Advertisement

ಹೆಣ್ಣಿನ ಜೀವನ ನೀರಿನ ಮೇಲಿನ ಗುಳ್ಳೆಯಂತೆ: ಜ್ಯೋತಿಬಾಯಿ

05:54 PM Mar 27, 2022 | Shwetha M |

ತಾಳಿಕೋಟೆ: ಇಂದಿನ ದಿನಮಾನದಲ್ಲಿಯ ವಿದ್ಯಾರ್ಥಿನಿಯರು ಸೋಮಾರಿತನಕ್ಕೆ ಲಕ್ಷ್ಯಕೊಡದೇ ಸತ್ಯಧರ್ಮ ಶಾಂತಿಯ ವಿಚಾರಗಳೊಂದಿಗೆ ಶಿಕ್ಷಕರು ನೀಡಿದ ವಿದ್ಯೆಯನ್ನು ಅರಿತುಕೊಂಡು ಮುನ್ನಡೆದು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಮುದ್ದೇಬಿಹಾಳ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿ ಜ್ಯೋತಿಬಾಯಿ ಮೈತ್ರೇಯಿ ನುಡಿದರು.

Advertisement

ವಿವಿ ಸಂಘದ ವತಿಯಿಂದ ನಡೆಸಿಕೊಂಡು ಬರಲಾಗುತ್ತಿರುವ ಎಸ್‌. ಕೆ. ಮಹಿಳಾ ಪಿಯು ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ನಿಯಾದವರು ಮುಂಬರುವ ದಿನಮಾನ ಗಳಲ್ಲಿಯೂ ತಮ್ಮ ಜೀವನಕ್ಕೆ ಒಂದು ಚೌಕಟ್ಟನ್ನು ಹಾಕಿಕೊಳ್ಳಬೇಕು. ಇದರಿಂದ ಒಳ್ಳೆಯ ಸ್ಥಾನಮಾನ ದೊರೆಯಲು ಕಾರಣವಾಗುತ್ತದೆ.ವಿವಾಹವಾದಕೂಡಲೇ ಪತಿಗೆ ನೌಕರಿ ಇದೆ ಅಥವಾ ಬಡತನವಿದೆ ಎಂಬುದನ್ನು ಅರ್ಥೈಸಿಕೊಂಡು ತಮ್ಮ ಓದುಬರಹವನ್ನು ನಿಲ್ಲಿಸುವದು ಬೇಡ. ಇನ್ನಷ್ಟು ವಿದ್ಯಾರ್ಜನೆ ತಾವು ಮಾಡಿದ್ದರೆ ತಮ್ಮ ಮಕ್ಕಳಿಗೆ ಹೇಳಿಕೊಡಲು ಸಾಧ್ಯವಾಗುತ್ತದೆ ಎಂದರು.

ಹೆಣ್ಣಿನ ಜೀವನ ಅಂದರೆ ನೀರಿನ ಮೇಲಿನ ಗುಳ್ಳೆ ಇದ್ದಂತೆ ಅದು ಒಡೆಯದಂತೆ ಕಾಪಾಡಿಕೊಂಡು ಹೋಗಬೇಕೆಂದು ಹೇಳಿದ ಅವರು, ನನ್ನ ಸಾಧನೆಗೆ ನನ್ನ ತಾಯಿಯೇ ಗುರುವಾಗಿದ್ದರು. ತರಬೇತಿಯ ಸಂಸ್ಥೆಯ ಮಾರ್ಗದರ್ಶಕರೂ ಕೂಡಾ ಕಾರಣಿಭೂತರಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಪಿಯು ಕಾಲೇಜಿನ ಪ್ರಾಚಾರ್ಯ ಜೆ.ಸಿ. ಹಿರೇಮಠ ಮಾತನಾಡಿ, ವಿದ್ಯೆಯೆಂಬುದು ಅಂಗಡಿಮುಗ್ಗಟ್ಟುಗಳಲ್ಲಿ ಮಾರಾಟಕ್ಕೆ ದೊರಕುವಂತಹ ವಸ್ತುವಲ್ಲ. ಒಳ್ಳೆಯ ಜ್ಞಾನದೊಂದಿಗೆ ವಿಷಯಗಳನ್ನು ಆಲಿಸಿ ಪಾಲಿಸಿದರೆ ಅದು ಏನು ಎಂಬುದು ಅದರ ಅರ್ಥ ಗೊತ್ತಾಗುತ್ತದೆ ಎಂದರು.

Advertisement

ಓದು ಬರಹದಲ್ಲಿ ಏಕಾಗ್ರತೆಯೆಂಬುದನ್ನು ಇಟ್ಟುಕೊಂಡು ನಡೆಯಿರಿ. ಮಹತ್ವದ ಮುಂದಿನ ನಿಮ್ಮ ಏಳ್ಗೆಗೆ ಸಹಾಯಕಾರಿಯಾಗುವಂತಹ ವಿಷಯಗಳನ್ನು ಅರ್ಥೈಸಿಕೊಂಡು ನಡೆಯಿರಿ. ಇಂದಿನ ದಿನಮಾನದಲ್ಲಿಯ ಸ್ಥಿತಿಗತಿಯನ್ನು ಅರಿತುಕೊಂಡು ದೇಶೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ವಿದೇಶಿ ಸಂಸ್ಕೃತಿಗೆ ತಲೆಬಾಗದೇ ಶಾಲೆಯ ಹಾಗೂ ಶಿಕ್ಷಕರ ಹಾಗೂ ಪಾಲಕರ ಹೆಸರು ತರುವಂತಾಗಿ ಮಹಿಳಾ ಜೀವನವನ್ನು ಸಾರ್ಥಕಪಡಿಸಿಕೊಳ್ಳಿ ಎಂದರು.

ಇದೇ ಸಮಯದಲ್ಲಿ ಕೆಲವು ವಿದ್ಯಾರ್ಥಿನಿಯರಿಂದ ಸಂವಾದ ಕಾರ್ಯಕ್ರಮ ಏರ್ಪಟ್ಟು ಪ್ರಶ್ನೋತ್ತರಗಳು ನಡೆದವಲ್ಲದೇ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ ಸಾನ್ನಿಧ್ಯ ವಹಿಸಿದ್ದರು. ಮಹಿಳಾ ಕಾಲೇಜಿನ ಅಧ್ಯಕ್ಷರಾದ ಕಾಶೀನಾಥ ಸಜ್ಜನ, ವಿವಿ ಸಂಘದ ಎಸ್‌. ಕೆ. ಪಿಯು ಕಾಲೇಜ್‌ ಅಧ್ಯಕ್ಷರಾದ ಶಂಕರಗೌಡ ಹಿಪ್ಪರಗಿ, ವಿವಿ ಸಂಘದ ಸದಸ್ಯರಾದ ಅಣ್ಣು ವಾಲಿ ಇದ್ದರು. ಉಪನ್ಯಾಸಕರಾದ ಬಿ.ವಿ. ಅಂಬಿಗೇರ ಸ್ವಾಗತಿಸಿದರು. ಉಪನ್ಯಾಸಕರಾದ ಎಸ್‌. ಎಸ್‌. ನಾಡಗೌಡ, ಉಪನ್ಯಾಸಕಿ ಸಿ.ಪಿ. ಧನಪಾಲ ನಿರೂಪಿಸಿದರು. ಉಪನ್ಯಾಸಕಿ ವಿ.ಸಿ. ವಿರಕ್ತಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next