ಮಳೆಗಾಲದಲ್ಲಿ ಕೊಡೆ ಇದ್ದರೂ ಮಳೆಯಲ್ಲಿ ನಡೆಯುತ್ತಲೇ ಹೋಗಿ ಅಮ್ಮನಿಂದ ಬೈಗುಳ ಪೆಟ್ಟು ತಿನ್ನುವುದರಲ್ಲಿ ಖುಷಿಯಿತ್ತು. ಮಳೆಯಲ್ಲಿ ಆಟವಾಡುವುದರಲ್ಲಿಯೂ ಸಂಭ್ರಮವಿತ್ತು. ಮನೆಯಲ್ಲಿದ್ದರೂ ಕಣ್ತಪ್ಪಿಸಿ ಒಮ್ಮೆ ಅಂಗಳಕ್ಕೆ ಹಾರಿ ಬಿಡುವುದೆಂದರೆ ತುಂಬಾ ಖುಷಿ. ನೆನೆದು ಬಂದ ತತ್‌ಕ್ಷಣ ಬಿಸಿ ಬಿಸಿ ಸ್ನಾನ, ಕುರುಕಲು ತಿಂಡಿ ತಿನಸು ಬೆಚ್ಚನೆಯ ಬಟ್ಟೆಗಳನ್ನು ಹಾಕಿಕೊಂಡು ಕುಳಿತುಕೊಳ್ಳುವುದೆಂದರೆ ಸ್ವರ್ಗ ಸುಖ.
ಎಲ್ಲೋ ಮಳೆಯಾದರೆ ಸೃಷ್ಟಿಯಾಗುವ ತಂಪು ವಾತಾವರಣ, ತುಂತುರು ಮಳೆಯಾದ ತತ್‌ಕ್ಷಣ ಬರುವ ಮಣ್ಣಿನ ವಾಸನೆ ಯಾವ ಸುಗಂಧ ದ್ರವ್ಯಕ್ಕೆ ಸಾಟಿಯಿಲ್ಲ. ಮಳೆಯಿಂದ ಸಿಗುವ ಭಾವ, ಸುಖ ವರ್ಣಿಸಲು ಸಾದ್ಯವಿಲ್ಲ. ಚಿಟಪಟ ಮಳೆಹನಿಗಳು ಮಾಧುರ್ಯವನ್ನು, ತುಂತುರು ಹನಿಗಳು ಅದ್ಭುತವಾದ ಸೌಂದರ್ಯವನ್ನು ಅನುಭವಿಸುವುದು ಪರಮಾದ್ಭುತ.
ಮಳೆ ಅಂದಕೂಡಲೇ ಜನಪದ ಹಾಡುಗಳು ನೆನಪಾಗುತ್ತದೆ. ಯಾಕೆಂದರೆ ಜನಪದದಲ್ಲಿ ಮಳೆಗೆ ಒಂದು ಭಾವನೆಯನ್ನು ನೀಡುತ್ತಾರೆ. ಅದು ಸಂತೋಷವಾಗಿರಬಹುದು, ವಿಷಾದ ವಾಗಿರಬಹುದು, ನೋವಿಗೆ – ನಲಿವಿಗೆ ಅಥವಾ ಖನ್ನ ತೆಗೆ ತನ್ನದೇ ಆದ ಶೈಲಿಯನ್ನು ನೀಡುತ್ತದೆ. ಯಾವುದೇ ರೀತಿಯ ಭಾವನೆಗೆ ಹೊಂದಬಲ್ಲ ಹಾಡದು.
ಮಳೆ ಬಂದಾಗ ರೈತರು ಸಂಭ್ರಮಿಸುವ ರೀತಿಯೇ ಅದ್ಭುತ. ಮುಂಗಾರು ಆರಂಭದಲ್ಲಿ ಭೂಮಿಯನ್ನು ತೋಯಿಸುವ ಭರಣಿ ಮಳೆ, ಬೀಜ ಮೊಳಕೆ ಒಡೆಯಲು ರೋಹಿಣಿ, ಅನಂತರದ ಮೃದು ಮಳೆ ಹೀಗೆ ಒಂದೊಂದು ಮಳೆಯನ್ನು ಒಂದೊಂದು ರೀತಿಯಲ್ಲಿ ಆಹ್ವಾನಿಸುತ್ತಾರೆ ರೈತರು.
ಈಗ ಮಳೆ ಎಂದರೆ ಬರೀ ಕುಡಿಯುವ ನೀರು, ಬೆಳಗ್ಗೆ ನೀರು ಅನ್ನುವಷ್ಟಕ್ಕೆ ಸೀಮಿತವಾಗಿದೆ. ಈಗಿನ ಜನಗಳು ಬೆಚ್ಚನೆಯ ರೈನ್‌ಕೋಟ್ ಹಾಕಿಕೊಂಡು ಜಲಪಾತ ಝರಿಗಳನ್ನು ನೋಡಲು ಹೋಗುವುದು ಬಿಟ್ಟರೆ ಮಳೆಯನ್ನು ಆನಂದಿಸುವುದು ಕಡಿಮೆ. ಹೊರಗಡೆ ಧಾರಾಕಾರವಾಗಿ ಮಳೆ ಸುರಿದರೂ ಆಫೀಸಿನ ಒಳಗೆ ಕುಳಿತವರಿಗೆ ಅದರ ಒಂದು ಸಣ್ಣ ಅನುಭವವೂ ಇರುವುದಿಲ್ಲ.
ಸುನಿಲ ಕಾಶಪ್ಪನಮಠ
ಶ್ರೀ ಸಿದ್ದೇಶ್ವರ ಅಧ್ಯಯನ ಕೇಂದ್ರ ನರಗುಂದ