Advertisement
ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹಗೊಂಡ ಕಸವನ್ನು ತ್ಯಾಜ್ಯ ಸಂಸ್ಕಾರಣ ಘಟಕದಲ್ಲಿ ಹಸಿ ಹಾಗೂ ಒಣ ಕಸವನ್ನಾಗಿ ಮಾರ್ಪಾಟು ಮಾಡಲಾಗುತ್ತದೆ. ಬಳಿಕ ಹಸಿ ಕಸದಿಂದ ಗೊಬ್ಬರ ತಯಾರಿಸುವ ಕಾರ್ಯ ಮಾಡುತ್ತಿದೆ. ಪ್ರಾರಂಭದಲ್ಲಿ ಪುರಸಭಾ ಕಚೇರಿಯ ಹಿಂಭಾಗದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಪ್ರಸ್ತುತ ಸಂಸ್ಕರಣ ಘಟಕದಲ್ಲಿ ಗೊಬ್ಬರ ತಯಾರಿಕೆ ನಡೆಯುತ್ತಿದೆ.
ಪುರಸಭಾ ವ್ಯಾಪ್ತಿಯಲ್ಲಿ ಸದ್ಯಕ್ಕೆ ಪ್ರತಿದಿನ 7ರಿಂದ 8 ಟನ್ ಕಸ ಸಂಗ್ರಹ ವಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳಲ್ಲೂ ಕಸ ಸಂಗ್ರಹ ಆರಂಭಗೊಂಡಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಲಿದೆ. ಹಲವು ಸಮಯಗಳಿಂದ ಪ್ರಾಯೋಗಿಕ ನೆಲೆಯಲ್ಲಿ ಗೊಬ್ಬರ ತಯಾರಿ ಮಾಡಲಾಗುತ್ತಿತ್ತು. ಹಲವು ತಿಂಗಳ ಹಿಂದೆ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಮಾರ್ಗದರ್ಶನದಲ್ಲಿ ಕಚೇರಿಯ ಹಿಂಭಾಗದಲ್ಲಿ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿತ್ತು. ಇದೀಗ ಘಟಕದಲ್ಲಿ ಸುಮಾರು 15 ಟನ್ ಗೊಬ್ಬರ ಸಂಗ್ರಹವಿದ್ದು, ಅದರ ಮಾರಾಟಕ್ಕೆ ಸಿದ್ಧತೆ ನಡೆಸಿದೆ. ಗೊಬ್ಬರದ ಮೌಲ್ಯ ನಿಗದಿ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುರಸಭಾ ಆಡಳಿತ ಮಂಡಳಿ ಚರ್ಚೆ ನಡೆಸಿ ಪ್ರತಿ ಕೆಜಿ ಗೊಬ್ಬರಕ್ಕೆ 5 ರೂ.ಗಳಂತೆ ದರ ನಿಗದಿ ಮಾಡಿದೆ. ಗೊಬ್ಬರವನ್ನು ಬ್ಯಾಗ್‌ಗಳಾಗಿ ಮಾರಾಟ ಮಾಡಬೇಕೇ ಅಥವಾ ಒಟ್ಟು ರಾಶಿಯನ್ನೇ ಗೊಬ್ಬರ ವರ್ತಕರಿಗೆ ನೀಡಬೇಕೇ ಎನ್ನುವುದರ ಕುರಿತು ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ.
Related Articles
ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹ ಗೊಂಡ ಹಸಿ ಕಸವು ಗೊಬ್ಬರವಾಗಿ ಪರಿವರ್ತನೆಗೊಳ್ಳಬೇಕಾದರೆ ಸುಮಾರು 45 ದಿನಗಳು ಬೇಕಾಗುತ್ತವೆ. ಪ್ರಾರಂಭದಲ್ಲಿ ವಿಂಗಡಣೆಗೊಂಡ ಹಸಿ ಕಸಕ್ಕೆ ಬಯೋ ಕೆಮಿಕಲ್‌ಗಳನ್ನು ಹಾಕಿ ಅದನ್ನು ಸಂಬಂ ಧಪಟ್ಟ ಶೆಡ್‌ನಲ್ಲಿಡಲಾಗುತ್ತದೆ. 45 ದಿನಗಳ ಬಳಿಕ ಅದು ಗೊಬ್ಬರವಾಗಿ ಪರಿವರ್ತ ನೆಗೊಳ್ಳಲಿದ್ದು, ಯಂತ್ರದ ಮೂಲಕ ಪುಡಿ ಮಾಡಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ.
Advertisement
65 ಲಕ್ಷ ರೂ.ಯೋಜನೆಪ್ರಸ್ತುತ ಪುರಸಭೆಯ ಘಟಕದಲ್ಲಿ ಹಸಿ ಕಸವು ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತಿದೆಯಾದರೂ ಅದಕ್ಕೆ ಸಂಬಂಧಿಸಿದ ಸೂಕ್ತ ವ್ಯವಸ್ಥೆಗಳಿಲ್ಲ. ಹೀಗಾಗಿ ಅವುಗಳಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 65 ಲಕ್ಷ ರೂ.ಅನುದಾನ ಮೀಸಲಿಟ್ಟು ಯೋಜನೆ ಹಾಕಿಕೊಳ್ಳಲಾಗಿದೆ. ಮುಖ್ಯವಾಗಿ ಸಿದ್ಧಗೊಂಡ ಗೊಬ್ಬರವನ್ನು ಪುಡಿ ಮಾಡುವುದಕ್ಕೆ ಶ್ರೆಡ್ಡಿಂಗ್ ಮೆಷಿನ್ ಅಗತ್ಯವಾಗಿದೆ. ಇದಕ್ಕಾಗಿ ಸುಮಾರು 10 ಲಕ್ಷ ರೂ. ಹಾಗೂ 3 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಜತೆಗೆ ಶೆಡ್‌ವೊಂದನ್ನು ನಿರ್ಮಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಜತೆಗೆ ಇನ್ನಿತರ ವ್ಯವಸ್ಥೆಯನ್ನು ಕೈಗೊಳ್ಳುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಲ್ಲಿ ಗೊಬ್ಬರದ ರೂಪದಲ್ಲಿ ಪುರಸಭೆಗೆ ಒಂದಷ್ಟು ಆದಾಯ ಸಿಗಲಿದೆ. 5 ರೂ.ನಂತೆ ಮಾರಾಟ
ಈಗಾಗಲೇ ಸುಮಾರು 15 ಟನ್ ಗೊಬ್ಬರ ನಮ್ಮಲ್ಲಿ ಸಂಗ್ರಹವಿದ್ದು, ಕೆಜಿಗೆ 5 ರೂ.ಗಳಂತೆ ಮಾರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಿತ್ಯ 7ರಿಂದ 8 ಟನ್ ಕಸ ಸಂಗ್ರಹವಾಗುತ್ತಿದ್ದು, ಹಸಿ ಕಸದ ಪ್ರಮಾಣದಷ್ಟೇ ಗೊಬ್ಬರ ಸಂಗ್ರಹವಾಗಲಿದೆ. ಗೊಬ್ಬರ ತಯಾರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು 65 ಲಕ್ಷ ರೂ.ಗಳ ಯೋಜನೆ ಹಾಕಿಕೊಳ್ಳಲಾಗಿದೆ.
– ಜಯಶಂಕರ್ ಪ್ರಸಾದ್, ಆರೋಗ್ಯ ನಿರೀಕ್ಷಕರು, ಬಂಟ್ವಾಳ ಪುರಸಭೆ – ಕಿರಣ್ ಸರಪಾಡಿ