ಉಡುಪಿ: ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಯಾಕಿಂಗ್ ಆ್ಯಂಡ್ ಕನೂಯಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ಎನ್‌ಎಚ್ 66ರ ಬಳಿ ಇರುವ ಹೇರೂರು ಸುವರ್ಣ ನದಿ ಸೇತುವೆ ಬಳಿಯಲ್ಲಿ ಫೆ. 23ರಿಂದ 26ರ ತನಕ 11ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂದು ಶಾಸಕ ಕೆ. ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸ್ಪರ್ಧೆಯಲ್ಲಿ ಆಯ್ಕೆಯಾದ ತಂಡವು ಭಾರತವನ್ನು ಪ್ರತಿನಿಧಿಸಿ ಏಷಿಯನ್ ಗೇಮ್ಸ್‌ಗೆ ತೆರಳಲಿವೆ. ಕರ್ನಾಟಕ, ಕೇರಳ, ಪುದುಚೇರಿ, ಆಂಧ್ರಪ್ರದೇಶ, ಮಧ್ಯಪ್ರದೇಶ, ದಿಲ್ಲಿ, ಹಿಮಾಚಲಪ್ರದೇಶ, ಹರಿಯಾಣ,
ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ಮಣಿಪುರ ಸೇರಿದಂತೆ 15 ರಾಜ್ಯಗಳಿಂದ ಸುಮಾರು 635 ಮಂದಿ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದರು.
ಕಯಾಕಿಂಗ್ ಆ್ಯಂಡ್ ಕನೂಯಿಂಗ್ ಅಸೋಸಿಯೇಶನ್ ಆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕ್ಯಾ| ದಿಲೀಪ್ ಕುಮಾರ್ ಮಾತನಾಡಿ, 200 ಮೀ.,500 ಮೀ., 2 ಕಿ.ಮೀ. ದೂರದ 18 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಪುರುಷರು ಮತ್ತು ಮಹಿಳೆಯರ ತಂಡಗಳು, ಮಿಶ್ರ ವಿಭಾಗದ ತಂಡಗಳು ಭಾಗವಹಿಸಲಿವೆ. ಪ್ರತೀ ತಂಡದಲ್ಲಿ 10+2 ಮತ್ತು 20+2 ಮಂದಿಗಳ 2 ವಿಭಾಗಗಳಿರುತ್ತವೆ. ಸ್ಪರ್ಧೆಯಲ್ಲಿ 20 ಸೀಟ್‌ನ 4 ಬೋಟ್ ಗಳು, 12 ಸೀಟ್‌ಗಳ 7 ಬೋಟ್‌ಗಳು ಇರಲಿವೆ ಎಂದರು.
ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಆಯೋಜನೆ ಸಂಘಟನೆ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಮಹೇಶ್ ಠಾಕೂರ್ ಉಪಸ್ಥಿತರಿದ್ದರು.