ಸಮಯ- ಸಂದರ್ಭ ಹೇಗೆ ಒದಗಿ ಬರ್ತದೋ ಗೊತ್ತಿಲ್ಲ. ಹಾಗಾಗಿ, ಒಂದಷ್ಟು ಅಗತ್ಯ ವಸ್ತುಗಳು ಮನೆಯಲ್ಲಿ ಹೆಚ್ಚುವರಿಯ ರೂಪದಲ್ಲಿ ಇದ್ದರೆ ತುಂಬಾ ಅನುಕೂಲ
ಲಾಕ್‌ಡೌನ್ ಕಾರಣದಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಯಾರೊಬ್ಬರೂ ಮನೆಯಿಂದ ಆಚೆ ಹೋಗಬಾರದು ಎಂಬ ಆದೇಶವೂ ಜಾರಿಯಾಗಿದೆ. ಹೆಚ್ಚು ಹೊತ್ತು, ಹೆಚ್ಚು ಜನ ಮನೆಯೊಳಗೇ ಇರುವುದರಿಂದ, ಮನೆಯಿಂದಲೇ ಕೆಲಸ ಮಾಡುವುದರಿಂದ, ಆಫೀಸ್‌ನ ಥರವೇ ಮನೆ ಕೂಡ ಸದಾ ಸ್ವಚ್ಛವಾಗಿ ಇರಲೇಬೇಕಾಗಿದೆ. ಇಂಥ ಸಂದರ್ಭದಲ್ಲಿಯೇ, ಒಂದಷ್ಟು ವಸ್ತುಗಳು ಅಗತ್ಯವಾಗಿ ಮನೆಯಲ್ಲಿ ಇರಬೇಕಿತ್ತು ಎಂದು ಹಲವರಿಗೆ ಅನ್ನಿಸತೊಡಗಿದೆ. ಆ ವಸ್ತುಗಳು ಯಾವುವು ಗೊತ್ತೇ?
1. ಕ್ಲೀನರ್- ಮನಸ್ಸು ಫ್ರೆಶ್ ಆಗಿರಬೇಕು ಅಂದರೆ, ನಾವು ಇರುವ ಜಾಗ ಕ್ಲೀನ್ ಆಗಿರಬೇಕು. ನಾವು ಕುಳಿತ ರೂಮಿನಲ್ಲಿ ಧೂಳು ಅಥವಾ ಕಸ ತುಂಬಿದ್ದರೆ, ಟೇಬಲ್‌ನ ಆಚೀಚೆ, ಬಾಗಿಲಿನ ಸಂದಿಯಲ್ಲಿ ಕಸ ಇದ್ದಾಗ, ಕಾಲಿಗೆ ಧೂಳು ಅಂಟುತ್ತಿದ್ದಾಗ ಕೆಲಸ ಮಾಡಲು ಉತ್ಸಾಹವೇ ಬರುವುದಿಲ್ಲ. ಕ್ಲೀನರ್ ಇದ್ದಿದ್ದರೆ ಇದನ್ನೆಲ್ಲಾ ಬೇಗ ಹೊರಗೆ ಹಾಕಬಹುದಿತ್ತು ಅನಿಸುವುದು ಆಗಲೇ. ಅಯ್ಯೋ, ಕ್ಲೀನರ್ ಇಲ್ಲದೇ ಹೋದ್ರೂ ನಡೆಯುತ್ತೆ ಬಿಡು ಅಂತ ಎಷ್ಟೋ ಬಾರಿ ಉಪೇಕ್ಷೆ ಮಾಡಿ ಬಂದಿರುತ್ತೇವೆ. ತಗೋಬಾರದು ಅನ್ನುವುದಕ್ಕೆ ಅದೇನೂ ದುಬಾರಿ ವಸ್ತು ಅಲ್ಲ. ಆದರೂ ಅದನ್ನು ಬಿಟ್ಟಿರುತ್ತೇವೆ. ಲಾಕ್‌ಡೌನ್‌ನಂಥ ಸಂದರ್ಭದಲ್ಲಿ, ಮನೆಯಲ್ಲೊಂದು ಕ್ಲೀನರ್ ಇದ್ದರೆ, ತುಂಬಾ ಅನುಕೂಲ ಅನ್ನಿಸದೇ ಇರದು.
2. ಎಲೆಕ್ಟ್ರಿಕ್ ಸ್ಟವ್ – ಸಿಲಿಂಡರ್ ಬಂದ ಮೇಲೆ ಎಲ್ಲರೂ ಎಲೆಕ್ಟ್ರಿಕ್ ಸ್ಟವ್‌ನ ಮರೆತೇ ಬಿಟ್ಟರು. ಅಯ್ಯೋ, ಅದರ ಅಗತ್ಯ ಇಲ್ಲ. ಫೋನ್ ಮಾಡಿದರೆ, ಒಂದೇ ದಿನದಲ್ಲಿ ಗ್ಯಾಸ್ ಬರುತ್ತೆ. ಎಲೆಕ್ಟ್ರಿಕ್ ಸ್ಟವ್‌ಗೆ ಸುಮ್ಮನೇ ದುಡ್ಡು ದಂಡ ಅನ್ನುವುದು ಎಲ್ಲರ ವಾದ ಆಗಿತ್ತು. ಆದರೆ ಈಗ, ಲಾಕ್‌ಡೌನ್ ಕಾರಣದಿಂದ, ಗ್ಯಾಸ್ ಯಾವಾಗ ಬರುತ್ತದೆ ಎಂದು ಹೇಳಲು ಆಗುತ್ತಿಲ್ಲ. ಇಂಥ ಸಂದರ್ಭದಲ್ಲಿ, ಆಲ್ಟರ್‌ನೆಟಿವ್ ರೂಪದಲ್ಲಿ ಒಂದು ಸ್ಟವ್ ಇರುವುದು ಲೇಸು.
3. ಆಟದ ವಸ್ತುಗಳು- ಸ್ಕಿಪ್ಪಿಂಗ್ ಚೈನ್, ಶಟಲ್ ಕಾರ್ಕ್ ಮತ್ತು ಬ್ಯಾಟ್… ಹೀಗೆ ಯಾವುದಾದರೊಂದು ಕ್ರೀಡಾ ಸಾಮಗ್ರಿ ಮನೆಯಲ್ಲಿ ಇರಲೇಬೇಕು. ನಮ್ಮ ಮನೆಗೆ
ಹತ್ತಿರದಲ್ಲೇ ಪಾರ್ಕ್ ಇದೆ. ಅಲ್ಲಿ ವಾಕ್ ಮಾಡಿದರೆ ಆಯ್ತು, ಆಫೀಸ್ 8ನೇ ಮಹಡಿಯಲ್ಲಿದೆ. ಮೆಟ್ಟಿಲು ಹತ್ತಿ ಇಳಿದರೆ ವ್ಯಾಯಾಮ ಆಗುತ್ತದೆ ಅನ್ನುತ್ತಿದ್ದವರು, ಈಗ ಸಣ್ಣದೊಂದು ವ್ಯಾಯಾಮ ಮಾಡಲೂ ಆಗದೆ ಒದ್ದಾಡುವಂತಾಗಿದೆ.
ಮನೆಯಲ್ಲಿ ಕಂಪ್ಯೂಟರ್ ಇದೆ ಅಂತಾದರೆ ಪ್ರಿಂಟರ್ ಇಂಕ್, ಪ್ರಿಂಟ್ ಕಾಪಿ ತೆಗೆಯುವ ಶೀಟ್‌ಗಳು, ಬಟ್ಟೆ ಹೊಲಿಯಲು ಅಗತ್ಯವಿರುವ ಬಗೆಬಗೆಯ ನೂಲಿನ ಉಂಡೆಗಳು, ಟೈಮ್ ಪಾಸ್‌ಗೆ ಪುಸ್ತಕಗಳು… ಹೀಗೆ, ಲಾಕ್ ಡೌನ್ ನಂಥ ಸಂದರ್ಭ ಎದುರಾದಾಗ ಇಂಥ ಹಲವು ವಸ್ತುಗಳು ಮನೆಯಲ್ಲಿ ಇದ್ದರೆ, ನಮ್ಮ ಕೆಲಸಗಳನ್ನು ಬೇಗ ಮುಗಿಸಲು ಸಹಾಯವಾಗುತ್ತದೆ.