ಹೊಸದಿಲ್ಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಗುರುವಾರ ಏಶ್ಯ/ಓಶಿಯಾನಿಯ ವಲಯದಿಂದ ಪ್ರತಿಷ್ಠಿತ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾದ ಭಾರತದ ಪ್ರಥಮ ಟೆನಿಸ್ ಆಟಗಾರ್ತಿಯಾಗಿದ್ದಾರೆ.
ಏಶ್ಯ/ಓಶಿಯಾನಿಯ ವಲಯದಿಂದ ಇಂಡೋನೇಶ್ಯದ ಪ್ರಿಸ್ಕಾ ಮೆಡೆಲಿನ್ ನುಗ್ರೊಹೊ ಅವರನ್ನು ಕೂಡ ನಾಮನಿರ್ದೇಶನ ಮಾಡಲಾಗಿದೆ.
ಸಾನಿಯಾ ಇತ್ತೀಚೆಗೆ ಫೆಡ್ ಕಪ್‌ಗೆ ನಾಲ್ಕು ವರ್ಷಗಳ ಸುದೀರ್ಘ ಅವಧಿಯ ಬಳಿಕ ಮರಳಿದ್ದರು. ಮಾತ್ರವಲ್ಲದೇ ಭಾರತ ಮೊದಲ ಬಾರಿ ಪ್ಲೇ ಆಫ್ಗೆ ತೇರ್ಗಡೆಯಾಗಲು ನೆರವಾಗಿದ್ದರು. ಈ ಹೋರಾಟದ ವೇಳೆ ಅವರ ಪುತ್ರ ಇಜಾನ್ ಗ್ಯಾಲರಿಯಲ್ಲಿ ಉಪಸ್ಥಿತರಿದ್ದರು.
ಕಳೆದ ತಿಂಗಳು ನಡೆದ ಏಶ್ಯ/ಓಶಿಯಾನಿಯ ಕೂಟದಲ್ಲಿನ ಗೆಲಲು ನನ್ನ ಬಾಳ್ವೆಯ ಶ್ರೇಷ್ಠ ಸಾಧನೆಗಳಲ್ಲಿ ಒಂದಾಗಿದೆ. ಇಂತಹ ಕ್ಷಣಗಳನ್ನು ಪ್ರತಿಯೊಬ್ಬ ಆ್ಯತ್ಲೀಟ್ ಎದುರು ನೋಡುತ್ತಿರುತ್ತಾರೆ. ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಫೆಡ್ ಕಪ್ ಹಾರ್ಟ್ ಪ್ರಶಸ್ತಿ ಆಯ್ಕೆ ಸಮಿತಿಗೆ ಆಭಾರಿಯಾಗಿದ್ದೇನೆ ಎಂದು 33ರ ಹರೆಯದ ಸಾನಿಯಾ ಹೇಳಿದ್ದಾರೆ.
ಹಾರ್ಟ್ ಪ್ರಶಸ್ತಿಯ ವಿಜೇತರನ್ನು ಅಭಿಮಾನಿಗಳ ಆನ್‌ಲೈನ್ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೇ 1ರಂದು ಆನ್‌ಲೈನ್ ಮತದಾನ ಆರಂಭವಾಗಲಿದ್ದು ಮೇ 8ರವರೆಗೆ ಮತದಾನ ಮಾಡಬಹುದು