ದೊಡ್ಡಬಳ್ಳಾಪುರ: ಮುಸುಕಿನಜೋಳಕ್ಕೆ ಸೈನಿಕ ಹುಳುವಿನ ಬಾಧೆ ತಪ್ಪಿಸಲು ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಬಂಧಿಸಿದ ಕೀಟನಾಶಕ ದಾಸ್ತಾನು ಇದೆ. ಸೈನಿಕ ಹುಳುವಿನ ಬಾಧೆ ಇರುವ ರೈತರು, ಕೂಡಲೇ ರಿಯಾಯಿತಿ ದರದಲ್ಲಿ ಕೀಟನಾಶಕ ಸಿಂಪರಣೆ ಮಾಡಬೇಕು. ಅಲ್ಲದೆ ಬಾಧೆ ಇಲ್ಲದಿರುವ ರೈತರೂ ನಿಗದಿತ ಸಮಯದಲ್ಲಿ ಕೀಟನಾಶಕ ಸಿಂಪರಣೆ ಮಾಡಿದರೆ, ಸೈನಿಕ ಹುಳುಗಳ ಹತೋಟಿ ಸಾಧ್ಯವಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಸೈನಿಕ ಹುಳು ಕಾಟಕ್ಕೆ ರೈತರ ಆತಂಕ: ತಾಲೂಕಿನಲ್ಲಿ ಮುಸುಕಿನಜೋಳದ ಪೈರುಗಳಿಗೆ ಮುತ್ತಿಕೊಂಡಿರುವ ಸೈನಿಕ ಹುಳುಗಳ ಹಾವಳಿಯಿಂದ ರೈತರು ಕಂಗಾಲಾಗಿ ದ್ದಾರೆ. ಎಷ್ಟೇ ಔಷಧಿ ಸಿಂಪರಣೆ ಮಾಡಿದರೂ, ಹುಳು ಗಳು ನಿಯಂತ್ರಣಕ್ಕೆ ಬಾರದೇ ಇರುವುದರಿಂದ ರೈತರಿಗೆ ಜೋಳದ ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ರೈತರು ದೂರಿದರು. ದೂರಿನ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಅಧಿಕಾರಿಗಳಿಂದ ಮಾಹಿತಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿರುವ ಮುಸುಕಿನಜೋಳದ ಗದ್ದೆಗಳಿಗೆ ಭೇಟಿ ನೀಡಿದ ಜಿಲ್ಲಾ ಕೃಷಿ ನಿರ್ದೇಶಕಿ ವಿನುತಾ, ಪರಿಶೀಲನೆ ನಡೆಸಿ, ರೈತರಿಗೆ ಹುಳುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ರಾಗಿ ಮತ್ತು ಮುಸುಕಿನ ಜೋಳ ಮುಖ್ಯ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೈನಿಕ ಹುಳು ಬಾಧೆ, ರಾಗಿ ಮತ್ತು ಜೋಳ ಬೆಳೆಯಲ್ಲಿ ಕಂಡುಬಂದಿದೆ. ರೈತರು ಕೀಟನಾಶಕ ಸಿಂಪಡಿಸದೆ ಬೆಳೆಯುವ ಬೆಳೆಗೂ ಔಷಧ ಸಿಂಪಡಿಸುವ ಸಂದಿಗ್ಧ ಪರಿಸ್ಥಿತಿ ಒದಗಿದೆ. ರೈತರು ಸಾಂದರ್ಭಿಕ ಶಿಫಾರಸಿನಲ್ಲಿ ಈ ಕೆಳಗಿನ ಹತೋಟಿ ಕ್ರಮಗಳನ್ನು ಕೈಗೊಳ್ಳಬಹುದು. ಈಗಾಗಲೇ ನಿಗದಿತ ಸಮಯಕ್ಕೆ ಔಷಧ ಸಿಂಪರಣೆ ಮಾಡಿರುವ ರೈತರ ತೋಟಗಳಲ್ಲಿ ಹುಳುಗಳ ಹಾವಳಿ ನಿಯಂತ್ರಣಕ್ಕೆ ಬಂದಿದೆ ಎಂದರು.
ಔಷಧ ಸಿಂಪಡಿಸಿ: ಬೆಳೆಯಲ್ಲಿ ಸೈನಿಕ ಮರಿಹುಳು ಕಂಡರೆ ಶೇ.5ರಷ್ಟು ಬೇವಿನ ಅಂಶ ಹೊಂದಿರುವ ಕೀಟ ನಾಶಕವನ್ನು 5 ಮಿ.ಲೀ. ಔಷಧವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 2 ಗ್ರಾಂ. ಶಿಲೀಂದ್ರವನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆಗೆ ಸಿಂಪಡಿಸಬೇಕು. ಇಮಾಮೆಕ್ಟಿನ್ ಬೆಂಜೋಯೇಟ್ 4 ಗ್ರಾಂ ಅಥವಾ ಸ್ಟೈನೋಸಾಡ್ 45 ಎಸ್.ಸಿ. 3 ಮಿ.ಲೀ. ಅಥವಾ ಥೈಯೋಡೈಕಾರ್ಬ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸುವುದು.
ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷ ಪ್ರಾಷಣದ ಬಳಕೆಯಾಗಿ 10 ಕೆ.ಜಿ. ಗೋಧಿ ತೌಡು ಅಥವಾ ಅಕ್ಕಿ ತೌಡು (ಬೂಸ) 1 ಕೆ.ಜಿ. ಬೆಲ್ಲಕ್ಕೆ ಬೇಕಾಗುವಷ್ಟು ತಕ್ಕಮಟ್ಟಿಗೆ ನೀರನ್ನು ಬೆರೆಸಿಟ್ಟು ಮಾರನೇ ದಿನ 100 ಗ್ರಾಂ ಥೈಯೋಡೈಕಾರ್ಬ್ ಪ್ರತಿ ಕೆ.ಜಿ. ಭತ್ತದ ತೌಡಿಗೆ 10 ಗ್ರಾಂ ನಂತೆ ಕೀಟನಾಶಕ ಮಿಶ್ರಣಮಾಡಿ ಬೆಳೆಯ ಸುಳಿಯಲ್ಲಿ ಉದುರಿಸಬೇಕು. ಕ್ಲೋರೋಪೈರಿಫಾಸ್ ಅಥವಾ ಕ್ವಿನಾಲ್ಫಾಸ್ 2 ಮೀ.ಲಿ. ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆಯ ಸುಳಿಯಲ್ಲಿ ಸಿಂಪರಣೆ ಮಾಡಬೇಕಿದೆ ಎಂದು ರೈತರಿಗೆ ಸಲಹೆ ನೀಡಿದರು.