Advertisement

ಈ ವಾರ ತೆರೆಗೆ ‘ಫೀಲ್ ಮೈ ಲವ್’

05:54 PM May 12, 2023 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಔಟ್‌ ಆ್ಯಂಡ್‌ ಔಟ್‌ ಲವ್‌ ಸ್ಟೋರಿ ಸಿನಿಮಾ “ಫೀಲ್‌ ಮೈ ಲವ್‌’ ಈ ವಾರ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. “ಜಿ.ಟಿ ಪ್ರೊಡಕ್ಷನ್‌’ ಬ್ಯಾನರ್‌ನಡಿಯಲ್ಲಿ ಗೌಸ್‌ಪೀರ್‌ ಸಾಬ್‌ ನಿರ್ಮಿಸಿರುವ ಚೊಚ್ಚಲ ಸಿನಿಮಾ “ಫೀಲ್‌ ಮೈ ಲವ್‌’ಕ್ಕೆ ಡಿ. ಟಿ ರಮೇಶ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

“ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಂಪೂರ್ಣ ಲವ್‌ ಸ್ಟೋರಿಸಿನಿಮಾಗಳ ಸಂಖ್ಯೆ ತುಂಬ ಕಡಿಮೆಯಾಗಿದೆ. ಇಂಥ ಸಮಯದಲ್ಲಿ ಲವ್‌ ಸ್ಟೋರಿ ಬಯಸುವ ಸಿನಿಪ್ರಿಯರಿಗೆ ಇಷ್ಟವಾಗುವಂತೆ, “ಫೀಲ್‌ ಮೈ ಲವ್‌’ ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ’ ಎಂಬುದು ಚಿತ್ರತಂಡದ ಭರವಸೆಯ ಮಾತು.

“ಫೀಲ್‌ ಮೈ ಲವ್‌’ ಸಿನಿಮಾದಲ್ಲಿ ನಾಯಕನಾಗಿ ರಾಕೇಶ್‌, ನಾಯಕಿಯಾಗಿ ಚರಿತಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪ್ರೀತು ಪೂಜಾ, ಮಂಜುನಾಥ್‌ ಹೆಗಡೆ, ಬೃಂದೇಶ್ವರೀ ಬಾನವಾಡಿ, ವಿಜಯ್‌ ಕಾಶಿ, ಅಭಿಲಾಶ್‌, ಬುಲೆಟ್‌ ವಿನು, ರಾಜೇಶ್‌, ಯೋಗಿ ಆಚಾರ್‌ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡುವ ನಾಯಕ ನಟ ರಾಕೇಶ್‌, “ಈ ಸಿನಿಮಾದಲ್ಲಿ ಎರಡು ಶೇಡ್‌ ಇರುವಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸುಮಾರು ನಾಲ್ಕೈದು ವರ್ಷದ ನಂತರ ಈ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ಇಡೀ ಫ್ಯಾಮಿಲಿ ಆಡಿಯನ್‌ ಗೆ ಇಷ್ಟವಾಗುವಂಥ ಸಬ್ಜೆಕ್ಟ್ ಸಿನಿಮಾದಲ್ಲಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

ಚಿತ್ರಕ್ಕೆ ವಿನಯ್‌ ಹೊಸದುರ್ಗ ಛಾಯಾಗ್ರಹಣ, ದೀಪಕ್‌ ಗೌಡ ಸಂಕಲನವಿದೆ. ಬೆಂಗಳೂರು, ಬಳ್ಳಾರಿ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಒಟ್ಟಾರೆ ಹೊಸಬರ ಹೊಸ ಪ್ರೇಮ್‌ ಕಹಾನಿ ಹೇಗಿದೆ ಎಂಬುದು ಈ  ವಾರಾಂತ್ಯದಲ್ಲಿ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next