“ಭಗವಂತ ನಮ್ಮನ್ನು ಯಾವ ರೀತಿ ಹುಟ್ಟಿಸುತ್ತಾನೋ ಅದೇ ಶಾಶ್ವತ, ಅದನ್ನೇ ಪಾಲಿಗೆ ಬಂದದ್ದು ಎಂದುಕೊಂಡು ಸುಮ್ಮನಿರಬೇಕು’ ಎಂದು ಹಳೆಯ ಕಾಲದವರು ನಂಬಿದ್ದರು. ಕಾಯಿಲೆ ಬಂದರೆ ವೈದ್ಯರ ಬಳಿ ಹೋಗದೇ ಇರುತ್ತಿದ್ದಿದ್ದು,ಅಂಗವೈಕಲ್ಯ ಮಗು ಹುಟ್ಟಿದರೆ ಚಿಕಿತ್ಸೆ ಕೊಡಿಸದೇ ಇರುತ್ತಿದ್ದಿದ್ದು, ಇವೆಲ್ಲವೂ ಆ ಚಿಂತನೆಯ ಫಲ. ಇಂದು ಆ ಮನಸ್ಥಿತಿಯಿಂದ ನಾವು ಬಹಳ ದೂರ ಸಾಗಿ ಬಂದಿದ್ದೇವೆ. ಸರ್ಜರಿ ಮೂಲಕ ಲಿಂಗವನ್ನೂ ಬದಲಾಯಿಸಿ ಸೃಷ್ಟಿಗೇ ಸವಾಲು ಹಾಕುವಷ್ಟರ ಮಟ್ಟಕ್ಕೆ ಬೆಳೆದಿದ್ದೇವೆ.
ಗಂಡನ್ನು ಹೆಣ್ಣಾಗಿಸುವ, ಹೆಣ್ಣನ್ನು ಗಂಡಾಗಿಸುವ ಕಲೆಯನ್ನು ನಾವು ಇತ್ತೀಚಿಗೆ ಆವಿಷ್ಕರಿಸಿರಬಹುದು. ಆದರೆ ಪ್ರಕೃತಿಯಲ್ಲಿ ಅದು ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ. ಕ್ಲೋನ್ ಫಿಶ್ ಎಂಬ ಮೀನಿನ ಪ್ರಭೇದದಲ್ಲಿ ಈ ವೈಚಿತ್ರ್ಯ ಕಂಡು ಬರುತ್ತದೆ.
ಹುಟ್ಟುವಾಗ ಪ್ರತಿಯೊಂದು ಕ್ಲೋನ್ ಫಿಶ್ ಕೂಡಾ ಗಂಡಾಗಿರುತ್ತದೆ. ನಂತರ ವರ್ಷಗಳುರುಳುತ್ತಿದ್ದಂತೆ ಅವುಗಳಲ್ಲಿ ಕೆಲವು ಮೀನುಗಳು ಹೆಣ್ಣಾಗಿ ಬದಲಾಗುತ್ತವೆ. ಈ ಮೀನುಗಳು ವಾಸಿಸುವುದು ಗುಂಪುಗಳಲ್ಲಿ. ಅಲ್ಲಿ ಹೆಣ್ಣು ಮತ್ತು ಗಂಡು ಮೀನುಗಳ ಸಂಖ್ಯೆ ಸಮತೋಲನದಲ್ಲಿರುತ್ತದೆ.
ಯಾವಾಗ ಹೆಣ್ಣ ಮೀನುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುವುದೋ ಆ ಸಮಯದಲ್ಲಿ ಸಂತಾನೋತ್ಪತ್ತಿ ಕ್ರಿಯೆ ಮುಂದುವರಿಸಲು ಗಂಡು ಮೀನುಗಳು ಹೆಣ್ಣಾಗಿ ಬದಲಾಗುತ್ತವೆ. ಪ್ರತಿ ಕ್ಲೋನ್ ಫಿಶ್ ದೇಹದಲ್ಲಿ ಗಂಡು ಮತ್ತು ಹೆಣ್ಣು ಹಾರ್ಮೋನುಗಳಿರುತ್ತವೆ. ಹೆಣ್ಣು ಹಾರ್ಮೋನು ಅಗತ್ಯ ಬಂದಾಗ ಮಾತ್ರ ಕಾರ್ಯಶೀಲವಾಗುತ್ತದೆ. ಈ ರೀತಿಯಾಗಿ ಸರ್ಜರಿ ಇಲ್ಲದೆಯೇ ಕ್ಲೋನ್ ಫಿಶ್‌ನಲ್ಲಿ ಲಿಂಗ ಬದಲಾವಣೆ ಸಾಧ್ಯವಾಗಿದೆ.