ಮುಂಡಗೋಡ: ಈ ವರ್ಷ ಅತಿಹೆಚ್ಚು ಮಳೆ ಸುರಿದ ಪರಿಣಾಮ ಗೋವಿನಜೋಳ ಬೆಳೆ ಇಳುವರಿ ಕಡಿಮೆಯಾಗುತ್ತಿರುವುದು ರೈತ ಸಮೂಹದಲ್ಲಿ ಬೇಸರ ಮೂಡಿಸಿದೆ.
ಮುಂಡಗೋಡ ತಾಲೂಕಿನಲ್ಲಿ ಹತ್ತಾರು ವರ್ಷಗಳ ಹಿಂದೆ ಸಾಕಷ್ಟು ಪ್ರಮಾಣದ ಮಳೆ ಸುರಿಯುತ್ತಿದ್ದ ಕಾರಣ ತಾಲೂಕಿನ ಶೇ.80 ರಷ್ಟು ರೈತರು ಭತ್ತದ ಬೆಳೆ ಬೆಳೆಯುತ್ತಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಮಳೆ ಹಾನಿ ಅನುಭವಿಸುತ್ತಾ ಬಂದ ಪರಿಣಾಮ ಬೇರೆ ಬೇರೆ ಬೆಳೆಗಳತ್ತ ಮುಖ ಮಾಡಿದ್ದಾರೆ. ಕಳೆದ ಐದುವರ್ಷಗಳ ಹಿಂದೆ ತಾಲೂಕಿನಲ್ಲಿ ಕೇವಲ ಎರಡುನೂರು ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗುತ್ತಿತ್ತು. ಈ ಬೆಳೆಯಲ್ಲಿ ಉತ್ತಮ ಲಾಭ ಸಿಗುತ್ತಿರುವುದನ್ನು ಕಂಡು ರೈತರು ವರ್ಷದಿಂದ ವರ್ಷಕ್ಕೆ ಗೋವಿನಜೋಳ ಬೆಳೆಯತ್ತ ಮುಖ ಮಾಡಿದ್ದರು.
ಕಳೆದ ಸಾಲಿನಲ್ಲಿ ನಾಲ್ಕು ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ರೈತರು ಗೋವಿನಜೋಳ ಬೆಳೆಯುವ ಮೂಲಕ ತಾಲೂಕಿನ ಇತಿಹಾಸದಲ್ಲಿಯೆ ಪ್ರಥಮ ಬಾರಿಗೆ ಅತಿ ಹೆಚ್ಚು ಪ್ರದೇಶದಲ್ಲಿ ಗೋವಿನಜೋಳ ಬೆಳೆ ಬೆಳೆದಿದ್ದಾರೆ. ಗೋವಿನಜೋಳದ ಬೆಳೆಗೆ ಮಳೆ ಕಡಿಮೆಯಾದರೆ ಉತ್ತಮ. ಇನ್ನೂ ಬಿತ್ತನೆ ಮಾಡುವಾಗ ಹಾಗೂ ನಂತರದಲ್ಲಿ ಆಗಾಗ ಅಲ್ಪ ಪ್ರಮಾಣದ ಮಳೆಯಾದರೆ ಸಾಕು ಗೋವಿನಜೋಳದ ಬೆಳೆ ಉತ್ತಮವಾಗಿ ಇಳುವರಿ ಬರುತ್ತದೆ.
ಆರಂಭದಲ್ಲಿ ಗೋವಿನಜೋಳ ಬೆಳೆಗೆ ಉತ್ತಮ ಹದ ಮಳೆಯಾಗಿತ್ತು. ಇದರಿಂದ ಗೋವಿನಜೋಳ ಬೆಳೆಗಾರರು ಈ ಭಾರಿ ಉತ್ತಮ ಇಳುವರಿ ಹೊಂದಬಹುದು ಎಂಬ ಆಶಾ ಭಾವನೆಯಲ್ಲಿದ್ದರು. ಆದರೆ ಕಳೆದೆರಡು ತಿಂಗಳ ಹಿಂದೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಗೋವಿನಜೋಳದ ಚಿಕ್ಕ ತೆನೆಗಳು ಹಾಕಿರುವುದರಿಂದ ಇಳುವರಿಯಲ್ಲಿ ಅರ್ಧದಷ್ಟು ಕುಂಠಿತವಾಗಿದೆ.
ಉತ್ತಮ ಇಳುವರಿಯೊಂದಿಗೆ ಹೆಚ್ಚಿನ ಲಾಭ ಹೊಂದಬಹುದು ಎಂಬ ಲೆಕ್ಕಾಚಾರದೊಂದಿದೆ ಗೋವಿನಜೋಳ ಬೆಳೆ ಬೆಳೆದಿದ್ದ ರೈತರಿಗೆ ಸತತ ಮಳೆಯಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಹೆಚ್ಚಿನ ಲಾಭದ ನೀರಿಕ್ಷೆಯಲ್ಲಿದ್ದ ರೈತರಿಗೆ ಈ ಭಾರಿ ಸಂಕಷ್ಟ ಎದುರಾಗಿದೆ. ಇದೀಗ ಗೋವಿನಜೋಳ ಬೆಳೆ ಕಟಾವ್‌ಗೆ ಬಂದಿದ್ದು ಸಣ್ಣ. ಸಣ್ಣ ತೆನೆಗಳನ್ನು ನೋಡುತ್ತಿರುವ ರೈತರು ಇಳುವರಿ ಕಡಿಮೆಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.
-ಚಂದ್ರಶೇಖರಯ್ಯ ಹಿರೇಮಠ