಪಿ 14900 ಟನ್‌, ಎಂಒಪಿ 4271 ಟನ್‌, ಕಾಂಪ್ಲೆಕ್ಸ್‌ 21300, ಎಸ್‌ಎಸ್‌ಪಿ 775 ಟನ್‌ ಗೊಬ್ಬರ ಅವಶ್ಯವಿದ್ದು, ಈವರೆಗೆ ಒಟ್ಟು 35805 ಟನ್‌ ರಸಗೊಬ್ಬರ ಸರಬರಾಜಾಗಿದೆ. ಈವರೆಗೆ ಖಾಸಗಿ ಮಾರಾಟಗಾರರ ಮೂಲಕ 746 ಟನ್‌, ಸಹಕಾರಿ ಸಂಘಗಳ ಮೂಲಕ 238 ಗೊಬ್ಬರ ಮಾರಾಟ ಮಾಡಲಾಗಿದೆ.

ಬಯೋಮೆಟ್ರಿಕ್‌ ಕಡ್ಡಾಯ
ರೈತರು ಪಿಒಎಸ್‌ ಯಂತ್ರದಲ್ಲಿ ಹೆಬ್ಬೆರಳು ಮುದ್ರೆ ಒತ್ತಿಯೇ ಗೊಬ್ಬರ ಪಡೆಯಬೇಕು. ಜಿಲ್ಲೆಗೆ ಬಂದಿರುವ 470 ಯಂತ್ರಗಳಲ್ಲಿ 430 ಯಂತ್ರಗಳನ್ನು ಮಾರಾಟಗಾರರಿಗೆ ಹಂಚಿಕೆ ಮಾಡಲಾಗಿದೆ. ರೈತರು ಆಧಾರ್‌ ಕಾರ್ಡ್‌ ತಂದು ಹೆಬ್ಬಟ್ಟು ಒತ್ತಿ ಅಗತ್ಯವಿದ್ದಷ್ಟು ಗೊಬ್ಬರ ಖರೀದಿಸಬಹುದು. ವ್ಯಾಪಾರಸ್ಥರು ಸಹ ರೈತರಿಗೆ ಪಿಒಎಸ್‌ ಯಂತ್ರದ ಮೂಲಕವೇ ಗೊಬ್ಬರ ಮಾರಾಟ ಮಾಡಿದ ಬಳಿಕ ಆಯಾ
ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಸಹಾಯಧನ ಹಣ ಪಾವತಿಯಾಗಲಿದೆ.
ವಿ. ಸದಾಶಿವ,
ಕೃಷಿ ಜಂಟಿ ನಿರ್ದೇಶಕರು, ಹಾವೇರಿ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next