Advertisement

ಪೊಲೀಸ್‌ ಕಾಲೋನಿಗೆ ಬೇಲಿ: ಆರೋಪ-ವಾಗಾದ

04:05 PM Sep 17, 2018 | Team Udayavani |

ಹರಿಹರ: ನಗರದ ಪೊಲೀಸ್‌ ಕಾಲೋನಿಗೆ ತಂತಿ ಬೇಲಿ ಹಾಕುವ ವಿಷಯದಲ್ಲಿ ಭಾನುವಾರ ಬೆಳಗ್ಗೆ ಪೊಲೀಸ್‌ ಕ್ವಾರ್ಟರ್ಸ್‌ ಹಾಗೂ ಪಕ್ಕದ ಬಡಾವಣೆ ನಿವಾಸಿಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಪೊಲೀಸ್‌ ಕಾಲೋನಿ ಹಿಂಭಾಗದ ಖಾಲಿ ಜಾಗ ಸೇರಿಸಿ ತಂತಿ ಬೇಲಿ ಹಾಕುತ್ತಿರುವುದನ್ನು ಗಮನಿಸಿದ ಪಕ್ಕದ ಬಡವಾಣೆಯ ಜನತೆ, ಈ ಖಾಲಿ ಜಾಗ ನಗರಸಭೆಗೆ ಸೇರಿರುವ ಸಾರ್ವಜನಿಕ ಕನ್ಸರ್ವೆನ್ಸಿ ಆಗಿದ್ದು, ಅದನ್ನು ಒತ್ತುವರಿ ಮಾಡಿ ತಂತಿ ಬೇಲಿ ಹಾಕಬೇಡಿ ಎಂದು ತಕರಾರು ಮಾಡಿದರು.

Advertisement

ಆದರೆ ಪೊಲೀಸ್‌ ಕಾಲೋನಿ ನಿವಾಸಿಗಳು ಇದು ನಮ್ಮ ಕಾಲೋನಿಗೆ ಸೇರಿದ ಜಾಗ. ಸಾರ್ವಜನಿಕ ಕನ್ಸರ್ವೆನ್ಸಿ ಅಲ್ಲ. ಇಲ್ಲಿ ತಂತಿ ಬೇಲಿ ಹಾಕುವ ಹಾಕುವ ವಿಷಯವನ್ನು ತಹಶೀಲ್ದಾರ್‌, ನಗರಸಭೆ ಪೌರಾಯುಕ್ತರಿಗೆ ತಿಳಿಸಿದ್ದು, ಅವರ ಅನುಮತಿ ಮೇರೆಗೆ ಖಾಲಿ ಜಾಗವನ್ನು ಸ್ವತ್ಛಗೊಳಿಸಿ, ಬೇಲಿ ಹಾಕಿಸುತ್ತಿದ್ದೇವೆ ಎಂದು ಹೇಳಿದರು.

ಎರಡೂ ಗುಂಪುಗಳ ನಡುವಿನ ವಾಗ್ವಾದ ತೀವ್ರಗೊಂಡಾಗ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಸ್‌.ರಾಮಪ್ಪ, ನಗರಸಭಾ ಸದಸ್ಯ ಎಸ್‌.ಎಂ.ವಸಂತ್‌, ಕೆ.ಮರಿದೇವ ಮತ್ತಿತರರು ವಾದ-ಪ್ರತಿವಾದ ಆಲಿಸಿದರು.

ಆಗ ಎಸ್‌.ರಾಮಪ್ಪರು ಇಲ್ಲಿ ಕನ್ಸರ್ವೆನ್ಸಿ ಇದೆಯಾ, ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಈ ಭಾಗದ ನಕ್ಷೆ ಪರಿಶೀಲಿಸಬೇಕು. ನಗರಸಭೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸೋಣ. ಮ್ಯಾಪ್‌ ಹಾಗೂ ದಾಖಲೆಗಳಲ್ಲಿ ಕನ್ಸರ್ವೆನ್ಸಿ ಇದ್ದರೆ ಅದನ್ನು ಬಿಟ್ಟು ತಂತಿ ಬೇಲಿ ಹಾಕಿಸಿರಿ. ಇರದಿದ್ದರೆ ಖಾಲಿ ಜಾಗವನ್ನು ಸೇರಿಸಿ ತಂತಿ ಬೇಲಿ ಹಾಕಿಸಿರಿ ಎಂದು ಹೇಳಿದರು.

ಸಿಪಿಐ ಲಕ್ಷ್ಮಣ್‌ ನಾಯಕ್‌ ಮಾತನಾಡಿ, ಈ ಖಾಲಿ ಜಾಗವನ್ನು ಸ್ವತ್ಛಗೊಳಿಸಲು ಈ ಹಿಂದೆ ಹಲವು ಬಾರಿ ನಗರಸಭೆ ಅಧಿ ಕಾರಿಗಳು, ಈ ವಾರ್ಡ್‌ನ ಸದಸ್ಯರಿಗೂ ಹಲವು ಬಾರಿ ಕೋರಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಸಾರ್ವಜನಿಕರ ಸೇವೆಗಾಗಿ ಇರುವ ಪೊಲೀಸರ ಕಾಲೋನಿಯ ಇಬ್ಬರು ನಿವಾಸಿಗಳು ಡೆಂಘೀ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದರು.

Advertisement

ಈ ಖಾಲಿ ಜಾಗದ ಸ್ವತ್ಛತೆ ಸಮಸ್ಯೆಯನ್ನು ಎಸ್‌ ಪಿಯವರ ಗಮನಕ್ಕೂ ತಂದಿದ್ದು, ಅವರು ಹಂದಿ, ನಾಯಿಗಳು ಕಾಲೋನಿಯಲ್ಲಿ ಬಾರದಂತೆ ತಂತಿ ಬೇಲಿ ಹಾಕಿಕೊಳ್ಳಿರಿ. ವಾರಕ್ಕೊಮ್ಮೆ ಶ್ರಮದಾನದ ಮೂಲಕ ಖಾಲಿ ಜಾಗವನ್ನು ಸ್ವಚ್ಚಗೊಳಿಸಿರಿ ಎಂದು ಸಲಹೆ ನೀಡಿದ್ದಾರೆ. ನಾವು ಯಾರ ಜಾಗವನ್ನೂ ಒತ್ತುವರಿ ಮಾಡುತ್ತಿಲ್ಲ. ನಮ್ಮ ಜಾಗವನ್ನು ಭದ್ರಪಡಿಸಿಕೊಂಡು ಸ್ವತ್ಛತೆ ಕಾಪಾಡಿಕೊಳ್ಳಲು ಮುಂದಾಗಿದ್ದೇವೆ ಎಂದರು. 

ಆದರೆ ಸಾರ್ವಜನಿಕರು, ಅಳತೆ ಮಾಡುವವರೆಗೆ ತಂತಿಬೇಲಿ ಹಾಕುವುದನ್ನು ನಿಲ್ಲಿಸಬೇಕು. ತಂತಿ ಬೇಲಿ ಹಾಕುವುದರಿಂದ ಚರಂಡಿ ಸ್ವತ್ಛಗೊಳಿಸಲು ಜಾಗವಿಲ್ಲದಂತಾಗುತ್ತದೆ ಎಂದು ತಕರಾರು ಮಾಡಿದರು. ಆಗ ಶಾಸಕ ಎಸ್‌.ರಾಮಪ್ಪ, ಸದ್ಯಕ್ಕೆ ಚರಂಡಿಯಿಂದ ಒಂದುವರೆ ಅಡಿ ಜಾಗ ಬಿಟ್ಟು ಬೇಲಿ ಹಾಕಿರಿ, ಅಳತೆ ಮಾಡಿದಾಗ ಈ ತಂತಿ ಬೇಲಿ ಎಲ್ಲಿಂದ ಹಾಕುವುದು ಎನ್ನುವುದು ಅಂತಿಮಗೊಳಿಸೋಣ ಎಂದಾಗ ಚರ್ಚೆಗೆ ತೆರೆ ಬಿತ್ತು. 

ಅಳತೆ ಪ್ರಕ್ರಿಯೆ ಪೂರ್ಣಗೊಂಡ ನಂತರ ತಮ್ಮ ಅನುದಾನದಲ್ಲೆ ಪೊಲೀಸ್‌ ಕಾಲೋನಿಗೆ ಸುಸಜ್ಜಿತ ಕಾಂಪೌಂಡ್‌ ನಿರ್ಮಿಸುತ್ತೇನೆ. ಅಲ್ಲಿವರೆಗೆ ಗೊಂದಲ ಸೃಷ್ಟಿಸುವುದು ಬೇಡ ಎಂದು ಶಾಸಕ ಎಸ್‌.ರಾಮಪ್ಪ ಭರವಸೆ ನೀಡಿದರು. ಗ್ರಾಮಾಂತರ ಪಿಎಸ್‌ಐ ಸಿದ್ದೇಗೌಡ, ನಗರ ಠಾಣೆ ಪಿಎಸ್‌ಐ ಶ್ರೀಧರ್‌, ನಗರಸಭೆ ಮಾಜಿ ಸದಸ್ಯ ಹಂಚಿನ ನಾಗಣ್ಣ, ಸಿಬ್ಬಂದಿಗಳಾದ ಸೋಮಣ್ಣ, ಶ್ರೀನಿವಾಸ್‌, ರಾಘವೇಂದ್ರ, ಮಂಜುನಾಥ್‌, ಕರಿಬಸಪ್ಪ, ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next