ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ತಡೆಗೆ ತಡೆಬೇಲಿ (ಹ್ಯಾಂಗಿಂಗ್ ಫೆನ್ಸ್) ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ಇ. ಕ್ರಾಂತಿ ತಿಳಿಸಿದರು. ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಿಗೆರೆ ತಾಲೂಕಿನಲ್ಲಿ 10 ಕಿ.ಮೀ. ತಡೆಬೇಲಿ ನಿರ್ಮಿಸಲಾಗುತ್ತಿದೆ. ತತ್ಕೊಳದಲ್ಲಿ 4.5 ಕಿ.ಮೀ. ತಡೆಬೇಲಿ ನಿರ್ಮಿಸಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಕೊಪ್ಪ ತಾಲೂಕಿನ ಮೇಗೂರಿನಲ್ಲಿ 5.5 ಕಿ.ಮೀ. ತಡೆಬೇಲಿ ಕಾರ್ಯ ಪೂರ್ಣಗೊಂಡಿದೆ ಎಂದರು.
ರೈತರು ಬೆಳೆದ ಬೆಳೆ, ಕಾಡುಪ್ರಾಣಿಗಳ ಹಾವಳಿಯಿಂದ ನಿರಂತರವಾಗಿ ನಾಶವಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಗುತ್ತಿಯಿಂದ 18 ಕುಟುಂಬಗಳು, ಬಿದಿರುತಳದಿಂದ 6 ಕುಟುಂಬಗಳು, ಮಸಗಲಿಯಿಂದ ಮೂರು ಕುಟುಂಬಗಳು ತಾವು ನೆಲೆಸಿರುವ ಕಂದಾಯ ಭೂಮಿಯಿಂದ ಸ್ವಯಂಪ್ರೇರಿತವಾಗಿ ಹೊರಬರಲು ನಿರ್ಧರಿಸಿದ್ದಾರೆ. ಸ್ವಯಂಪ್ರೇರಿತವಾಗಿ ಹೊರ ಬರುವವರಿಗೆ ಪರಿಹಾರ ನೀಡುವ ಸಂಬಂಧ ರಾಜ್ಯಕ್ಕೆ ಅನ್ವಯವಾಗುವ ಯೋಜನೆ ರೂಪಿಸಬೇಕಿದೆ. ಸಮಿತಿ ರಚನೆಯಾಗಬೇಕಿದೆ ಎಂದು ಹೇಳಿದರು.
ಕಾಡಿಗೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೆಂಕಿರೇಖೆಗಳನ್ನು ರಚಿಸಲಾಗಿದೆ. ಸಿಬ್ಬಂದಿಗಳನ್ನು ನೇಮಿಸಿ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಡಿಗೆ ಬೆಂಕಿ ಬಿದ್ದಿರುವುದನ್ನು ಗಮನಿಸಲು ಡ್ರೋಣ್ ಕ್ಯಾಮೆರಾ ಮತ್ತು ಬೈನಾಕ್ಯುಲರ್ ಬಳಸಲಾಗುತ್ತಿದೆ ಎಂದರು. ಚಿಕ್ಕಮಗಳೂರು, ಕಡೂರು ಮತ್ತು ಮೂಡಿಗೆರೆ ವಲಯಗಳಲ್ಲಿ ಬೆಂಕಿ ಬೀಳುವ 10 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಚಿಕ್ಕಮಗಳೂರಿನಲ್ಲಿ 3, ಕಡೂರಿನಲ್ಲಿ 3 ಹಾಗೂ ಮೂಡಿಗೆರೆ 1 ವಲಯವನ್ನು ಗುರುತಿಸಲಾಗಿದೆ. ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳುವುದನ್ನು ತಡೆಯಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಡಿಗೆ ಸ್ವಾಭಾವಿಕವಾಗಿ ಬೆಂಕಿ ಬೀಳುವ ಸಾಧ್ಯತೆ ಕಡಿಮೆ ಇದ್ದು, ಕೆಲವು ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಇತ್ತೀಚೆಗೆ ಸಿಂದಿಗೆರೆಯಲ್ಲಿ ಕಾಡಿಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಇತ್ತೀಚೆಗೆ ಕಡೂರು ತಾಲೂಕಿನ ಎಮ್ಮೆದೊಡ್ಡಿ, ಸಿಂದಿಗೆರೆ ಮತ್ತು ಬಾಳೂರು ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಕಾಡಿಗೆ ಬೆಂಕಿ ಹಚ್ಚದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಮಸಗಲಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 185 ಕುಟುಂಬಗಳಲ್ಲಿ 109 ಕುಟುಂಬಗಳು ಬೇರೆಡೆ ಮನೆ ಮತ್ತು ಜಮೀನು ಹೊಂದಿದ್ದಾರೆ. ನಿವೇಶನ ರಹಿತ 39 ಕುಟುಂಬಗಳಿಗೆ ನಗರದ ಇಂದಾವರ ಗ್ರಾಮದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ –
ಎನ್.ಇ. ಕ್ರಾಂತಿ ಉಪ ಅರಣ್ಯ ಸಂರಕ್ಷಣಾಧಿಕಾರಿ