ನ್ಯೂಯಾರ್ಕ್: ನೆಚ್ಚಿನ ಆಟಗಾರರಾದ ರೋಜರ್ ಫೆಡರರ್, ನೊವಾಕ್ ಜೊಕೋವಿಕ್, ಸ್ಟಾನಿಸ್ಲಾಸ್ ವಾವ್ರಿಂಕ, ಡೇನಿಯಲ್ ಮೆಡ್ವಡೇವ್ ಅವರೆಲ್ಲ ಯುಎಸ್ ಓಪನ್ ಪಂದ್ಯಾವಳಿಯ 4ನೇ ಸುತ್ತಿಗೆ ನಾಗಾಲೋಟ ಬೆಳೆಸಿದ್ದಾರೆ. ಆದರೆ ಜಪಾನಿನ ಕೀ ನಿಶಿಕೊರಿ, ಆತಿಥೇಯ ನಾಡಿನ ಡೆನ್ನಿಸ್ ಕುಡ್ಲ, ಸ್ಪೇನಿನ ಫೆಲಿಶಿಯಾನೊ ಲೋಪೆಜ್ ಅವರೆಲ್ಲ 3ನೇ ಸುತ್ತಿನಲ್ಲಿ ಎಡವಿ ಕೂಟದಿಂದ ನಿರ್ಗಮಿಸಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ನಿಧಾನ ಗತಿಯ ಆಟವಾಡಿದ ರೋಜರ್ ಫೆಡರರ್, ತೃತೀಯ ಸುತ್ತಿನಲ್ಲಿ ಯಾವುದೇ ಒತ್ತಡವಿಲ್ಲದೆ ಬ್ರಿಟನ್ನಿನ ಡೇನಿಯಲ್ ಇವಾನ್ಸ್ ಅವರಿಗೆ 6-2, 6-2, 6-1ರಿಂದ ಆಘಾತವಿಕ್ಕಿದರು. 6ನೇ ನ್ಯೂಯಾರ್ಕ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಫೆಡರರ್ ಇನ್ನು ಬೆಲ್ಜಿಯಂನ ಡೇವಿಡ್ ಗೊಫಿನ್ ಸವಾಲನ್ನು ಎದುರಿಸಬೇಕಿದೆ. 3ನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಅವರು ದಿಟ್ಟ ಪ್ರದರ್ಶನವೊಂದನ್ನು ನೀಡಿ ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ ವಿರುದ್ಧ 7-6 (7-5), 7-6 (11-9), 7-5 ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ಜೊಕೋಗೆ ಶರಣಾದ ಕುಡ್ಲ
ಭುಜದ ನೋವಿನಿಂದ ಪೂರ್ತಿಯಾಗಿ ಚೇತರಿಸಿಕೊಳ್ಳದ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಅಮೆರಿಕದ ಡೆನ್ನಿಸ್ ಕುಡ್ಲ ಅವರಿಗೆ 6-3, 6-4, 6-2 ಅಂತರದಿಂದ ಆಘಾತವಿಕ್ಕಿದರು. ಇವರಿನ್ನು ಸ್ವಿಜರ್‌ಲ್ಯಾಂಡ್‌ನ ಅಪಾಯಕಾರಿ ಟೆನಿಸಿಗ, ಮಾಜಿ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ವಿರುದ್ಧ ಆಡಬೇಕಿದೆ. ಆದರೆ ವಾವ್ರಿಂಕ ಅವರಿಗೆ 3ನೇ ಸುತ್ತಿನಲ್ಲಿ ಸುಲಭ ಗೆಲುವೇನೂ ಒಲಿಯಲಿಲ್ಲ. ಭಾರೀ ಹೋರಾಟ ನೀಡಿದ ಇಟಲಿಯ ಪೌಲೊ ಲೊರೆಂಝಿ ಅವರನ್ನು 6-4, 7-6 (11-9), 7-6 (7-4) ಅಂತರದಿಂದ ಮಣಿಸಿ ನಿಟ್ಟುಸಿರೆಳೆದರು.
ರಶ್ಯದ ಡ್ಯಾನಿಲ್ ಮೆಡ್ವಡೇವ್ ಕೂಡ ಭಾರೀ ಬೆವರಿಳಿಸಿಕೊಂಡು 3ನೇ ಸುತ್ತು ದಾಟಿ ದರು. ಸ್ಪೇನಿನ ಫೆಲಿಶಿಯಾನೊ ಲೋಪೆಜ್ ವಿರುದ್ಧ ಅವರು 4 ಸೆಟ್‌ಗಳ ಹೋರಾಟ ನಡೆಸಿ 7-6 (7-1), 4-6, 7-6 (9-7), 6-4ರಿಂದ ಗೆದ್ದು ಬಂದರು. ಇವರಿನ್ನು ಜರ್ಮನಿಯ ಡೊಮಿನಿಕ್ ಕೋಫರ್ ವಿರುದ್ಧ ಆಡಬೇಕಿದೆ. ಕೋಫರ್ ಜಾರ್ಜಿಯಾದ ಬಸಿಲಶ್ವಿಲಿ ವಿರುದ್ಧ ಜಯ ಸಾಧಿಸಿದರು.