ಭಾಲ್ಕಿ: ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಅಗತ್ಯ ಇರುವಷ್ಟು ಕಾಲಕಾಲಕ್ಕೆ ಪೂರೈಕೆ ಆಗುತ್ತಿದೆ. ಈ ವಿಷಯದ ಬಗ್ಗೆ ಕೇಂದ್ರದ ಸಚಿವ ಭಗವಂತ ಖೂಬಾ, ಅಧಿಕಾರಿಗಳು ಸ್ಪಷ್ಟನೆ ನೀಡುತ್ತಿದ್ದಾರೆ. ಆದರೆ, ಶಾಸಕ ಈಶ್ವರ ಖಂಡ್ರೆ ಅವರು ಜಿಲ್ಲೆಯಲ್ಲಿ ರಸಗೊಬ್ಬರದ ಅಭಾವ ಸೃಷ್ಟಿಯಾಗಿದೆ ಎಂದು ಹೇಳಿಕೆ ನೀಡಿ ರೈತರಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಮತ್ತು ದೇಶದಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷ 60 ವರ್ಷ ಆಡಳಿತ ನಡೆಸಿ ಲೂಟಿ ಮಾಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಶಕೆ ಆರಂಭವಾಗಿದೆ. ಕಳೆದ 8 ವರ್ಷಗಳಿಂದ ಪಾರದರ್ಶಕ ಆಡಳಿತ ನಡೆಸುತ್ತಿದ್ದಾರೆ. ಅಂತಹ ಮೋದಿ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿರುವುದು ನಮ್ಮೆಲ್ಲರ ಭಾಗ್ಯ. ಅದರಲ್ಲೂ ಸಂಸದ ಖೂಬಾಗೆ ಮಂತ್ರಿ ಸ್ಥಾನ ಸಿಕ್ಕಿರುವುದಕ್ಕೆ ಖುಷಿ ಪಡಬೇಕು ಎಂದರು.
ಶಾಸಕ ಖಂಡ್ರೆ ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. 2005-06ರಲ್ಲಿ ಬಿಎಸ್‌ಎಸ್‌ಕೆಗೆ ಈಶ್ವರ ಖಂಡ್ರೆ ಅಧ್ಯಕ್ಷರಾಗಿದ್ದರು. ಎಂಜಿಎಸ್ ಎಸ್‌ಕೆ ಅವರ ಹಿಡಿತದಲ್ಲಿತ್ತು. ಆಗ ರೈತರು ಕಾರ್ಖಾನೆಗೆ ಕಬ್ಬು ಸಾಗಿಸಲು ಪರದಾಟ ನಡೆಸಿದರು. ಕಬ್ಬು ಸಾಗಿಸಲು ಸಾಧ್ಯವಾಗದೇ ಆನಂದವಾಡಿ, ನೇಳಗಿ ಸೇರಿ ಹಲವೆಡೆ ರೈತರು ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಶಾಸಕರಿಗೆ ರೈತರ ಬಗ್ಗೆ ಕಾಳಜಿ ಏಕೆ ಇರಲಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ಡಿ.ಕೆ. ಸಿದ್ರಾಮ ಮಾತನಾಡಿ, ಭಗವಂತ ಖೂಬಾ ಅವರು ಸರಳ, ಸಜ್ಜನ ರಾಜಕಾರಣಿ ಆಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಪಾರದರ್ಶಕ ಆಡಳಿತ ನಡೆಸುತ್ತಿರುವ ಖೂಬಾ ಅವರು ಜಿಲ್ಲೆಯ ರೈತರಿಗೆ ಬೆಳೆ ವಿಮೆ ಮೂಲಕ ಕೋಟ್ಯಂತರ ಹಣ ಪರಿಹಾರ ಕೊಡಿಸಿದ್ದಾರೆ. ಖೂಬಾ ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದಾರೆ. ವಿರೋಧಿಗಳಿಗೆ ಇವರ ಬಗ್ಗೆ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಶಾಸಕ ಈಶ್ವರ ಖಂಡ್ರೆ ಅವರು ಖೂಬಾ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ರೈಲ್ವೆ ಪ್ರಯಾಣಿಕರ ಸೇವಾ ಸಮಿತಿ ಸದಸ್ಯ ಶಿವರಾಜ ಗಂದಗೆ ಮಾತನಾಡಿದರು. ಈ ಸಂದರ್ಭದಲ್ಲಿ ಡಿಗಂಬರರಾವ ಮಾನಕಾರಿ, ಪಂಡಿತ ಶಿರೋಳೆ, ಸುರೇಶ ಬಿರಾದಾರ್, ಸಂತೋಷ ಪಾಟೀಲ್, ಸುರೇಶ ಹುಬಳಿಕರ್ ಇದ್ದರು.