Advertisement

ಮುಟ್ಟಿದರೆ ಮುನಿಯುವಳು…

12:30 AM Feb 06, 2019 | |

ಈ ಮದುವೆಯಲ್ಲಿ ಇರಲು ಸಾಧ್ಯವೇ ಇಲ್ಲವೆಂದು ಗಂಡ ಸಮೀರ್‌ (30) ಹಠಾತ್‌ ಆಗಿ ಮನೆ ಬಿಟ್ಟು ಬಿಟ್ಟು ಹೋಗಿರುವುದು ಲಲಿತಾಳಲ್ಲಿ ಆತಂಕ ಮೂಡಿಸಿದೆ. ಮದುವೆಯಾಗಿ ಇನ್ನೇನು ವರ್ಷವಾಗುತ್ತಾ ಬಂದರೂ, ಲಲಿತಾಗೆ (27) ಗಂಡನ ಸಾಮೀಪ್ಯವೇ ಹಿತವಾಗಿಲ್ಲ. ಮುಟ್ಟಕ್ಕೂ ಬಿಡದೇ ಕಾಡುತ್ತಾಳೆ. ಅವನಿಗೆ ಬೇರೆ ದಂಪತಿಯನ್ನು ನೋಡಿದಾಗ ಹೊಟ್ಟೆಕಿಚ್ಚು. ಸಾರ್ವಜನಿಕ ಸ್ಥಳದಲ್ಲಿ ಕೈ ಹಿಡಿದುಕೊಂಡರೆ ಮಿಸುಕಾಡುತ್ತಾಳೆ. ರಾತ್ರಿಯ ಹೊತ್ತು ಇವನೇನು ರೇಪ್‌ ಮಾಡಬಹುದು ಅನ್ನುವ ರೀತಿ, ಕೋಣೆಯ ಮೂಲೆಯಲ್ಲಿ ಕುಕ್ಕರಗಾಲಿನಲ್ಲಿ ಕುಳಿತು, ಗಡಗಡಾಂತ ನಡುಗಿದ್ದಾಳೆ. ಇವನಿಗೆ ಅವಳಿಂದ ತಿರಸ್ಕೃತನಾದಂತೆ ಅನಿಸುತ್ತದೆ. ಗಂಡನ ಸಂಕಷ್ಟ ಅರ್ಥವಾಗಿ, ಸಾಕಷ್ಟು ಪ್ರಯತ್ನ ಮಾಡಿದ್ದರೂ, ಇಬ್ಬರೂ ಸುಖೀಯಾಗಿಲ್ಲ.

Advertisement

ಮದುವೆ ನಿಶ್ಚಯವಾದ ಕೆಲವು ವಾರಗಳಲ್ಲಿ ಗಂಡು- ಹೆಣ್ಣು ಸರಸದಿಂದ ಮಾತನಾಡುತ್ತಾ ಹನಿಮೂನ್‌ ಬಗ್ಗೆ ಒಟ್ಟಿಗೆ ಕನಸು ಕಾಣುವುದು ಸಹಜ. ಆದರೆ, ಲಲಿತಾ ಅವನನ್ನು ಬಯ್ದಿದ್ದಾಳೆ. ಅವಳಿಗೆ ಆ ಚರ್ಚೆಯೆಲ್ಲಾ ಅಸಹ್ಯವಂತೆ!! ಇವಳು ಮಾಡಿದ ರಂಪಾಟಕ್ಕೆ ಹೆದರಿ, ಮಾವನವರಿಗೆ ಫೋನ್‌ ಮಾಡಿ, ಲಲಿತಾಗೆ ಮದುವೆ ಇಷ್ಟವಿಲ್ಲದಿದ್ದರೆ ತಿಳಿಸಿ ಎಂದು ಅವಲತ್ತುಕೊಂಡಿದ್ದ. ಸ್ವಲ್ಪ ನಾಚಿಕೆ ಇರಬಹುದು ಎಂದು ಮಾವ, ಸಮಾಧಾನ ಮಾಡಿದ್ದರು. ಲಲಿತಾ ಕಾನೂನು ಪದವೀಧರೆ, ಕೆಲಸದಲ್ಲಿದ್ದಾಳೆ. ನೋಡಲು ಮುದ್ದಾಗಿದ್ದಾಳೆ. ಮಾವನ ಮಾತಿಗೆ ಒಪ್ಪಿಕೊಂಡು ಸಮೀರ್‌ ಮುಂದುವರಿದ.

ಕೆಲವು ಹೆಣ್ಣುಮಕ್ಕಳಿಗೆ ಸೆಕ್ಸ್‌ ಬಗ್ಗೆ ಒಂದು ಮಟ್ಟದ ಮಡಿವಂತಿಕೆ ಸಹಜ. ಸತಿ- ಪತಿಗಳ ನಡುವೆ ಸರಸ ಸಲ್ಲಾಪವೇ ಇರದ, ಅಸಹಜ ಭಯಕ್ಕೆ ಚಿಕಿತ್ಸೆಯ ಅಗತ್ಯವಿದೆ. ಮೊದಲು ಸಮೀರನ ಮನಸ್ಸನ್ನು ಸಮಾಧಾನಕ್ಕೆ ತರಲು ನನ್ನ ಬಳಿ ಪ್ರತಿಯೊಂದು ಘಟನೆಯನ್ನೂ ವಿವರಿಸಿ ಹೇಳಿಕೊಳ್ಳಲು ಅನುವು ಮಾಡಿಕೊಟ್ಟೆ. ಇದನ್ನು venting out ಎನ್ನುತ್ತಾರೆ. ಈ ಮಧ್ಯ, ಲಲಿತಾ ಪ್ರಸೂತಿ ತಜ್ಞರ ಬಳಿ ಸಲಹೆಗೆ ಹೋದಳು. ಹಲವಾರು ಪರೀಕ್ಷೆ ಮಾಡಲಾಯಿತು. ನಂತರ sexologist ಬಳಿ ಇಬ್ಬರನ್ನೂ, ಸಲಹೆಗಾಗಿ ಕಳಿಸಿದೆ. ಲೈಂಗಿಕ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಕಲ್ಪನೆಯೂ ಇರದೇ, ಗಂಡನಿಗೆ ಎಷ್ಟು ನೋವಾಗಬಹುದೆಂದು ಕೌನ್ಸೆಲಿಂಗ್‌ ಮೂಲಕ ತಿಳಿದುಕೊಂಡಳು. ಸಂಬಂಧ ಸುಧಾರಿಸಿತು.

ಹುಡುಗಿಗೆ ಎದೆ ಕಡಿಮೆ ಇದ್ದಲ್ಲಿ, ತನ್ನ ದೈಹಿಕ ಆಕರ್ಷಣೆಯ ಬಗ್ಗೆ ಹೀನಭಾವವಿರಬಹುದು; ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಕಿರುಕುಳವಾಗಿರಬಹುದು; ತಂದೆ, ಮಗಳ ಬಗ್ಗೆ ಉತ್ಕಟ ಪ್ರೇಮ ಮತ್ತು ಕಾಳಜಿ ಹೊಂದಿದ್ದು, ತಾಯಿ- ಮಗಳ ಸಂಬಂಧ ಜಾಳು ಜಾಳಗಿದ್ದಲ್ಲಿ, ತಂದೆ- ತಾಯಿ ಸದಾ ಜಗಳವಾಡುತ್ತಿದ್ದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಉದ್ವಿಗ್ನತೆ ಇದ್ದಲ್ಲಿ, ಹೆಣ್ಣು ಗಂಡಿನ ಪಾಲಿಗೆ ಗಗನಕುಸುಮ ಆಗುತ್ತಾಳೆ. ಸರಿಯಾಗಿ ಗುರುತಿಸಿ, ಚಿಕಿತ್ಸೆ ನೀಡಬಹುದು.

ಹೆಣ್ಣು ಮಕ್ಕಳು ಚಿಕ್ಕವರಿರುವಾಗ ಪರೀಕ್ಷಾಭಯ ಹೊಂದಿದ್ದರೆ; ಟೀವಿ ನೋಡುವಾಗ ಪ್ರೇಮಗೀತೆಗಳ ಬಗ್ಗೆ ಅತೀ ನಾಚಿಕೆ ಹೊಂದಿದ್ದರೆ; ಕಾರಣವಿಲ್ಲದೆ ಅಳುತ್ತಿದ್ದರೆ; ಹಟಮಾರಿಗಳಗಿದ್ದರೆ ಮತ್ತು ಕೀಳರಿಮೆ ಇದ್ದಲ್ಲಿ ಒಮ್ಮೆ ಕೌನ್ಸೆಲಿಂಗ್‌ ಕೊಡಿಸಿ. ದೈಹಿಕ ವ್ಯಾಯಾಮವೂ ಅತ್ಯಗತ್ಯ.

Advertisement

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next