Advertisement

ಹೇಳಿದ್ರೂ ಕಷ್ಟ, ಹೇಳದಿದ್ರೂ ಕಷ್ಟ!ಏನ್ಮಾಡ್ಲಿ ಈಗ?

09:51 AM Dec 04, 2019 | Suhan S |

ಎಲ್ಲರಂತಿಲ್ಲದ ನನ್ನ ಬದುಕಿನಲ್ಲಿ ಬರೀ ನೋವು, ಹತಾಶೆ, ಸೋಲು. ತುಂಬು ಯೌವನದಲ್ಲೂ ಅಸಹಜ ಮುಖಭಾವ ನನ್ನನ್ನು ಆವರಿಸಿದ ದಿನಗಳವು. ಬಡವನಾಗಿಹುಟ್ಟಿದ್ದು ತಪ್ಪಲ್ಲ; ಬಡವನಾಗೇ ಸಾಯೋದು ತಪ್ಪು ಎಂದು ನಿರ್ಧರಿಸಿ ಸ್ಪಷ್ಟ ಗುರಿಯೊಂದಿಗೆ ಓದಿಗಿಳಿದು, ಬಹು ಅವಕಾಶದ ಕಾಲೇಜಿನ ಕಾರಿಡಾರಿನಲ್ಲಿ ಯಾವುದಕ್ಕೂ ಕೈಚಾಚದೆ ನನ್ನಗುರಿಯೆಡೆಗೆ ನಡೆಯುತ್ತಿದ್ದ ನಾನು ಆಗ ಒಂಟಿ ಪಯಣಿಗ.

Advertisement

ವಯೋಸಹಜ ಪ್ರೀತಿಆಕರ್ಷಣೆಗೆ ಒಳಗಾಗದೆ ನನ್ನಷ್ಟಕ್ಕೆ ನಾನಿದ್ದಾಗ ಒಂದು ಮುಗುಳ್ನಕ್ಕು ನನ್ನೆಡೆಗೆ ಬಂದು ಕೈಕುಲುಕಿ ನಿನ್ನನ್ನು ನೀನೇ ಪರಿಚಯಿಸಿಕೊಂಡು ಮಾತನಾಡಿದವಳು ನೀನು. ಆನಂತರದಲ್ಲಿ ನನ್ನ ಬದುಕಿನ ಮತ್ತೂಂದು ತಿರುವು ನೀನಾದೆ. ನಿತ್ಯದ ನಿನ್ನ ಭೇಟಿ, ಮಾತು, ಹರಟೆ, ಸುತ್ತಾಟ, ಹೋಗೋಬಾರೋ ಎನ್ನುವಷ್ಟರ ಮಟ್ಟಿಗೆ ಬೆಳೆದ ಸಲುಗೆ, ಒಬ್ಬರಿಗೊಬ್ಬರು ಕಾಲೆಳೆದು ಕೊಂಡು ಮಾಡುತ್ತಿದ್ದ ಚೇಷ್ಟೆ, ನನ್ನಲ್ಲಿ ಇನ್ನಿಲ್ಲದ ಬದಲಾವಣೆಯ ಜೊತೆಗೆ ನವ ಚೈತನ್ಯವನ್ನೇ ತಂದವು.ಅಪರಿಚಿತರಂತಿದ್ದ ನಾವಿಬ್ಬರೂ ಅದೆಷ್ಟು ಬೇಗ ಹತ್ತಿರವಾದೆವಲ್ಲ ಎಂಬುದೇ ಅಚ್ಚರಿ.

ನಿನ್ನನನ್ನ ಈ ಒಡನಾಟಕ್ಕೆ ಏನೆಂದು ಹೆಸರಿಡಲಿ ನಾನರಿಯೆ. ಕೆಲವು ಸಂಬಂಧಗಳಿಗೆ ಋಣಾನುಬಂಧ ಇರುತ್ತದಂತೆ. ಅದಾವ ಜನ್ಮದ ಋಣವೋ ಏನೋ? ನನ್ನ ಬದುಕಿನ ಬದಲಾವಣೆಗೆ ಮುನ್ನುಡಿಯಾದೆ ನೀನು. ನಿನ್ನೊಡನಿರುವ ಪ್ರತಿ ಕ್ಷಣವೂ ನನ್ನಲ್ಲೇನೋ ಆತ್ಮವಿಶ್ವಾಸ. ನಾವಿಬ್ಬರೂ ಎಷ್ಟೇ ಆಪ್ತವಾಗಿದ್ದರೂ, ಎಲ್ಲ ವಿಚಾರಗಳ ವಿನಿಮಯವಾಗಿದ್ದರೂ, ಎಲ್ಲವನ್ನೂ ಮುಚ್ಚುಮರೆಯಿಲ್ಲದೆ ಕೇಳಿ ಪಡೆಯುವ ಸ್ವಾತಂತ್ರ್ಯವಿದ್ದರೂ, ಎದೆಯಲ್ಲಿ ಚಿಗುರೊಡೆದ ಈ ಒಲವನ್ನು ಹೇಗೆ ವ್ಯಕ್ತಪಡಿಸಲಿ ಎಂದು ತಿಳಿಯದೆ ಒದ್ದಾಡುತ್ತಿದ್ದೇನೆ. ನಿನ್ನ ನಿರಾಕರಣೆಯ ಭಯಕ್ಕಿಂತ, ಇರುವ ಸಂಬಂಧವನ್ನು ಕಳೆದುಕೊಂಡೇನೆಂಬ ಆತಂಕ ನನಗೆ.

ಹೇಳದೇಯ ಹೋದರೂ ತಪ್ಪಾದೀತೆಂಬ ದಿಗಿಲು. ಏನನ್ನೂ ಹೇಳಿಕೊಳ್ಳದೆ ನನ್ನ ಸಂಕಟ ಅರ್ಥ ಮಾಡಿಕೊಂಡ ನಿನಗೆ ನನ್ನೀ ತೊಳಲಾಟ ಅರ್ಥವಾಗದಿರದು ಎಂಬ ಭರವಸೆಯಿಂದಲೇ ಕೇಳುತ್ತೇನೆ. ನನ್ನ ಬಾಳಿಗೆ ಬೆಳಕಾಗಿ ಬರುವೆಯಾ? ನಿನ್ನಾಗಮನದ ನಿರೀಕ್ಷೆಯಲ್ಲಿ. . .

ಅಶೋಕ ವಿ ಬಳ್ಳಾ

Advertisement
Advertisement

Udayavani is now on Telegram. Click here to join our channel and stay updated with the latest news.

Next