ಹಾವೇರಿ: ಕೋವಿಡ್ ರಹಿತ ಸಾಮಾನ್ಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಆಯುರ್ವೇದ ಔಷಧ,ಮನೆಮದ್ದಿಗೆ ಮೊರೆ ಹೋಗುತ್ತಿದ್ದಾರೆ.
ಪ್ರಸ್ತುತ ಮಳೆಗಾಲವಾಗಿದ್ದು ಮಳೆಯ ತಂಪು ವಾತಾವರಣ, ಬಿಸಿಲು-ಮಳೆಯ ಹವಾಮಾನ ವೈಪರೀತ್ಯದಿಂದ ಅನೇಕರು ಜ್ವರ, ಶೀತ ಹಾಗೂ ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಜ್ವರ, ಕೆಮ್ಮು ಮತ್ತು ಶೀತ ಇವು
ಕೋವಿಡ್ ಸೋಂಕಿನ ಲಕ್ಷಣಗಳು ಆಗಿದ್ದು, ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರು ತಮಗೆ ಕೋವಿಡ್ ತಪಾಸಣೆ ಮಾಡಿಸಲು ಹೇಳಬಹುದು. ಇಲ್ಲವೇ ತಮಗೆ ಕ್ವಾರಂಟೈನ್ ಮಾಡಿಸಿಬಿಡಬಹುದು ಎಂಬ ಭಯದಿಂದ ಜನರು ಆಸ್ಪತ್ರೆಯತ್ತ ಹೆಜ್ಜೆ ಹಾಕಲು ನಿರಾಕರಿಸುತ್ತಿದ್ದಾರೆ. ಮೊದಲಿನಿಂದಲೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದವರು ಸಹ ಕೋವಿಡ್ ಭೀತಿಯಿಂದ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅವರಲ್ಲಿ ಬಹುತೇಕರು ತಮ್ಮ ವೈದ್ಯರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸಲಹೆ, ಔಷಧೋಪಚಾರ ಸೇವೆ ಪಡೆದುಕೊಳ್ಳುತ್ತಿದ್ದಾರೆ.
ಹೆರಿಗೆ, ಶಸ್ತ್ರಚಿಕಿತ್ಸೆಯಂತಹ ಗಂಭೀರ ಸಮಸ್ಯೆಗಳಿಗಾಗಿ ಮಾತ್ರ ಜನರು ಆಸ್ಪತ್ರೆಗಳನ್ನು ಅಲಂಬಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯತ್ತ ಸುಳಿಯದ ಜನ: ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ತಾಲೂಕು ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದೆ. ಇನ್ನು ಹೊರರೋಗಿಗಳಿಗಾಗಿ ಬೇರೆ ಕಡೆ ಚಿಕಿತ್ಸಾ ವ್ಯವಸ್ಥೆ ಮಾಡಿದ್ದರೂ ಜನರು ಕೋವಿಡ್ ಏತರ ಶೀತ, ಜ್ವರ, ಕೆಮ್ಮು ಮಂತಾದ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯತ್ತ ಹೋಗಲು ಮನಸ್ಸು ಮಾಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಜ್ವರ, ಶೀತ, ಕೆಮ್ಮು ಲಕ್ಷಣ ಆಧರಿಸಿ ಕಡ್ಡಾಯವಾಗಿ ಗಂಟಲು ದ್ರವ ಪರೀಕ್ಷೆ ಮಾಡುತ್ತಾರೆ. ಹಾಗೂ ಅಲ್ಲಿ ಕೋವಿಡ್ ಹಾಗೂ ಕೋವಿಡೇತರ ಸಮಸ್ಯೆ ಸೇರಿದಂತೆ ಎಲ್ಲರೂ ಬರುವುದರಿಂದ ತಮಗೂ ಸೋಂಕು ಹರಡಬಹುದು ಎಂಬ ಭಯದಿಂದ ಕೆಲ ಜನರು ಖಾಸಗಿ ಆಸ್ಪತ್ರೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸುಳ್ಳು ಹೇಳಿ ಚಿಕಿತ್ಸೆ: ಮನೆಮದ್ದು, ಆಯುರ್ವೇದ ಔಷಧ ಮಾಡಿದರೂ ಕಡಿಮೆಯಾಗದೇ ವಿಪರೀತ ಜ್ವರ, ಕೆಮ್ಮು, ಶೀತದಿಂದ ಬಳಲುತ್ತಿರುವವರಲ್ಲಿ ಕೆಲವರು ಹೊಟ್ಟೆನೋವು, ವಾಂತಿಯಂತಹ ಇತರೆ ಸಮಸ್ಯೆ ಇದೆ ಎಂದು ಸುಳ್ಳು ಹೇಳಿ ಖಾಸಗಿ ವೈದ್ಯರ ಬಳಿ ಭೇಟಿಗೆ ಅವಕಾಶ ಪಡೆಯುತ್ತಿದ್ದಾರೆ. ವೈದ್ಯರ ಬಳಿ ಹೋದಾಗ ಶೀತ, ಜ್ವರ ಇದೆ ಎಂದು ಹೇಳುತ್ತಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಮಾತ್ರ ಆಸ್ಪತ್ರೆಗೆ ಬರುವ ವ್ಯಕ್ತಿಗೆ ಕೋವಿಡ್ ಇರಲಿ ಬಿಡಲಿ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಆಗಾಗ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡುತ್ತಿದ್ದಾರೆ.
ಆಯುಷ್ ವೈದ್ಯರ ಮೊರೆ: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನರು ಶೀತ, ಜ್ವರ, ಕೆಮ್ಮಿನಂತಹ ಸಾಮಾನ್ಯ ಕಾಯಿಲೆಗಳಿಗೆ ಹತ್ತಿರದಲ್ಲಿಯೇ ಇರುವ ಆಯುಷ್ ವೈದ್ಯರ ಮೊರೆ ಹೋಗುತ್ತಿದ್ದಾರೆ. ಆಯುಷ್ ವೈದ್ಯರು ಸಹ ಸುರಕ್ಷಾ ಕ್ರಮಗಳೊಂದಿಗೆ ಸೇವೆ ನೀಡುತ್ತಿದ್ದು, ಹಳ್ಳಿ ಜನರಿಗೆ ಆಯುಷ್ ವೈದ್ಯರೇ ದೇವರಾಗಿದ್ದಾರೆ. ಈ ನಡುವೆ ಅಲ್ಲಲ್ಲಿ ಇರುವ ನಕಲಿ ವೈದ್ಯರು ಸಹ ಇದೇ ಸಂದರ್ಭ ಬಳಸಿಕೊಂಡು ಔಷಧೋಪಚಾರ ಸೇವೆ ನೀಡುತ್ತಿದ್ದಾರೆ.
ಒಟ್ಟಾರೆ ಕೋವಿಡ್ ವೈರಸ್ ಸಾಮಾನ್ಯ ಕಾಯಿಲೆ ಪೀಡಿತರು ಆಸ್ಪತ್ರೆಗೆ ಹೋಗದಂತೆ ಭೀತಿ ಹುಟ್ಟಿಸಿದ್ದು ಆಯುರ್ವೇದ, ಗಿಡಮೂಲಿಕೆ ಔಷಧಗೆ ಬೇಡಿಕೆ ಹೆಚ್ಚಾಗಿದೆ. ಜ್ವರ, ಕೆಮ್ಮು ಇದ್ದರೂ ಬಹಳಷ್ಟು ಜನ ಅದನ್ನು ಮರೆಮಾಚಿ ಬೇರೆ ತೊಂದರೆ ಹೇಳಿಕೊಂಡು ಆಸ್ಪತ್ರೆಗೆ ಬರುತ್ತಾರೆ. ತಪಾಸಣೆ ಮಾಡುವಾಗ ಅವರಿಗೆ ಜ್ವರ, ಕೆಮ್ಮು, ಶೀತ ಇರುವುದು ಗೋಚರಿಸುತ್ತದೆ. ಈ ಲಕ್ಷಣಗಳು ಗಂಭೀರವಾಗಿದ್ದರೆ ನಾವೇ ಅವರಿಗೆ ಸ್ವ್ಯಾಬ್ ಟೆಸ್ಟ್ ಗೆ ಶಿಫಾರಸ್ಸು ಮಾಡುತ್ತೇವೆ. ಸಾಮಾನ್ಯ ಸಮಸ್ಯೆ ಇದ್ದರೆ ಚಿಕಿತ್ಸೆ ಕೊಡುತ್ತೇವೆ. ಆಸ್ಪತ್ರೆಯಲ್ಲಿ ಪಿಪಿಇ ಕಿಟ್, ಸ್ಯಾನಿಟೈಸರ್ ಬಳಸುವ ಮೂಲಕ ಎಲ್ಲ ರೋಗಿಗಳನ್ನು ಸುರಕ್ಷತೆಯೊಂದಿಗೆ ತಪಾಸಣೆ ಮಾಡುತ್ತೇವೆ.
-ಡಾ| ರಮೇಶ, ಖಾಸಗಿ ಆಸ್ಪತ್ರೆ ವೈದ್ಯರು
ಎಚ್.ಕೆ. ನಟರಾಜ