Advertisement

ಹೆಣ್ಣು ಶಿಶು ಮಾರಾಟ ಕಳವಳಕಾರಿ

12:03 PM Mar 16, 2018 | Team Udayavani |

ಚಿಂಚೋಳಿ: ತಾಲೂಕಿನ ಕುಂಚಾವರಂ ಗಡಿಭಾಗದ ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ನಡೆಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಇದು ಲಂಬಾಣಿ ಸಮಾಜಕ್ಕೆ ಅತ್ಯಂತ ಕಳಂಕ ತರುವಂತದ್ದಾಗಿದೆ ಎಂದು ಗೊಬ್ಬೂರವಾಡಿ ಪೂಜ್ಯ ಬಳಿರಾಮ ಮಹಾರಾಜ ಹೇಳಿದರು.

Advertisement

ತಾಲೂಕಿನ ಶಾದಿಪುರದಲ್ಲಿ ಗುರುವಾರ ನೂತನ ಸಂತ ಶ್ರೀ ಸೇವಾಲಾಲ್‌ ಮಹಾರಾಜರ ಪುತ್ಥಳಿ ಉದ್ಘಾಟನಾ ಸಮಾರಂಭ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಹೆಣ್ಣು ಗಂಡು ಎಂಬ ಭೇದಭಾವ ಮಾಡಬಾರದು. ಎಷ್ಟೇ ಬಡತನ ಇದ್ದರೂ ಮಕ್ಕಳನ್ನು ಕಷ್ಟಪಟ್ಟು ಸಾಕಬೇಕು ಎಂದು
ಹೇಳಿದರು.

ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ತರುವಂತ ಕೆಲಸ ಮಾಡಬೇಡಿ. ಸ್ವಾಭಿಮಾನ ಮತ್ತು ಮಾನವೀಯತೆಯಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. 

ಕ್ರಿಶ್ಚಿಯನ್‌ ಮಿಶನರಿಗಳು ಲಂಬಾಣಿ ಸಮಾಜದವರಿಗೆ ಆಸೆ ಅಮಿಷ ತೋರಿಸಿ ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಳಿಸುತ್ತಿವೆ.
ಯಾರು ಮತಾಂತರಗೊಳ್ಳಬಾರದು. ಇಲ್ಲಿಯ ವರೆಗೆ 6 ಸಾವಿರ ಕುಟುಂಬಗಳು ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಂಡಿವೆ. ಬಾಗಲಕೋಟೆ, ಬೀಳಗಿ, ಹರಪನಹಳ್ಳಿ ತಾಲೂಕಿನಲ್ಲಿ ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಬಂಜಾರ ಸಮಾಜಕ್ಕೆ
ಕರೆ ತರಲಾಗಿದೆ ಎಂದು ಹೇಳಿದರು.

Advertisement

ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್‌ ಮಾತನಾಡಿ, ನಾನು ಚಿಂಚೋಳಿ ಶಾಸಕನಾಗಿ ಆಯ್ಕೆಯಾದ ನಂತರ ಎಲ್ಲ ಸಮಾಜದವರಿಗೆ ಸರಕಾರದ ಸೌಲಭ್ಯ ಒದಗಿಸಿ ಕೊಟ್ಟಿದ್ದೇನೆ. ಕೆಲವರು ಕೇವಲ ಲಂಬಾಣಿ ತಾಂಡಾದವರಿಗೆ ಸವಲತ್ತು ಒದಗಿಸಿ ಕೊಟ್ಟಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದು ಶುದ್ಧ ತಪ್ಪು. ತಾಲೂಕಿನ 140 ತಾಂಡಾಗಳಿಗೆ ಮೂಲ ಸೌಕರ್ಯ ಒದಗಿಸಿ ಕೊಡಲು ನೀವು ಅವಕಾಶ ಮಾಡಿಕೊಟ್ಟಿದ್ದೀರಿ. ನನಗೆ ರಾಜಕೀಯ ಶಕ್ತಿ ಸಿಕ್ಕಿದೆ. ಸರಕಾರದಿಂದ ಲಂಬಾಣಿ ಸಮಾಜಕ್ಕೆ ಅನೇಕ ಸೌಲಭ್ಯಗಳು ಸಿಕ್ಕರು ಸಹ ತಾಂಡಾಗಳಲ್ಲಿ ಹೆಣ್ಣು ಶಿಶು ಮಾರಾಟ ನಡೆಯುತ್ತಿವೆ ಎಂದು ಮರ್ಯಾದೆ ಹಾಳಾಗುತ್ತಿದೆ.
ಇನ್ನು ಇಂತಹ ಘಟನೆ ನಡೆಯಬಾರದು ಎಂದು ಮನವಿ ಮಾಡಿದರು.

ಬೇಟಿ ಪಡಾವೋ ಬೇಟಿ ಬಚಾವೋ ರಾಜ್ಯ ಸಂಚಾಲಕ ಸುಭಾಶ ರಾಠೊಡ, ತಾಂಡೂರ ಭೂ ಕೈಲಾಶ ವಾಸು ಪವಾರ, ರವಿರಾಜ ಕೊರವಿ ಮಾತನಾಡಿದರು.

ಜಿಪಂ ಸದಸ್ಯ ಹೀರುಬಾಯಿ ಜಾಧವ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಬಂಜಾರಾ ಸಮಾಜ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪವಾರ, ಪುರಸಭೆ ಸದಸ್ಯ ರಾಜು ಪವಾರ, ಶಾಮರಾವ ರಾಠೊಡ, ಶಾದಿಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾ ಪೂಜಾರಿ, ಉಪಾಧ್ಯಕ್ಷ ಸಂಜೀವ ಪವಾರ, ಪಾಂಡು ಪೂಜಾರಿ, ಶಂಕರ ಪವಾರ, ತಾರಾಸಿಂಗ ಜಾಧವ್‌ ಇದ್ದರು. ರಾಮಶೆಟ್ಟಿ ರಾಠೊಡ ಸ್ವಾಗತಿಸಿದರು. ವಿಜಯಕುಮಾರ ರಾಠೊಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next