Advertisement

ಶುಲ್ಕ ವಿನಾಯಿತಿ ಮೊತ್ತ ಖಜಾನೆಗೆ ವಾಪಸ್‌!  

10:48 PM Jan 27, 2022 | Team Udayavani |

ಮಂಗಳೂರು: ವಿದ್ಯಾರ್ಥಿಗಳ ಬ್ಯಾಂಕ್‌ ಅಥವಾ ಅಂಚೆ ಕಚೇರಿಯ ಉಳಿತಾಯ ಖಾತೆಗೆ ಆಧಾರ್‌ ಸೀಡಿಂಗ್‌ ಸಮರ್ಪಕವಾಗಿ ನಡೆಯದಿರುವ ಕಾರಣ ಎಸೆಸೆಲ್ಸಿ ಅನಂತರದ ಸಾವಿರಾರು ವಿದ್ಯಾರ್ಥಿಗಳಿಗೆ ವಿವಿಧ ಇಲಾಖೆಗಳಿಂದ ಸಿಗುವ ಶುಲ್ಕ ವಿನಾಯಿತಿ ಮೊತ್ತ ಸರಕಾರಕ್ಕೆ ವಾಪಸ್‌ ಹೋಗುತ್ತಿದೆ.

Advertisement

ಕಾಲೇಜಿಗೆ ದಾಖಲಾಗುವಾಗ ಪಾವತಿಸಿದ ಬೋಧನ ಶುಲ್ಕ, ಗ್ರಂಥಾಲಯ ಶುಲ್ಕ, ಕ್ರೀಡಾ ಶುಲ್ಕವನ್ನು ಅನಂತರ ವಿವಿಧ ಇಲಾಖೆಗಳು ವಿದ್ಯಾರ್ಥಿಗಳ ಖಾತೆಗೆ ಮರು ಜಮೆ ಮಾಡುತ್ತವೆ. ಅದಕ್ಕಾಗಿ ಖಾತೆಗೆ ಆಧಾರ್‌ ಸೀಡಿಂಗ್‌ ಆಗಿರಬೇಕು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯಿಂದ ಎಸೆಸೆಲ್ಸಿ ಅನಂತರದ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನ ಶುಲ್ಕ ವಿನಾಯಿತಿ ಮಂಜೂರಾಗಿದೆ. ಆದರೆ ಕೆಲವು ವಿದ್ಯಾರ್ಥಿಗಳ ಖಾತೆಗೆ ಎನ್‌ಪಿಸಿಐ (National Payments Corporation of India) ಆಧಾರ್‌ ಸೀಡಿಂಗ್‌ ಆಗದ ಕಾರಣ ಶುಲ್ಕ ವಿನಾಯಿತಿ ಮೊತ್ತ ಡಿಬಿಟಿ ಮೂಲಕ ಜಮೆ ಆಗುತ್ತಿಲ್ಲ. ಪ್ರತೀ ಇಲಾಖೆಯಲ್ಲಿಯೂ ತಲಾ 5 ಸಾವಿರದಂತೆ 15 ಸಾವಿರಕ್ಕಿಂತ ಅಧಿಕ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಎದುರಾಗಿದೆ.

ಮಾಹಿತಿಯ ಬಳಿಕ ಕೆಲವರಿಂದ ಸೀಡಿಂಗ್‌!:

ಪ್ರತೀ ಜಿಲ್ಲೆಯಲ್ಲಿ ಒಂದೊಂದು ಇಲಾಖೆಯಲ್ಲಿ ತಲಾ 2 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳ ಆಧಾರ್‌ ಸೀಡಿಂಗ್‌ ಆಗಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಲಾಭ ದೊರೆತಿರಲಿಲ್ಲ. ಈ ಬಗ್ಗೆ ಆಯಾ ಜಿಲ್ಲೆಯ ಇಲಾಖೆ ಯವರು ಕಾಲೇಜು ಹಾಗೂ ವಿದ್ಯಾರ್ಥಿಗಳ ಮೂಲಕ ಸಂಪರ್ಕಿಸಿ ಆಧಾರ್‌ ಸೀಡಿಂಗ್‌ ಮಾಡುವ ಬಗ್ಗೆ ಸೂಚಿಸಿದ್ದಾರೆ. ಇದರಂತೆ ಬಹುತೇಕ ಜಿಲ್ಲೆಯಲ್ಲಿ ತಲಾ 1 ಸಾವಿರ ವಿದ್ಯಾರ್ಥಿಗಳು ಸೀಡಿಂಗ್‌ ಮಾಡಿದ್ದಾರೆ.

Advertisement

ಮಾಡದಿರಲು ಕಾರಣವೇನು? :

ಕೆಲವು ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮೊತ್ತ ಕಡಿಮೆ (2 ಅಥವಾ 3 ಸಾವಿರ ರೂ.) ಇರುವ ಕಾರಣ ಆಧಾರ್‌ ಸೀಡಿಂಗ್‌ಗೆ ಮನಸ್ಸು ಮಾಡುತ್ತಿಲ್ಲ. ಜತೆಗೆ ಬ್ಯಾಂಕ್‌, ಅಂಚೆ ಕಚೇರಿಗೆ ಹೋಗಿ ಕಾದು ನಿಲ್ಲುವ ಮನಸ್ಸಿಲ್ಲ ಎಂಬ ನೆಪವೊಡ್ಡಿ ಕೆಲವು ವಿದ್ಯಾರ್ಥಿಗಳು ಸೀಡಿಂಗ್‌ ಮಾಡಿಲ್ಲ. ಈ ಮಧ್ಯೆ ಸೀಡಿಂಗ್‌ ಆಗದ ಕೆಲವು ವಿದ್ಯಾರ್ಥಿ ಗಳು ಕಾಲೇಜು ಮುಗಿಸಿ ಊರಿಗೆ ಹೋದವರು ಮತ್ತೆ ಬರುತ್ತಿಲ್ಲ. ಜತೆಗೆ ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್‌ನಲ್ಲಿ ಹೆಸರು-ವಿಳಾಸದಲ್ಲಿ ವ್ಯತ್ಯಾಸ ಇರುವ ಕಾರಣದಿಂದಲೂ ಕೆಲವರ ಸೀಡಿಂಗ್‌ ನಡೆಯುತ್ತಿಲ್ಲ.

ವಿದ್ಯಾರ್ಥಿಗಳೇನು ಮಾಡಬೇಕು? :

ಶುಲ್ಕ ವಿನಾಯಿತಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಬ್ಯಾಂಕ್‌ ಅಥವಾ ಅಂಚೆ ಕಚೇರಿಗೆ ತೆರಳಿ ತಮ್ಮ ಖಾತೆಗೆ ಎನ್‌ಪಿಸಿಐ ಆಧಾರ್‌ ಸೀಡಿಂಗ್‌ ಮಾಡಿಸಬೇಕು. ಯಾವುದೇ ಸಂಶಯವಿದ್ದರೆ ಸಂಬಂಧಪಟ್ಟ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಆಧಾರ್‌ ಸೀಡಿಂಗ್‌ ಬಾಕಿ ಉಳಿಸಿರುವ ವಿದ್ಯಾರ್ಥಿಗಳು :

ಬೆಳಗಾವಿ            :               805

ಬೆಂಗಳೂರು ನಗರ           :               789

ತುಮಕೂರು       :               407

ವಿಜಯಪುರ      :               386

ಧಾರವಾಡ         :               366

ಬಾಗಲಕೋಟೆ  :               324

ದಕ್ಷಿಣ ಕನ್ನಡ   :               142

ಉಡುಪಿ               :               81

 ಅವಧಿ ವಿಸ್ತರಣೆ ಪರಿಶೀಲನೆ:

ಶುಲ್ಕ ವಿನಾಯಿತಿ ಮೊತ್ತ ಪಡೆಯುವ ಸಂದರ್ಭ ಆಧಾರ್‌ ಸೀಡಿಂಗ್‌ ಆಗದೆ ಕೆಲವು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿರುವ ಮಾಹಿತಿ ಇದೆ. ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗುತ್ತಿದೆ. ಅವಶ್ಯವಿದ್ದರೆ ಶುಲ್ಕ ವಿನಾಯಿತಿ ಮೊತ್ತ ಪಡೆಯುವ ಅವಧಿಯನ್ನು ವಿಸ್ತರಿಸುವ ನಿಟ್ಟಿನಲ್ಲಿಯೂ ಪರಿಶೀಲಿಸಲಾಗುವುದು.ಕೋಟ ಶ್ರೀನಿವಾಸ ಪೂಜಾರಿ, ಸಚಿವರು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 

 

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next