ಹೊಸದಿಲ್ಲಿ : ಫೆಬ್ರವರಿ 1ರಂದು ಸರಕಾರ ಮಂಡಿಸಲಿರುವ ಬಜೆಟ್ ಮಧ್ಯಾವಧಿ ಬಜೆಟ್ ಆಗಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಇಂದು ಬುಧವಾರ ಸ್ಪಷ್ಟಪಡಿಸಿದೆ.
ಈ ಸ್ಪಷ್ಟೀಕರಣದಿಂದಾಗಿ ಪ್ರಧಾನಿ ಮೋದಿ ಅವರ ಸರಕಾರ ಲೇಖಾನುದಾನಕ್ಕೆ (ವೋಟ್ ಆನ್ ಅಕೌಂಟ್‌ಗೆ) ಬದಲಾಗಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಸರಕಾರ ಫೆ.1ರಂದು ಮಡಿಸುವ ಬಜೆಟ್, 2019-20ರ ಮಧ್ಯಾವಧಿ ಬಜೆಟ್ ಎನಿಸಿಕೊಳ್ಳಲಿದೆ ಎಂದು ಹೇಳಿದರು.
ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ಮಂಡಿಸಲಾಗುವ ಬಜೆಟ್, ಪೂರ್ಣ ಪ್ರಮಾಣದ್ದಾಗಿರದೆ ಕೇವಲ ಲೇಖಾನುದಾನ (interim budget) ಮಾತ್ರವೇ ಆಗಿರುತ್ತದೆ. ಹೊಸ ಸರಕಾರ ಅಧಿಕಾರಕ್ಕೆ ಬಂದಾಗ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದು ಕ್ರಮ.
ಅಲ್ಲಿಯ ವರೆಗಿನ ಸರಕಾರದ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ, ಚುನಾವಣಾ ವರ್ಷದಲ್ಲಿ ಮಧ್ಯಾವಧಿ ಬಜೆಟ್ ಮಂಡಿಸಲಾಗುತ್ತದೆ.