Advertisement

ನೆರೆ ಹಾನಿ ಕಾಮಗಾರಿಗೆ ಫೆಬ್ರವರಿ ಗಡುವು

04:55 PM Jan 31, 2020 | Suhan S |

ಗದಗ: ಜಿಲ್ಲೆಯ ನೆರೆ ಹಾನಿಯಿಂದ ನಿರ್ಮಾಣ ಹಾಗೂ ದುರಸ್ತಿಗೊಳ್ಳಬೇಕಾದ ರಸ್ತೆ, ಸೇತುವೆ, ಶಾಲಾ ಕಟ್ಟಡ, ಅಂಗನವಾಡಿ ಹಾಗೂ ಸರ್ಕಾರಿ ಕಟ್ಟಡಗಳ ಕಾಮಗಾರಿಗಳನ್ನು ಫೆಬ್ರುವರಿ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಾಜ್‌ ಕುಮಾರ ಖತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನೆರೆ ಪರಿಹಾರ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯ ನೆರೆ ಸಂದರ್ಭದಲ್ಲಿ 404 ಮನೆಗಳು ಪೂರ್ಣ ಹಾನಿ ಗೊಳಗಾಗಿದ್ದು, 59 ಕುಟುಂಬಗಳಿಗೆ ಸದ್ಯ ಸರ್ಕಾರದಿಂದ ಬಾಡಿಗೆ ನೀಡಲಾಗುತ್ತಿದೆ. 399 ಮನೆಗಳು ಅದೇ ಜಾಗದಲ್ಲಿ, 5 ಮನೆಗಳು ಬೇರೆ ಜಾಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ರಾಜೀವ ಗಾಂಧಿ ವಸತಿ ನಿಗಮದಿಂದ 5.30 ಕೋಟಿ ರೂ. ವಿತರಣೆ ಮಾಡಲಾಗಿದೆ. “ಬಿ’ ಕೆಟಗರಿಯ 88 ಮನೆಗಳು ಹಾನಿಯಾಗಿದ್ದು, 9.69 ಕೋಟಿ ರೂ. ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. “ಸಿ’ ಕೆಟಗರಿಯ 1,603 ಮನೆಗಳಿಗೆ 2.82 ಕೋಟಿ ರೂ. ಬಿಡುಗಡೆಯಾಗಿದೆ. ಸರ್ಕಾರದ ನಿರ್ದೇಶನದಂತೆ ಪರಿಹಾರ ಮೊತ್ತವನ್ನು ನಿರ್ಮಾಣಕ್ಕೆ ಹಾಗೂ ದುರಸ್ತಿಗೆ ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯಲ್ಲಿ 22.26 ಕೋಟಿ ರೂ. ವೆಚ್ಚದ ಮೂಲ ಸೌಕರ್ಯ, ರಸ್ತೆ, ಕುಡಿಯುವ ನೀರು ಪೂರೈಕೆ, ಸೇತುವೆ, ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ತಿ ಒಟ್ಟು 660 ಪೈಕಿ 303 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ 10.85 ಕೋಟಿ ರೂ. ವೆಚ್ಚದಲ್ಲಿ 78 ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿ.ಪಂ. ಸಿಇಒ ಡಾ| ಆನಂದ ಕೆ. ಮಾತನಾಡಿ, ಜಿ.ಪಂ. ಇಂಜಿನಿಯರಿಂಗ್‌ ವಿಭಾಗದಿಂದ ನೆರೆಗೆ ಸಂಬಂಧಿಸಿದಂತೆ ಗ್ರಾಮೀಣ ರಸ್ತೆ, ಸೇತುವೆ ಪುನರ್‌ ನಿರ್ಮಾಣ ನವೀಕರಣದಡಿ 10.50 ಕೋಟಿ ರೂ. ಅಂದಾಜು ವೆಚ್ಚದ 133 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿನೀಡಿದರು.

ಮಾತೃಪೂರ್ಣ ಯೋಜನೆ, ಶಿಕ್ಷಣ, ಮೂಲ ಸೌಕರ್ಯ, ಭೂ ಒಡೆತನ, ಕುಡಿಯುವ ನೀರುಪೂರೈಕೆ, ಪಿಂಚಣಿ, ಸಾರ್ವಜನಿಕ ಸ್ವತ್ಛತೆಗೆ ಸಂಬಂಧಿತ ಯೋಜನೆಗಳ ಕುರಿತು ಅಧಿಕಾರಿಗಳು ಹೆಚ್ಚಿನ ಕಾಳಜಿ ತೋರಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರಾಜಕುಮಾರ ಖತ್ರಿ ತಿಳಿಸಿದರು.

Advertisement

ಅಪರ ಜಿಲ್ಲಾಧಿಕಾರಿ ಸತೀಶಕುಮಾರ್‌ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಜಂಟಿ ನಿರ್ದೇಶಕ ರುದ್ರೇಶ, ಟಿ.ಎಸ್‌., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ್‌ ಮುಧೋಳ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next