ಬಾಸೆಲ್ (ಸ್ವಿಜರ್‌ಲ್ಯಾಂಡ್): ಟೆನಿಸ್ ದಿಗ್ಗಜ ರೋಜರ್ ಫೆಡರರ್ 10ನೇ ಬಾಸೆಲ್ ಕೂಟದ ಪ್ರಶಸ್ತಿಯೊಂದಿಗೆ ಸಂಭ್ರಮಿಸಿದ್ದಾರೆ. ತವರಿನ ಕೂಟದ ಫೈನಲ್‌ನಲ್ಲಿ ಅವರು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ವಿರುದ್ಧ 6-2, 6-2 ಅಂತರದ ಸುಲಭ ಗೆಲುವು ಸಾಧಿಸಿದರು.
ಇದು ರೋಜರ್ ಫೆಡರರ್ ಪಾಲಾದ ಟೆನಿಸ್ ಬಾಳ್ವೆಯ 103ನೇ ಪ್ರಶಸ್ತಿ. ಅಮೆರಿಕದ ಜಿಮ್ಮಿ ಕಾನರ್ ಅವರ 109 ಪ್ರಶಸ್ತಿಗಳ ಸಾರ್ವಕಾಲಿಕ ದಾಖಲೆಯತ್ತ ಸ್ವಿಸ್ ಆಟಗಾರ ದಾಪುಗಾಲಿಕ್ಕುತ್ತಿದ್ದಾರೆ.
“ಎರಡು ದಶಕಗಳ ಹಿಂದೆ ಇಲ್ಲಿಯೇ ನಾನು ಬಾಲ್‌ಬಾಯ್ ಆಗಿ ಟೆನಿಸ್ ನಂಟು ಬೆಳೆಸಿಕೊಂಡಿದ್ದೆ. ತವರಿನಲ್ಲಿ ಪ್ರಶಸ್ತಿ ಜಯಿಸಲು ನನಗಿದೇ ಸ್ಫೂರ್ತಿ. ಆದರೆ ಇಲ್ಲಿ 10 ಸಲ ಚಾಂಪಿಯನ್ ಆಗಿದ್ದನ್ನು ನಂಬಲಾಗುತ್ತಿಲ್ಲ. ಒಂದೇ ಕೂಟದಲ್ಲಿ ಇಷ್ಟೊಂದು ಪ್ರಶಸ್ತಿ ಗೆಲ್ಲುವುದು ಸುಲಭವಲ್ಲ…’ ಎಂದು ಫೆಡರರ್ ಪ್ರತಿಕ್ರಿಯಿಸಿದ್ದಾರೆ. ಫೆಡರರ್ ಅವರ ಇಡೀ ಕುಟುಂಬವೇ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಯಿತು.
75ನೇ ಗೆಲುವು
ಇದು ಬಾಸೆಲ್‌ನಲ್ಲಿ ರೋಜರ್ ಫೆಡರರ್ ದಾಖಲಿಸಿದ 75ನೇ ಗೆಲುವು ಕೂಡ ಹೌದು. ಇದರೊಂದಿಗೆ ತವರಿನಂಗಳಲ್ಲಿ ಫೆಡರರ್ ಅವರ ಸತತ ಗೆಲುವಿನ ಓಟ 24 ಪಂದ್ಯಗಳಿಗೆ ವಿಸ್ತರಿಸಿದೆ. ಇಲ್ಲಿ ಅವರು ಕೊನೆಯ ಸಲ ಸೋತದ್ದು 2013ರ ಫೈನಲ್‌ನಲ್ಲಿ. ಎದುರಾಳಿಯಾಗಿದ್ದವರು ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ. 2019ರ ಋತುವಿನಲ್ಲಿ ರೋಜರ್ ಫೆಡರರ್ ಪಾಲಾದ 4ನೇ ಪ್ರಶಸ್ತಿ ಇದಾಗಿದೆ.