ಪಡುಬಿದ್ರಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಾಪು ತಾ| ಘಟಕದ ಸಹಭಾಗಿತ್ವದಲ್ಲಿ ಸಂಪದ 2018 ‘ತಿಂಗಳ ಸಡಗರ’ ಕಾರ್ಯಕ್ರಮದಲ್ಲಿ ‘ಹಿರಿಯರೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದನ್ವಯ ಹಿರಿಯ ಪತ್ರಕರ್ತ, ಸಾಹಿತಿ, ಜಾನಪದ ವಿದ್ವಾಂಸ ಕುಂಜೂರು ಲಕ್ಷ್ಮೀನಾರಾಯಣ ಕುಂಡಂತಾಯ ಅವರ ನಿವಾಸದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಕುಂಡಂತಾಯ ದಂಪತಿಗೆ ಗೌರವ ಸಮರ್ಪಣೆ ನಡೆಸಿ ಸಂವಾದ ನಡೆಸಲಾಯಿತು. ಕಾಪು ತಾ| ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಸಿ ಮಾತನಾಡಿ ಕುಂಡಂತಾಯರ ಸಾಹಿತ್ಯ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸಂಘಟನ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಮಾತನಾಡಿದರು.
ಮನಕೆ ಮುದ ನೀಡುವುದು ಸಾಹಿತ್ಯ
ಗೌರವ ಸ್ವೀಕರಿಸಿ ಮಾತನಾಡಿದ ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ ಅವರು , ಮನಸ್ಸಿಗೆ ಮುದ ನೀಡುವುದೇ ಸಾಹಿತ್ಯದ ಮೊದಲ ಉದ್ದೇಶ. ಆದರೆ ಇಂದಿನ ಸಾಹಿತ್ಯಕ್ಕೆ ಆ ಗುಣ ಇದೆಯೇ ಎಂಬ ಬಗ್ಗೆ ಯೋಚಿಸುವ ಅಗತ್ಯವಿದೆ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಹಿಂದೆ ಆಗಿ ಹೋದ ನೂರಾರು ಸಾಹಿತಿಗಳು ವಿಪುಲವಾಗಿ ಮನಕ್ಕೆ ಆಹ್ಲಾದತೆಯನ್ನು ನೀಡುವ ಇಂತಹ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಪ್ರಸ್ತುತ ಇಂತಹ ಹಿರಿಯರ ಸಾಹಿತ್ಯಿಕ ಕೃಷಿಯು ಓದುವ ವಾತಾವರಣ ಸೃಷ್ಟಿ ಮಾಡುವ ಅಗತ್ಯವಿದೆ. ಜನಪದವು ನೈಜ ಸಾಹಿತ್ಯವಾಗಿದೆ. ಇದರಲ್ಲಿ ಕೃತಕತೆಯಿಲ್ಲ. ಸರಳವೂ ಮುಗ್ಧವೂ ಆದ ಜನಪದ ಹೃದಯದಿಂದ ಹೊಮ್ಮಿದ ಹೊಳಪುಗಳೇ ಜನಪದ ಸಾಹಿತ್ಯದ ಆತ್ಮ. ಇಂತಹ ನೈಜತೆಯೇ ಸಾಹಿತ್ಯದ ಆಂತರ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಬ್ರಹ್ಮಾವರ ತಾ| ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಕಾಪು ತಾ| ಕ. ಸಾ. ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿ, ನಿವೃತ್ತ ಉಪನ್ಯಾಸಕ ಏಕನಾಥ ಡೋಂಗ್ರೆ, ಪುಷ್ಪಾ ಎಲ್. ಕುಂಡಂತಾಯ, ಕಸಾಪ ಕಾಪು ತಾ| ಗೌರವ ಕೋಶಾಧಿಕಾರಿ ಎಸ್. ಎಸ್. ಪ್ರಸಾದ್, ಸದಸ್ಯರಾದ ಹರೀಶ್ ಕಟಾ³ಡಿ, ಪ್ರಜ್ಞಾ ಮಾರ್ಪಳ್ಳಿ, ದೆಂದೂರು ದಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಘಟಕದ ಗೌರವ ಕಾರ್ಯದರ್ಶಿ ವಿದ್ಯಾ ಅಮಣ್ಣಾಯ ವಂದಿಸಿದರು.