Advertisement

ಫೀಚರ್ ಡೇ!

08:27 PM Nov 03, 2019 | Lakshmi GovindaRaju |

ಕಾರು ಕೊಂಡ ಮೇಲೆ ಅಯ್ಯೋ, ಇದರಲ್ಲಿ ಆ ಫೀಚರ್‌ ಇಲ್ಲ, ಈ ಫೀಚರ್‌ ಇಲ್ಲ ಎಂದು ನಿರಾಶರಾಗುವುದಕ್ಕಿಂತ, ಮುಂಚೆಯೇ ಅದರ ಕುರಿತು ಮಾಹಿತಿ ಇದ್ದರೆ ಚೆನ್ನ. ಎಲ್ಲಾ ಫೀಚರ್‌ಗಳೂ ಒಳ್ಳೆಯವೇ ಎಂದು ಹೇಳಲು ಬರುವುದಿಲ್ಲ. ಅದು ಗ್ರಾಹಕರ ಇಷ್ಟಗಳನ್ನು ಆಧರಿಸಿರುತ್ತದೆ. ಸದ್ಯ ಮಾರುಕಟ್ಟೆಯಲ್ಲಿರುವ ಕಾರುಗಳಲ್ಲಿ ನೀಡಲಾಗುತ್ತಿರುವ ಸವಲತ್ತುಗಳಲ್ಲಿ ಆಯ್ದ 12 ಇಲ್ಲಿವೆ…

Advertisement

1. ಡುಯೆಲ್‌ ಫ್ರಂಟ್‌ ಏರ್‌ಬ್ಯಾಗ್‌: ಅವಘಡದ ಸಮಯದಲ್ಲಿ ಹೆಚ್ಚಿನ ಅಪಾಯ ಇರುವುದು ಮುಂದಿನ ಎರಡೂ ಸೀಟುಗಳ ಪ್ರಯಾಣಿಕರಿಗೆ. ಹೀಗಾಗಿ ಮುಂದುಗಡೆ ಎರಡು ಏರ್‌ಬ್ಯಾಗ್‌ ಇದ್ದರೆ ಸುರಕ್ಷತೆ ಹೆಚ್ಚು.

2. ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಮ್‌(ಎಬಿಎಸ್‌): ಸಡನ್‌ ಆಗಿ ಬ್ರೇಕ್‌ ಒತ್ತಿದ ಸಂದರ್ಭದಲ್ಲಿ ಚಕ್ರಗಳು ಲಾಕ್‌ ಆಗಿಬಿಡುವ ಸಾಧ್ಯತೆ ಇರುತ್ತದೆ. ಆಗ ಕಾರನ್ನು ಬೇಕಾದೆಡೆ ತಿರುಗಿಸಲು ಆಗುವುದಿಲ್ಲ. ಪರಿಣಾಮವಾಗಿ, ಕಾರು ಸ್ಕಿಡ್‌ ಆಗುತ್ತದೆ. ಆದರೆ ಎಬಿಎಸ್‌ ಸವಲತ್ತಿದ್ದರೆ ಚಕ್ರಗಳು ಲಾಕ್‌ ಆಗುವುದಿಲ್ಲ. ಕಾರು ಚಾಲಕನ ಹತೋಟಿಯಲ್ಲಿದ್ದುಕೊಂಡೇ ವೇಗ ತಗ್ಗುತ್ತದೆ.

3. ಐಸೋ ಫಿಕ್ಸ್‌: ಇದು ಮಗುವಿನ ಸೀಟು ಫಿಕ್ಸ್‌ ಮಾಡುವ ಅಂತಾರಾಷ್ಟ್ರೀಯ ಮಟ್ಟದ ಸ್ಟಾಂಡರ್ಡ್‌. ಎಳೆ ಮಕ್ಕಳ ಜೊತೆ ಪ್ರಯಾಣಿಸುವ ಸಂದರ್ಭದಲ್ಲಿ, ಮಕ್ಕಳ ಸೀಟನ್ನು(ಡಿಟ್ಯಾಚೆಬಲ್‌ ಆಗಿದ್ದು, ಪ್ರತ್ಯೇಕವಾಗಿ ಕೊಳ್ಳಬೇಕು) ಹಿಂದಿನ ಸಾಲಿನಲ್ಲಿ ಕೂರಿಸಿ, ಅದನ್ನು ನಾರ್ಮಲ್‌ ಬೆಲ್ಟ್ ಬಳಸಿ ಕಟ್ಟುವುದಕ್ಕಿಂತ ಹೆಚ್ಚು ಸುರಕ್ಷಿತವಾದ ವಿಧಾನ ಎಂದರೆ ಐಸೋ ಫಿಕ್ಸ್‌. ಸೀಟಿನ ಮಧ್ಯದಲ್ಲಿ ಒಂದು ರಾಡ್‌ ಕೊಟ್ಟಿರುತ್ತಾರೆ ಅದಕ್ಕೆ ಸೀಟುಗಳಲ್ಲಿನ ಹುಕ್‌ಅನ್ನು ಕೂಡಿಸಬೇಕು. ಅಷ್ಟು ಮಾಡಿದರೆ ಸಾಕು.

4. ರೇರ್‌ ಪಾರ್ಕಿಂಗ್‌ ಸೆನ್ಸರ್‌: ನಗರಗಳಲ್ಲಿ ಪಾರ್ಕಿಂಗ್‌ಗೆ ಜಾಗ ಸಿಗುವುದೇ ಕಷ್ಟದಲ್ಲಿ. ಸಿಕ್ಕರೂ ಅದು ತುಂಬಾ ಇಕ್ಕಟ್ಟಾಗಿರುತ್ತದೆ. ಆ ಜಾಗದಲ್ಲಿ ಪಾರ್ಕ್‌ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಅಲ್ಲದೆ, ಪಾರ್ಕ್‌ ಮಾಡುವಾಗ ಅಕ್ಕಪಕ್ಕದ ವಾಹನಗಳಿಗೆ ತಗುಲುವ ಸಾಧ್ಯತೆಯೂ ಇರುತ್ತದೆ. ಇದಕ್ಕೆ ಪರಿಹಾರ ರೇರ್‌ ಪಾರ್ಕಿಂಗ್‌ ಸೆನ್ಸರ್‌. ಇದು ಪಾರ್ಕ್‌ ಮಾಡುವ ಸಂದರ್ಭದಲ್ಲಿ ಚಾಲಕನಿಗೆ ನೆರವಾಗುತ್ತದೆ.

Advertisement

5. ಡೇ/ ನೈಟ್‌ ಐಆರ್‌ವಿಎಂ: ಕಾರಿನೊಳಗಡೆ ಮುಂದುಗಡೆ ಒಂದು ಕನ್ನಡಿ ನೀಡಲಾಗಿರುತ್ತದೆ. ಹಿಂಬದಿ ರಸ್ತೆಯಲ್ಲಿರುವ ಟ್ರಾಫಿಕ್‌ಅನ್ನು ಗಮನಿಸಲು ಅದು ನೆರವಾಗುತ್ತದೆ. ಹಗಲು ಬಿಸಿಲಿದ್ದಾಗ, ಮುಖ್ಯವಾಗಿ ರಾತ್ರಿಯ ವೇಳೆ ಹಿಂಬದಿ ವಾಹನಗಳು ಬೀರುವ ಹೆಡ್‌ಲೈಟಿನಿಂದಾಗಿ ಕನ್ನಡಿಯಲ್ಲಿ ಏನೂ ಕಾಣದೆ ಹೋಗಬಹುದು.ಆದರೆ ಐಆರ್‌ವಿಎಂ ಅನ್ನು ಅಳವಡಿಸಿದರೆ, ಅದು ಹೆಡ್‌ಲೈಟಿನ ಪ್ರಖರತೆಯನ್ನು ಕಡಿಮೆ ಮಾಡಿ ಚಾಲಕನಿಗೆ ಸ್ಪಷ್ಟ ನೋಟವನ್ನು ನೀಡುತ್ತದೆ.

6. ಆಟೋಮ್ಯಾಟಿಕ್‌ ಒಆರ್‌ವಿಎಂ: ಇವು ಕಾರಿನ ಸೈಡ್‌ ಮಿರರ್‌ಗಳು. ಚಾಲಕ ಅನೇಕ ವೇಳೆ ಇವುಗಳನ್ನು ಅಡ್ಜಸ್ಟ್‌ ಮಾಡಬೇಕಾಗಿ ಬರುತ್ತದೆ. ಕೈಯಲ್ಲೇ ಇವುಗಳನ್ನು ತಿರುಗಿಸಬಹುದಾದರೂ ಡ್ರೈವಿಂಗ್‌ ಮಾಡುವ ಸಂದರ್ಭದಲ್ಲಿ ತೊಡಕಾಗಬಹುದು. ಆದರೆ ಆಟೋಮ್ಯಾಟಿಕ್‌ ಒಆರ್‌ವಿಎಂ ಬಳಸಿ ಚಾಲಕ ಬಟನ್‌ ಅದುಮುವುದರ ಮೂಲಕ ನಿಯಂತ್ರಿಸಬಹುದು.

7. ಸೆಂಟ್ರಲ್‌ ಲಾಕಿಂಗ್‌: ಕಾರಿನಲ್ಲಿ ಚಾಲಕ ಒಬ್ಬನೇ ಇದ್ದಾಗ ಅಥವಾ ಹಿಂದೆ ಕುಳಿತ ಪ್ರಯಾಣಿಕರಿಗೆ ಸೀಟುಗಳು, ಬಾಗಿಲುಗಳನ್ನು ಲಾಕ್‌ ಮಾಡಲು ಬರದೇ ಇದ್ದಾಗ ಈ ಸವಲತ್ತು ತುಂಬಾ ಉಪಯೋಗಕ್ಕೆ ಬರುತ್ತದೆ. ಚಾಲಕ ಕುಳಿತಲ್ಲಿಂದಲೇ ಎಲ್ಲಾ ಬಾಗಿಲುಗಳನ್ನು ಲಾಕ್‌ ಮಾಡುವ ಕೇಂದ್ರೀಕೃತ ವ್ಯವಸ್ಥೆ ಇದರಲ್ಲಿರುತ್ತದೆ.

8. ಪವರ್‌ ವಿಂಡೋಸ್‌: ಈಗ ಬರುತ್ತಿರುವ ಹೆಚ್ಚಿನ ಕಾರುಗಳಲ್ಲಿ ಸಾಮಾನ್ಯವಾಗಿ ಈ ಸವಲತ್ತು ಇದ್ದೇ ಇರುತ್ತದೆ. ಹಿಂದೆ ಕಾರುಗಳ ಕಿಟಕಿ ಗಾಜನ್ನು ಇಳಿಸಲು, ಏರಿಸಲು ಹ್ಯಾಂಡಲ್‌ ತಿರುಗಿಸಬೇಕಿತ್ತು. ಆದರೆ ಈಗ, ಹೆಚ್ಚು ತ್ರಾಸ ಪಡಬೇಕಾಗಿಲ್ಲ. ಕಿಟಕಿಯಲ್ಲಿರುವ ಒಂದು ಬಟನ್‌ ಮೂಲಕ ಕಿಟಕಿ ಗಾಜನ್ನು ನಿಯಂತ್ರಿಸಬಹುದು.

9. ಟ್ರಾಕ್ಷನ್‌ ಕಂಟ್ರೋಲ್‌: ಕೆಲವೊಮ್ಮೆ ಕಾರನ್ನು ಚಾಲೂ ಮಾಡಿದಾಗ ಹಿಂದಿನ ಎರಡು ಚಕ್ರಗಳು ನಿಂತಲ್ಲೇ ಗಿರಕಿ ಹೊಡೆಯುವುದನ್ನು ನೋಡಿರಬಹುದು. ಗುಡ್ಡ ಗಾಡು ಪ್ರದೇಶಗಳಲ್ಲಿ, ಒದ್ದೆ ರಸ್ತೆಯಲ್ಲಿ ಪ್ರಯಾಣಿಸುವಾಗ ಇದು ಸಾಮಾನ್ಯ. ಟ್ರಾಕ್ಷನ್‌ ಕಂಟ್ರೋಲ್‌ ಇದನ್ನು ತಡೆಯುತ್ತದೆ. ಇದರಲ್ಲಿನ ಸೆನ್ಸಾರ್‌ ಹಿಂಬದಿ ಮತ್ತು ಮುಂಬದಿ ಚಕ್ರಗಳ ತಿರುಗುವಿಕೆಯನ್ನು ಲೆಕ್ಕ ಹಾಕುತ್ತದೆ. ಅವೆರಡರ ನಡುವೆ ವ್ಯತ್ಯಾಸವಿದ್ದಲ್ಲಿ, ವೇಗವನ್ನು ತಗ್ಗಿಸಿ ಚಾಲಕನಿಗೆ ನಿಯಂತ್ರಣ ಸಾಧಿಸಲು ಅನುವು ಮಾಡಿಕೊಡುತ್ತದೆ.

10. ಡಿ-ಫಾಗರ್‌: ಮಳೆಗಾಲದಲ್ಲಿ, ಚಳಿಗಾಲದಲ್ಲಿ ಮುಂಬದಿಯ ಗಾಜಿನ ಮೇಲೆ ಮಸುಕು ಕೂತು ದೃಶ್ಯಾವಳಿಯನ್ನು ಮಬ್ಟಾಗಿಸುವುದನ್ನು ನೋಡಿರಬಹುದು. ಅದೇ ರೀತಿ, ಹಿಂಬದಿಯ ಗಾಜಿನಲ್ಲೂ ಮಸುಕು ಕೂತಾಗ ಹಿಂಬದಿಯ ಟ್ರಾಫಿಕ್‌ ಗಮನಿಸಲು ಚಾಲಕನಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಹಿಂಬದಿಯೂ ಡಿ- ಫಾಗರ್‌ ಇದ್ದರೆ ಈ ತೊಂದರೆ ನಿವಾರಣೆಯಾಗುತ್ತದೆ. ಗಾಜು ಬೆಚ್ಚಗಾಗುವಂತೆ ಮಾಡುವ ವ್ಯವಸ್ಥೆಯನ್ನು ಇದು ಒಳಗೊಂಡಿರುತ್ತದೆ.

11. ಪವರ್‌ ಔಟ್‌ಲೆಟ್‌ಗಳು: ಬಹುತೇಕ ಕಾರಿನಲ್ಲಿ 12 ವೋಲ್ಟ್ನ ಒಂದು ಪವರ್‌ ಔಟ್‌ಲೆಟ್‌ ಅನ್ನಾದರೂ ನೀಡಿರುತ್ತಾರೆ. ಅದರಲ್ಲಿ ಮೊಬೈಲ್‌ ಚಾರ್ಜ್‌ ಮಾಡಬಹುದು, ಎಂ.ಪಿ3 ಪ್ಲೇಯರ್‌ಗಳನ್ನು ಚಾಲೂ ಮಾಡಬಹುದು. ಒಂದಕ್ಕಿಂತ ಹೆಚ್ಚಿನ ಪವರ್‌ ಔಟ್‌ಲೆಟ್‌ ಇದ್ದರೆ ಅನುಕೂಲ ಹೆಚ್ಚು. ಒಂದೇ ಸಮಯಕ್ಕೆ ಅನೇಕ ಮಂದಿ ಅದನ್ನು ಬಳಸಬಹುದು.

12. ಸನ್‌ರೂಫ್: ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಲಭ್ಯವಿದ್ದ ಈ ಸವಲತ್ತನ್ನು ಈಗ ಮಧ್ಯಮ ವರ್ಗದ ಕಾರುಗಳಲ್ಲೂ ಕಾಣಬಹುದಾಗಿದೆ. ಈ ಸವಲತ್ತಿನ ಅಗತ್ಯದ ಕುರಿತು ವಾದಗಳಿದ್ದರೂ, ಗಾಳಿ, ಬೆಳಕು ಚೆನ್ನಾಗಿ ಇರಬೇಕೆಂದು ಬಯಸುವವರು ಹೆಚ್ಚಾಗಿ ಈ ಸವಲತ್ತಿರುವ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

* ಹವನ

Advertisement

Udayavani is now on Telegram. Click here to join our channel and stay updated with the latest news.

Next