Advertisement

ಕಾಡುತ್ತಿದೆ ರೈತರಿಗೆ ರೇಷ್ಮೆ ಮೊಟ್ಟೆ ಅಭಾವ

11:47 AM Nov 09, 2018 | |

ಬೆಂಗಳೂರು: ದೇಶಾದ್ಯಂತ ಕೆಲದಿನಗಳಿಂದ ರೇಷ್ಮೆ ಮೊಟ್ಟೆಗಳ ತೀವ್ರ ಅಭಾವ ಉಂಟಾಗಿದ್ದು, ಅತಿ ಹೆಚ್ಚು ರೇಷ್ಮೆ ಬೆಳೆಯುವ ಪ್ರದೇಶವನ್ನು ಹೊಂದಿರುವ ಕರ್ನಾಟಕಕ್ಕೆ ಇದರ ಬಿಸಿ ತುಸು ಜೋರಾಗಿ ತಟ್ಟಿದೆ.

Advertisement

ಉತ್ತಮ ಮಳೆಯಾಗಿದ್ದರಿಂದ ರೇಷ್ಮೆಗೆ ಬೇಕಾದ ಹಿಪ್ಪುನೆರಳೆ ಬೆಳೆದುನಿಂತಿದೆ. ಆದರೆ, ಮೊಟ್ಟೆಗಳು ಸಕಾಲದಲ್ಲಿ ಲಭ್ಯವಾಗದಿರುವುದರಿಂದ ಅದನ್ನು ತಿನ್ನುವ ರೇಷ್ಮೆ ಮರಿಗಳೇ ಇಲ್ಲವಾಗಿದೆ. ರಾಜ್ಯದಲ್ಲಿ ಕೇಳಿದಷ್ಟು ಮೊಟ್ಟೆಗಳು ಸಿಗುತ್ತಿಲ್ಲ; ಕೊಟ್ಟರೂ ಸಕಾಲದಲ್ಲಿ ಕೈಸೇರುತ್ತಿಲ್ಲ.

ಇದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಇದು (ಆಗಸ್ಟ್‌-ಫೆಬ್ರವರಿ) ರೇಷ್ಮೆ ಉತ್ಪಾದನೆಗೆ ಹೇಳಿಮಾಡಿಸಿದ ಕಾಲ ಆಗಿರುವುದರಿಂದ ರೈತರಿಗೆ ಹೆಚ್ಚು ನಷ್ಟವಾಗುವ ಆತಂಕ ಎದುರಾಗಿದೆ. ಕೆಲವೆಡೆ ಮೊಟ್ಟೆಗಳ ಪೂರೈಕೆಯಾಗದೆ, ಚಾಕಿ ಸೆಂಟರ್‌ಗಳೂ ಮುಚ್ಚಲ್ಪಟ್ಟಿವೆ.

ಕೇಂದ್ರೀಯ ರೇಷ್ಮೆ ಮಂಡಳಿಯ ರಾಷ್ಟ್ರೀಯ ರೇಷ್ಮೆ ಬೀಜೋತ್ಪಾದನಾ ಸಂಸ್ಥೆ (ಎನ್‌ಎಸ್‌ಎಸ್‌ಒ) ಪ್ರಕಾರ ಪ್ರಸಕ್ತ ಸಾಲಿನ ಹಣಕಾಸು ವರ್ಷ (ಮಾರ್ಚ್‌ ಅಂತ್ಯಕ್ಕೆ)ಕ್ಕೆ  ಕರ್ನಾಟಕ ಸೇರಿದಂತೆ ದೇಶಾದ್ಯಂತ ರೇಷ್ಮೆ ಮೊಟ್ಟೆಗಳು ಬೇಕಾಗಿರುವುದು 550 ಲಕ್ಷ ಎಂದು ಅಂದಾಜಿಸಲಾಗಿದೆ. ಆದರೆ, ಗುರಿ ಹೊಂದಿರುವುದು 350 ಲಕ್ಷ.

ಇನ್ನು ರಾಜ್ಯಕ್ಕೆ ವರ್ಷಕ್ಕೆ 190 ಲಕ್ಷ ಬಯೋಲ್ಟಿನ್‌ (ದ್ವಿತಳಿ) ಮೊಟ್ಟೆಗಳು ಬೇಕಾಗುತ್ತದೆ. ಇದರಲ್ಲಿ ಎನ್‌ಎಸ್‌ಎಸ್‌ಒದಿಂದ 145ರಿಂದ 145 ಲಕ್ಷ ಮೊಟ್ಟೆಗಳು ಪೂರೈಸಿದರೆ, ಉಳಿದ ಸುಮಾರು 40ರಿಂದ 45 ಲಕ್ಷ ಮೊಟ್ಟೆಗಳ ಹೊಣೆ ರಾಜ್ಯ ರೇಷ್ಮೆ ಇಲಾಖೆಯದ್ದಾಗಿದೆ. ಸದ್ಯದ ಸ್ಥಿತಿಯಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳ ಪೂರೈಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Advertisement

ಶೇ. 15ರಷ್ಟು ಉತ್ಪಾದನಾ ಪ್ರದೇಶ ವಿಸ್ತರಣೆ: ವರ್ಷದಿಂದ ವರ್ಷಕ್ಕೆ ರೇಷ್ಮೆ ಉತ್ಪಾದನಾ ಪ್ರದೇಶ ವಿಸ್ತರಣೆ ಆಗುತ್ತಿರುವುದು ಈ ಕೊರತೆಗೆ ಮುಖ್ಯ ಕಾರಣ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರೇಷ್ಮೆ ಉತ್ಪಾದನೆಯ ಸಾಂಪ್ರದಾಯಿಕ ರಾಜ್ಯಗಳಾಗಿವೆ. ಇಲ್ಲೆಲ್ಲಾ ಉತ್ಪಾದನಾ ಪ್ರದೇಶವು ಶೇ. 15ರಷ್ಟು ಏರಿಕೆಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ರೇಷ್ಮೆ ಮಂಡಳಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸರ್ಕಾರದ ಪ್ರೋತ್ಸಾಹದಿಂದ ಸುಮಾರು 25 ಸಾವಿರ ಹೆಕ್ಟೇರ್‌ ರೇಷ್ಮೆ ಬೆಳೆಯುವ ಪ್ರದೇಶ ಹೆಚ್ಚಳವಾಗಿದ್ದು, ಪ್ರಸ್ತುತ 1.03 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದೆ. ಆದರೆ, ಇದಕ್ಕೆ ತಕ್ಕಂತೆ ಮೊಟ್ಟೆಗಳ ಉತ್ಪಾದನೆ ಪ್ರಮಾಣ ಏರಿಕೆ ಆಗದಿರುವುದು ಸಮಸ್ಯೆಗೆ ಎಡೆಮಾಡಿಕೊಟ್ಟಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ. 

ಅದರಲ್ಲೂ ಮುಖ್ಯವಾಗಿ ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕನಕಪುರ, ಕೋಲಾರ, ತುಮಕೂರು, ಹಾವೇರಿ, ಚಿತ್ರದುರ್ಗದಲ್ಲಿ ಹೇರಳವಾಗಿದೆ. ರಾಜ್ಯದಲ್ಲಿ ಎನ್‌ಎಸ್‌ಎಸ್‌ಒಗೆ ಸೇರಿದ ನಾಲ್ಕು ಮತ್ತು ರಾಜ್ಯ ರೇಷ್ಮೆ ಇಲಾಖೆಯ ಏಳು “ಬಿತ್ತನೆ ಕೋಠಿ’ಗಳಿದ್ದು, ಇಲ್ಲಿ ಮೊಟ್ಟೆಗಳ ಉತ್ಪಾದನೆ ಮಾಡಲಾಗುತ್ತದೆ. ಇದಲ್ಲದೆ, 372 ಖಾಸಗಿ ಉತ್ಪಾದಕರೂ ಇದ್ದಾರೆ.

ಈ ಪೈಕಿ ಆರು ಜನ ಮಾತ್ರ ಅತಿಹೆಚ್ಚು ಬೆಳೆಯುವ ದ್ವಿತಳಿ ಮೊಟ್ಟೆ ಉತ್ಪಾದಕರಾಗಿದ್ದಾರೆ. ಬೇಡಿಕೆಗೆ ಅನುಗುಣವಾದ ಮೊಟ್ಟೆ ಪೂರೈಕೆಗೆ ಇಲಾಖೆ ಈಗ ಪರ್ಯಾಯ ಮಾರ್ಗಗಳ ಹುಡಕಾಟ ನಡೆಸಿದೆ. ಆದರೆ, ಪ್ರಯೋಜನ ಆಗುತ್ತಿಲ್ಲ. ಮುಂದಿನ 15-20 ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು. 

ಸ್ವಲ್ಪ ವ್ಯತ್ಯಾಸ ಆಗಿದೆ; ಅಧಿಕಾರಿ: “ಈ ಬಾರಿ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ ಮಳೆ ಉತ್ತಮ ಆಗಿರುವುದರಿಂದ ಹಿಪ್ಪುನೆರಳೆ ಇಳುವರಿ ಸ್ವಲ್ಪ ಬೇಗ ಹಾಗೂ ಹೆಚ್ಚಿಗೆ ಬಂದಿದೆ. ಇದರಿಂದ ಏಕಾಏಕಿ ಮೊಟ್ಟೆಗಳಿಗೆ ಬೇಡಿಕೆ ಬಂತು. ಪರಿಣಾಮ ಸಕಾಲದಲ್ಲಿ ಪೂರೈಸುವಲ್ಲಿ ತುಸು ವ್ಯತ್ಯಾಸವಾಗಿದೆ ಅಷ್ಟೇ. ಆದರೆ, ತೀವ್ರ ಕೊರತೆಯೇನೂ ಇಲ್ಲ. ಅಷ್ಟಕ್ಕೂ ಮೊಟ್ಟೆಗಳ ಉತ್ಪಾದನೆ ಏಕಾಏಕಿ ಆಗುವಂತಹದ್ದಲ್ಲ. ಮುಂಚಿತವಾಗಿಯೇ ಬೇಡಿಕೆ ಮತ್ತು ಉತ್ಪಾದನೆಯ ಕ್ರಿಯಾಯೋಜನೆ ರೂಪಿಸಲಾಗಿರುತ್ತದೆ.

ಈಗ ಸಹಜ ಸ್ಥಿತಿಗೆ ಮರಳಿದೆ’ ಎಂದು ರೇಷ್ಮೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆರ್‌.ಎಲ್‌. ಸುಮನಸಿಂಗ್‌ ಸಮಜಾಯಿಷಿ ನೀಡುತ್ತಾರೆ. ಅಲ್ಲದೆ, ರೇಷ್ಮೆ ದ್ವಿತಳಿ ಮೊಟ್ಟೆ ಉತ್ಪಾದನೆಗೆ ಖಾಸಗಿಯವರನ್ನು ಆಕರ್ಷಿಸಲು ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದೇವೆ ಎಂದೂ ಅವರು ಹೇಳಿದರು.

ಆದಾಯ ಹೆಚ್ಚಿಸುವ ಬಯೋಲ್ಟಿನ್‌: ರಾಜ್ಯದ ರೇಷ್ಮೆಯಲ್ಲಿ ಎರಡು ವಿಧಗಳಿದ್ದು, ಒಂದು ಕೋಲಾರ ಗೋಲ್ಡ್‌ (ಸಿಜಿ) ಮತ್ತೂಂದು ಬಯೋಲ್ಟಿನ್‌ (ದ್ವಿತಳಿ). ಇದರಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದು ಬಯೋಲ್ಟಿನ್‌ ರೇಷ್ಮೆ. ಯಾಕೆಂದರೆ, ಅಟೋಮೆಟಿಕ್‌ ರೂಲಿಂಗ್‌ ಮಷಿನ್‌ನಲ್ಲಿ ರೇಷ್ಮೆ ಎಳೆ ತೆಗೆಯಬಹುದು. ಸಿಜಿಗಿಂತ ಹೆಚ್ಚು ಆದಾಯ ತಂದುಕೊಡುತ್ತದೆ. ರಫ್ತಿಗೂ ಯೋಗ್ಯವಾದ ತಳಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next