ಭಟ್ಕಳ: ಮುಂಗಾರು ಮಳೆ ಆರಂಭವಾಗುವ ಮೊದಲೇ ನಗರದ ಚರಂಡಿ ಸ್ವಚ್ಛತಾ ಕಾರ್ಯಕ್ರಮ ನಡೆಸಬೇಕಾಗಿದ್ದ ಪುರಸಭೆ ಅಲ್ಲಲ್ಲಿ ಸ್ವಚ್ಛಗೊಳಿಸಿ ಅಗತ್ಯವಿದ್ದಲ್ಲಿ ಹಾಗೆಯೇ ಬಿಟ್ಟಿದ್ದು ಮಳೆಗಾಲದಲ್ಲಿ ನೀರು ನುಗ್ಗುವ ಭೀತಿ ನಾಗರಿಕರದ್ದಾಗಿದೆ.
ಭಟ್ಕಳ ಪುರಸಭೆ ಪ್ರತಿವರ್ಷವೂ ಕೂಡಾ ಮಳೆಗಾಲ ಪೂರ್ವದಲ್ಲಿ ಚರಂಡಿ ಸ್ವಚ್ಛಗೊಳಿಸುವುದು, ರಸ್ತೆಗೆ ಅಳವಡಿಸಿದ್ದ ಮೋರಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಮಾಡಿಕೊಡಲು ಸಾಕಷ್ಟು ಹಣ ಖರ್ಚು ಮಾಡುತ್ತದೆ. ಈ ವಿಷಯದಲ್ಲಿ ಸ್ವಲ್ಪ ಎಡವಿದರೂ ಚರಂಡಿ ನೀರು ಮಳೆಗಾಲದಲ್ಲಿ ಮನೆಗಳಿಗೆ ನುಗ್ಗಿ ಅನಾಹುತವಾಗುತ್ತದೆ. ಕಳೆದ 2-3 ವರ್ಷಗಳಿಂದ ಅನೇಕ ಬಾರಿ ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ಮಣ್ಕುಳಿ ಭಾಗದಲ್ಲಿ ಒಳಚರಂಡಿ ನೀರೂ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ್ದನ್ನೂ ಜನ ಮರೆತಿಲ್ಲ.
ನಗರದ ಹಲವೆಡೆ ಈಗಾಗಲೇ ಹೂಳು ತುಂಬಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದರೆ ಹೃದಯಭಾಗವಾದ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿಯೇ ಚರಂಡಿ ಹೂಳು ಎತ್ತದೇ ಇರುವುದು ಮಾತ್ರ ಪುರಸಭಾ ಅಧಿಕಾರಿಗಳ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ. ಪ್ರತಿ ವರ್ಷವೂ ಸಣ್ಣ ಮಳೆ ಬಂದರೆ ಶಂಶುದ್ಧೀನ್ ಸರ್ಕಲ್ನಲ್ಲಿ ನೀರು ನಿಂತು ಪಾದಚಾರಿಗಳು ಮಾತ್ರವಲ್ಲ ದ್ವಿಚಕ್ರ ವಾಹನ ಸವಾರರಿಗೂ ಓಡಾಡುವುದು ಕಷ್ಟವಾಗುವುದು ಸಾಮಾನ್ಯ. ಈ ಬಾರಿ ಶಂಶುದ್ಧೀನ್ ಸರ್ಕಲ್ ಬಳಿಯಲ್ಲಿ ಮಾತ್ರ ಸ್ವಲ್ಪವೇ ಚರಂಡಿ ಭಾಗದಲ್ಲಿ ಹೂಳು ತೆಗೆದರೆ ಮುಂದೆ ನಾಗಪ್ಪ ನಾಯಕ ರಸ್ತೆ, ರಂಗೀಕಟ್ಟೆ ಕಡೆಗಳಲ್ಲಿ ಚರಂಡಿ ಹೂಳು ತುಂಬಿಕೊಂಡಿದ್ದು ನೀರು ಹರಿದು ಹೋಗಲಿಕ್ಕೂ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲ ಆರಂಭವಾಗಿದ್ದು ಅಲ್ಲಲ್ಲಿ ನೀರು ನಿಲ್ಲಲು ಪ್ರಾರಂಭವಾಗಿದೆ. ನಗರದ ಹಲವೆಡೆಗಳಲ್ಲಿ ಚರಂಡಿ ವ್ಯವಸ್ಥೆಯೇ ಸರಿಯಿಲ್ಲವಾದರೆ, ಇನ್ನೂ ಕೆಲವು ಕಡೆಗಳಲ್ಲಿ ಚರಂಡಿ ತುಂಬಿಕೊಂಡು ನೀರು ಹೋಗದ ಪರಿಸ್ಥಿತಿ ಇದೆ.
ರಾಹೆ 66ರ ಕಾಮಗಾರಿಯನ್ನು ಐಆರ್‌ಬಿ ಕಂಪೆನಿ ಮಾಡುತ್ತಿದ್ದರೂ ಕಳೆದ ವರ್ಷ ಮಣ್ಕುಳಿಯಲ್ಲಿ ಆದ ತೊಂದರೆಯಿಂದ ಎಚ್ಚೆತ್ತುಕೊಂಡು ಈ ಬಾರಿ ಆ ಭಾಗದಲ್ಲಿ ಜಾಗೃತಿ ಮಾಡಿದಂತಿದೆ. ಶಂಶುದ್ಧೀನ್ ಸರ್ಕಲ್ ಬಳಿ ಅಲ್ಪಸ್ವಲ್ಪ ಸ್ವಚ್ಛಗೊಳಿಸಿದಂತೆ ಕಂಡರೂ ಪೆಟ್ರೋಲ್ ಬಂಕ್ ಪಕ್ಕದಿಂದ ನೀರು ಹೋಗಲು ಸ್ಥಳವಿಲ್ಲದಿದ್ದರೂ ಚರಂಡಿ ಸರಿಸಪಡಿಸಲೇ ಇಲ್ಲ. ಇನ್ನು ರಂಗೀಕಟ್ಟೆಯಲ್ಲಿ ಪ್ರತಿವರ್ಷ ಚಿಕ್ಕ ಮಳೆ ಬಂದರೂ ನೀರು ಹೆದ್ದಾರಿ ಮೇಲೆಯೇ ನಿಂತು ದೂರದ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾದರೆ, ದ್ವಿಚಕ್ರ ವಾಹನ ಸವಾರರು, ಪಾದಾಚಾರಿಗಳ ಪಾಡು ಕೇಳುವುದೇ ಬೇಡ. ನ್ಯಾಯಾಲಯದ ಎದುರು ಚರಂಡಿ ಇದ್ದರೂ ನೀರು ಹರಿದು ಹೋಗುವುದಕ್ಕೆ ಸಂಪರ್ಕವೇ ಇಲ್ಲ. ಸರಕಾರಿ ಕಾಲೇಜು ರಸ್ತೆಯಲ್ಲಿ ಕೆಲವೇ ವರ್ಷಗಳ ಹಿಂದೆ ಮಾಡಿದ ಚರಂಡಿಯನ್ನು ಹುಡುಕಿಕೊಡಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು ಹಾಕಿದ್ದ ಹಣ ಹೋಮ ಮಾಡಿದಂತಾಗಿದೆ.
ಈಗಾಗಲೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಐಆರ್‌ಬಿ ಕಂಪನಿ ವಹಿಸಿಕೊಂಡಿರುವುದರಿಂದ ಹೆದ್ದಾರಿ ಪಕ್ಕದ ಚರಂಡಿ ಕಾಮಗಾರಿಯನ್ನು ಅದೇ ಕಂಪೆನಿ ಮಾಡಬೇಕು. ಹೆದ್ದಾರಿಯ ಮೇಲೆ ನೀರು ನಿಂತರೆ ಅದಕ್ಕೆ ಅವರೇ ಹೊಣೆಗಾರರು ಎನ್ನುವುದು ಪುರಸಭೆಯ ಅಭಿಮತವಾಗಿದೆ.