ಶಿರಹಟ್ಟಿ: ಸತತವಾಗಿ ಬರದಿಂದ ತತ್ತರಿಸಿದ್ದ ರೈತ ಸಮುದಾಯ ಪ್ರಸಕ್ತ ಮುಂಗಾರು ತಡವಾಗಿದ್ದರೂ ಸಹಿತ ಹರ್ಷದಿಂದ ಭೂಮಿತಾಯಿಗೆ ಬಿತ್ತನೆ ಬೀಜ ಅರ್ಪಿಸಿದ್ದ. ಆದರೆ ಬೆಳೆದು ನಿಂತಿರುವ ಗೋವಿನಜೋಳ ಬೆಳೆಗೆ ಸೈನಿಕ ಹುಳ (ಲದ್ದಿಹುಳ) ಕೀಟ ಬಾಧೆಯಿಂದ ಬೆಳೆನಾಶ ಸಂಭವಿಸುತ್ತಿದೆ.
ಅಲ್ಪಸ್ವಲ್ಪ ಮಳೆಯಿಂದಾಗಿ ರೈತಾಪಿ ಸಮುದಾಯ ಕೃಷಿ ಕಾರ್ಯವನ್ನು ಹುರುಪಿನಿಂದಲೇ ಆರಂಭಿಸಿದ್ದರು. ಕೀಟಬಾಧೆಯಿಂದಾಗಿ ಬೆಳೆಗೆ ಪೆಟ್ಟು ಬಿದ್ದಂತಾಗಿದೆ. ಅಲ್ಲದೇ ಬೇರೆ ಬೆಳೆಗಳಿಗೆ ರೋಗಗಳು ಕಾಣಿಸಿಕೊಳ್ಳುತ್ತಿರುವುದು ರೈತರಲ್ಲಿ ಆತಂಕವುಂಟು ಮಾಡಿದೆ. ಹೆಸರು ಬೆಳೆಗೆ ಹಳದಿ ರೋಗ , ಹತ್ತಿಬೆಳೆಗೆ ಕೆಂಪು ರೋಗ, ಮುಟಗಿ ರೋಗ ಇನ್ನೂ ಗೋವಿನ ಜೋಳಕ್ಕೆ ಸೈನಿಕ ಹುಳುವಿನ ಕಾಟ ಹೆಚ್ಚಾಗಿ ರೈತ ಕಂಗಾಲುವ ಸ್ಥಿತಿ ಬಂದೊದಗಿದೆ.
ರೈತ ಸಮುದಾಯ ಸಾಕಷ್ಟು ಶ್ರಮ ಪಟ್ಟು ವರ್ಷದ ಜೀವನಕ್ಕಾಗಿ ತಮ್ಮ ಜಮೀನಿನಲ್ಲಿರುವ ಬೆಳೆಯನ್ನೇ ಅವಲಂಭಿಸಿದ್ದು, ಅದಕ್ಕೆ ಕುತ್ತು ಬಂದರೆ ಭವಿಷ್ಯದಲ್ಲಿ ಬದುಕುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಬೆಳೆ ರಕ್ಷಿಸಿಕೊಳ್ಳವುದಕ್ಕಾಗಿ ಸಾಕಷ್ಟು ಗೊಬ್ಬರ, ಔಷಧೋಪಚಾರಕ್ಕಾಗಿ ಮಾಡುವ ಖರ್ಚು ಉತ್ಪನ್ನಕ್ಕಿಂತ ಹೆಚ್ಚು ಆಗುತ್ತದೆ. ಇದರಿಂದ ರೈತನ ಬದುಕು ಸಂಕಷ್ಟಕ್ಕೆ ಸಿಲುಕಿದೆ.
ಗೋವಿನ ಜೋಳಕ್ಕೆ ಸೈನಿಕ ಹುಳ ಬಾಧೆಯಾಗಿದ್ದರಿಂದ ಜೋಳದ ಎಲೆಗಳನ್ನು ತಿಂದು ಬೆಳೆನಾಶ ಪಡಿಸುತ್ತಿದೆ. ದಿನದಿಂದ ದಿನಕ್ಕೆ ಕೀಟ ಬಾಧೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ರೈತ ಹೈರಾಣರಾಗುತ್ತಿದ್ದಾರೆ. ಬೆಳೆಯ 5 ದಿನದಿಂದ 35 ದಿನಗಳವರೆಗೆ ಹುಳ ಎಲೆಯನ್ನು ತಿಂದರೆ ಬೆಳೆ ಪ್ರಬುದ್ಧವಾಗಿ ಬರಲಾರದು. ಇದರಿಂದ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುಲಾಗುತ್ತಿದೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನಲ್ಲಿ 6120 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳದ ಬಿತ್ತನೆ ಮಾಡಲಾಗಿದೆ. ಬೆಳೆಯ ರಕ್ಷಣೆ ಮಾಡಲು ಸೌರದೀಪ ಬಳಕೆ ಮಾಡಬೇಕು. ಇಲ್ಲವಾದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಬೇಕಾದ ಔಷಧಿಗಳು ಕೃಷಿ ಇಲಾಖೆಯಲ್ಲಿ ಲಭ್ಯ ಇರುವುದರಿಂದ ಔಷಧಿಯನ್ನು ಸಿಂಪಡಿಸಿ ಬೆಳೆ ರಕ್ಷಿಸಿಕೊಳ್ಳಬಹುದಾಗಿದೆ.
•ಪ್ರಕಾಶ ಶಿ. ಮೇಟಿ