Advertisement

ಕಣ್ಣು ಬಿಡುವ ಮೊದಲೇ ಬೀದಿಗೆ ಬೀಳುತ್ತಿವೆ ಹೆಣ್ಣು ಶ್ವಾನ ಮರಿಗಳು

10:08 PM Apr 14, 2019 | Sriram |

ಮಹಾನಗರ: ಹೆಣ್ಣಾಗಿ ಹುಟ್ಟಬಾರದಿತ್ತು ಎಂದು ಬಹುಶಃ ಶ್ವಾನಗಳೂ ಮೂಕರೋದನೆ ಮಾಡುತ್ತಿರಬಹುದೇನೋ. ಏಕೆಂದರೆ, ಈ ಸಮಾಜ ದಲ್ಲಿ ಹೆಣ್ಣು ನಾಯಿ ಮರಿಗಳು ಕಣ್ಣು ಬಿಡುವ ಮೊದಲೇ ಬೀದಿಗೆ ಬೀಳುತ್ತಿವೆ. ಪ್ರಾಣಿಪ್ರೇಮಿ ಸಂಸ್ಥೆಯೊಂದು ರಕ್ಷಿಸಿದ ಸುಮಾರು 50 ಶ್ವಾನಗಳಲ್ಲಿ 40ಕ್ಕೂ ಹೆಚ್ಚು ಶ್ವಾನಗಳು ಹೆಣ್ಣು!

Advertisement

ಬೀದಿಬದಿಯಲ್ಲಿ ಅನಾಥವಾಗಿ ಬಿದ್ದಿರುವ ಶ್ವಾನ,ಬೆಕ್ಕುಗಳಿಗೆ ಶಾಶ್ವತ ಆಶ್ರಯ,ಆಹಾರ ಕಲ್ಪಿಸುವ ಮೂಲಕ ಸಮಾಜಮುಖೀ ಸಂಸ್ಥೆಯೊಂದು ಮಾದರಿಯಾಗಿದೆ. ಗಮನಾರ್ಹವೆಂದರೆ, ಮೌನರೋದ‌ನೆಯಿಂದ ಮುಕ್ತಿ ಕೊಡಿಸಿ ಶ್ವಾನ,ಬೆಕ್ಕಿನ ಮರಿಗಳ ಜೀವನಕ್ಕೆ ಈ ಸಂಸ್ಥೆ ದಾರಿಯಾಗಿದೆ.

ಲವ್‌ 4 ಪಾಪ್ಸ್‌ ಟ್ರಸ್ಟ್‌ ಎಂಬ ಹೆಸರಿನಲ್ಲಿ ಕೆಲವು ಸಮಯಗಳಿಂದ ಕ್ರಿಯಾಶೀಲವಾಗಿರುವ ಸುಮಾರು ಹನ್ನೆರಡು ಮಂದಿಯ ತಂಡ ಬೀದಿಬದಿ, ಚರಂಡಿ, ಕಾಂಪೌಂಡ್‌ಗಳ ಬಳಿ, ಮಾರುಕಟ್ಟೆಗಳ ಬಳಿ ಅನಾಥವಾಗಿರುವ ಶ್ವಾನ, ಬೆಕ್ಕಿನ ಮರಿಗಳನ್ನು ರಕ್ಷಿಸಿ ಉಪಚರಿಸುವುದರಲ್ಲಿ ನಿರತವಾಗಿದೆ.ತಂಡದಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳು,ಗೃಹಿಣಿಯರು ಇದ್ದಾರೆ. ನಾಯಿ, ಬೆಕ್ಕಿನ ಮರಿಗಳನ್ನು ಕಣ್ಣು ಬಿಡುವ ಮೊದಲೇ ಜನರು ಬೀದಿ ಬದಿ ಎಸೆದು ಹೋಗುವುದನ್ನು ಕಣ್ಣಾರೆ ನೋಡಿದ ತಂಡದ ಸದಸ್ಯರು ಅವುಗಳನ್ನು ರಕ್ಷಿಸಿ,ಬದುಕಿಸುವ ಕಾಯಕದಲ್ಲಿ ತೊಡಗಿಸಿಕೊಂಡರು.

ಸ್ವಂತ ಹಣದಲ್ಲಿ ರಕ್ಷಣೆ
ಹೆಣ್ಣು ಮರಿ ಹುಟ್ಟಿದಾಕ್ಷಣ ಅದು ಇನ್ನಷ್ಟು ಮರಿಗಳ ಹುಟ್ಟಿಗೆ ಕಾರಣವಾಗುತ್ತದೆ ಮತ್ತು ಸಲಹುವುದು ಕಷ್ಟವಾಗುತ್ತದೆ ಎಂಬ ನೆಪವೊಡ್ಡಿ ಜನ ಆ ಮರಿಗಳನ್ನು ಬೀದಿಯಲ್ಲಿ ತಂದು ಬಿಡುತ್ತಾರೆ. ಇದರಿಂದ ಆ ಮರಿಗಳು ಅನಾಥವಾಗಿ ಮುಂದೆ ಬೀದಿನಾಯಿಗಳಾಗಿ ಪರಿವರ್ತನೆಯಾಗುತ್ತವೆ. ಅದರ ಬದಲು ಇಂತಹ ದೇಸೀ ನಾಯಿ ಮರಿಗಳನ್ನು ರಕ್ಷಿಸಿ ಅವುಗಳಿಗೆ ಬದುಕು ಕಲ್ಪಿಸಿಕೊಡಬೇಕೆಂಬ ಛಲದೊಂದಿಗೆ ಈ ಟ್ರಸ್ಟ್‌ ಮುಂದುವರಿದಿದೆ. ತಮ್ಮದೇ ಸ್ವಂತ ಹಣದಲ್ಲಿ ಒಂದಿಷ್ಟು ಪಾಲನ್ನು ನಾಯಿ, ಬೆಕ್ಕಿನ ಮರಿಗಳ ರಕ್ಷಣೆಗಾಗಿ ವಿನಿಯೋಗಿಸುತ್ತಿದ್ದಾರೆ. ಮರಿಗಳನ್ನು ದತ್ತು ತೆಗೆದುಕೊಂಡವರಿಗೆ ಹೆಣ್ಣು ಜೀವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಚರಂಡಿಯಲ್ಲೇ ಹೆಚ್ಚು
ಬಹುತೇಕ ಮರಿಗಳು ಚರಂಡಿಯಲ್ಲಿ ಬಿದ್ದಿರುತ್ತವೆ. ಅವುಗಳನ್ನು ರಕ್ಷಣೆ ಮಾಡು ವುದೂ ಸವಾಲಾಗಿರುತ್ತದೆ. ಏಕೆಂದರೆ, ಹಿಡಿಯಲು ಹೋದ ತತ್‌ಕ್ಷಣ ಓಡುವುದೇ ಹೆಚ್ಚು. ಅದಕ್ಕಾಗಿ, ಸನಿಹದಲ್ಲಿರುವ ಅಂಗಡಿಯವರಲ್ಲಿ ಮಾತನಾಡಿ ಟ್ರಸ್ಟ್‌ ಸದಸ್ಯರೇ ಕೈಯಿಂದ ಹಣ ನೀಡಿ ಅವುಗಳಿಗೆ ಆಹಾರ ತಿನ್ನಿಸಲು ಹೇಳುತ್ತಾರೆ. ಮರಿಗಳು ಬೆಳೆದ ಅನಂತರ ಹಿಡಿದು ತಂದು ತಮ್ಮ ಮನೆಗಳಲ್ಲಿ ಸಾಕುತ್ತಾರೆ. ಬಳಿಕ ದತ್ತು ಶಿಬಿರ ಏರ್ಪಡಿಸಿ ಅವಶ್ಯವಿದ್ದವರಿಗೆ ಉಚಿತವಾಗಿಯೇ ನೀಡಲಾಗುತ್ತದೆ. ದತ್ತು ನೀಡುವ ಮುನ್ನ ಅವುಗಳಿಗೆ ಆ್ಯಂಟಿ ರೇಬಿಸ್‌ ಚಿಕಿತ್ಸೆಯನ್ನೂ ನೀಡಲಾಗುತ್ತದೆ.

Advertisement

ಹೆಣ್ಣು ಮರಿಗಳೇ ಹೆಚ್ಚು
ಟ್ರಸ್ಟ್‌ ನ ಸದಸ್ಯರು ರಕ್ಷಿಸಿದ ಸುಮಾರು 50ಕ್ಕೂ ಹೆಚ್ಚು ನಾಯಿ ಮರಿಗಳಲ್ಲಿ 40ಕ್ಕೂ ಹೆಚ್ಚು ಹೆಣ್ಣು ಮರಿಗಳೇ ಆಗಿವೆ. ಈ ಹಿಂದೆ ರಕ್ಷಿಸಲಾದ 12 ನಾಯಿ ಮರಿ, ಆರು ಬೆಕ್ಕಿನ ಮರಿಗಳನ್ನು ಶಿಬಿರ ಏರ್ಪಡಿಸಿ ದತ್ತು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಎಲ್ಲ ಬೆಕ್ಕಿನ ಮರಿಗಳು, 9 ನಾಯಿ ಮರಿಗಳನ್ನು ಸಾರ್ವಜನಿಕರು ದತ್ತು ತೆಗೆದುಕೊಂಡಿದ್ದಾರೆ. ಆ ಬಳಿಕ ರಕ್ಷಣೆ ಮಾಡಿರುವ 35 ನಾಯಿ ಮರಿಗಳ ಪೈಕಿ ಆರು ಗಂಡು ಮರಿಗಳಾದರೆ ಉಳಿದ 29 ಮರಿಗಳು ಹೆಣ್ಣು ಮರಿಗಳಾಗಿವೆ. 12 ಬೆಕ್ಕಿನ ಮರಿಗಳನ್ನು ರಕ್ಷಣೆ ಮಾಡಲಾಗಿದ್ದು, ಅದರಲ್ಲಿಯೂ ಹೆಚ್ಚಿನ ಮರಿಗಳು ಹೆಣ್ಣಾಗಿವೆ ಎನ್ನುತ್ತಾರೆ ಟ್ರಸ್ಟ್‌ ಸದಸ್ಯರು.

 ಶಾಶ್ವತ ಮನೆ ಅವಶ್ಯ
ಬೀದಿಯಲ್ಲಿ ಬಿದ್ದಿರುವ ಅನಾಥ ನಾಯಿ, ಬೆಕ್ಕಿನ ಮರಿಗಳನ್ನು ಸಲಹುವುದು ಕರ್ತವ್ಯವೇ ಆದರೂ ಎಲ್ಲವನ್ನು ಮನೆಯಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಬಾಡಿಗೆ ಮನೆಯಲ್ಲಿರುವವರು, ವಿದ್ಯಾರ್ಥಿಗಳೂ ಇರುವುದರಿಂದ ಅವರಿಗೆಲ್ಲ ಸಲಹುವುದು ಕಷ್ಟವಾಗುತ್ತದೆ. ಶಾಶ್ವತ ಮನೆ ಇದ್ದಲ್ಲಿ ಅವುಗಳನ್ನು ನೋಡಿಕೊಳ್ಳಬಹುದು. ಯಾರಾದರು ಸಹಕರಿಸಿದಲ್ಲಿ ಇಂತಹ ನಾಯಿ ಮರಿಗಳು ಮುಂದೆ ಬೀದಿ ನಾಯಿಗಳಾಗದಂತೆ ತಡೆಯಬಹುದು.
– ಉಷಾ ತಾರಾನಾಥ,ಟ್ರಸ್ಟಿ ,ಲವ್‌ 4 ಪಾಪ್ಸ್‌

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next