ಬೀದರ: ಜಾನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಶ್ರೀಮಂತಗೊಳಿಸುವಲ್ಲಿ ಮಹಿಳೆಯ ಪಾತ್ರ ಹಿರಿದಾಗಿದೆ ಎಂದು ಹುಮನಾಬಾದನ ಪ್ರಾಧ್ಯಾಪಕಿ ಡಾ| ಮಹಾದೇವಿ ಹೆಬ್ಟಾಳೆ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು ಮತ್ತು ಕದಂಬ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ ಜಾನಪದ ವಿಚಾರ ಸಂಕಿರಣದಲ್ಲಿ “ಜಾನಪದ ಸ್ತ್ರೀ ಸಂವೇದನೆಗಳು’ ಗೋಷ್ಠಿಯಲ್ಲಿ ಅವರು ಪ್ರಬಂಧ ಮಂಡಿಸಿದರು.
ವೇದಗಳ ಕಾಲದಲ್ಲಿ ಮಹಿಳೆಗೆ ಎಲ್ಲಿಲ್ಲದ ಸ್ವಾತಂತ್ರ್ಯವಿತ್ತು. ಮುಸ್ಲಿàಮರ ಆಗಮನದಿಂದ ಮಹಿಳೆಯ ಸ್ವಾತಂತ್ರ್ಯಕ್ಕೆ ಕುತ್ತು ಬಂದಿತ್ತು. ಆಕೆಯ ಪ್ರತಿಯೊಂದು ಅವಕಾಶಗಳನ್ನು ಕಿತ್ತುಕೊಂಡು ಸಬಲೆಯಿದ್ದ ಮಹಿಳೆಯನ್ನು ಅಬಲೆಯನ್ನಾಗಿ ಕಂಡರು. ಜಾನಪದ ಸಂಸ್ಕೃತಿಯಿಂದ ಮಹಿಳೆಯ ತೊಳಲಾಟ ಬಯಲಿಗೆಳೆದು ಆಕೆಯ ಸಬಲೀಕರಣಕ್ಕೆ ಪ್ರಯತ್ನಿಸುವ ಸನ್ನಿವೇಶ ನಡೆದು ಬಂದವು ಎಂದು ಹೇಳಿದರು.
ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಮಹಿಳೆಗೆ ಕೆಲವೊಂದು ಅವಕಾಶಗಳು ಉದಾರವಾಗಿ ದೊರೆತರೂ ಆಕೆಯ ಮೇಲೆ ಅತ್ಯಾಚಾರ, ವ್ಯಭಿಚಾರಗಳು ಗಗನ ಚುಂಬಿಸಲಾರಂಭಿಸಿವೆ. ಹೆಣ್ಣು, ಗಂಡು ಈ ಜಗತ್ತಿನ ಎರಡು ಸಮಾನ ಕಣ್ಣುಗಳಾಗಿದ್ದು, ಇಬ್ಬರು ಪಾವಿತ್ರ್ಯ ಉಳಿಸಿಕೊಂಡು, ವೇದ ಕಾಲದ ಸಂಸ್ಕೃತಿ ಪುನರಾವರ್ತಿತವಾದಲ್ಲಿ ಮತ್ತೆ ಮಹಿಳೆ ಸಂವೇದನಾಶೀಲಳಾಗಿ ಗುರುತಿಸಬಲ್ಲಳು ಎಂದರು.
“ಜಾನಪದ ಅಂದು ಇಂದು’ ವಿಷಯ ಕುರಿತು ಪ್ರಬಂಧ ಮಂಡಿಸಿದ ಜಾನಪದ ಪರಿಷತ್ ಮಹಿಳಾ ಜಿಲ್ಲಾಧ್ಯಕ್ಷೆ ಡಾ| ಧನಲಕ್ಷ್ಮೀ ಪಾಟೀಲ, ಜಾನಪದ ಬದುಕಿನಲ್ಲಿ ಉಡಿಗೆ, ತೊಡಿಗೆ, ಆಹಾರ ಪದಾರ್ಥಗಳು, ಕಲೆ, ಸಂಗೀತ, ಹಬ್ಬ, ಹರಿದಿನಗಳು, ಕುಟುಂಬ ವ್ಯವಸ್ಥೆ ಪ್ರಬುದ್ಧವಾಗಿತ್ತು. ಆಂತರಿಕ ಸೌಂದರ್ಯ ಅಲ್ಲಿ ಎದ್ದು ಕಾಣುತ್ತಿತ್ತು. ಆದರೆ ಇಂದು ಪಾಶ್ಚಾತ್ಯರ ಗಾಳಿ ಬಡಿದು ಸಾಮಾಜಿಕ, ಮಾನಸಿಕ,
ಬೌದ್ಧಿಕ ಹಾಗೂ ಮೌಲಿಕ ಗುಣಗಳಿಂದ ವಂಚಿತರಾಗುತ್ತಿದ್ದಾರೆ. ಅಳಿದು ಹೋದ ನೆಮ್ಮದಿ ಮತ್ತೆ ಮರುಕಳಿಸಲು ನಮ್ಮ ನಿತ್ಯದ ಜೀವನ ಜಾನಪದ ಬದುಕಾಗಬೇಕು ಎಂದು ಹೇಳಿದರು.
ಹಾಲಹಳ್ಳಿ ಸ್ನಾತಕೊತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ರಾಮಚಂದ್ರ ಗಣಾಪುರ ಅವರು “ಜಾನಪದ ಪ್ರಸ್ತುತ ಸವಾಲುಗಳು’ ವಿಚಾರವಾಗಿ ಪ್ರಬಂಧ ಮಂಡಿಸಿದರು. ವಿಶ್ವ ಹಿಂದು ಪರಿಷತ್ ಮುಖಂಡ ರಾಮಕೃಷ್ಣ ಸಾಳೆ ಮಾತನಾಡಿದರು. ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷೆ ಸವಿತಾ ಸಾಕುಳೆ ವೇದಿಕೆಯಲ್ಲಿದ್ದರು. ಎಸ್.ಬಿ. ಕುಚಬಾಳ್ ಜಾನಪದ ಗೀತೆ ಹಾಡಿದರು. ಪ್ರಕಾಶ ಕನ್ನಾಳೆ ಸ್ವಾಗತಿಸಿದರು. ಸುನಿತಾ ಕುಡ್ಲಿಕರ್ ನಿರೂಪಿಸಿ ಕಾಶಿನಾಥ ಬಡಿಗೇರ ವಂದಿಸಿದರು.