Advertisement
ಉಡುಪಿ ಜಿಲ್ಲೆಯ ಸಂತೆಕಟ್ಟೆ ಹಾಗೂ ಕಲ್ಸಂಕ ಭಾಗದಲ್ಲಿ ಹೆಚ್ಚಿನವರಿಗೆ ಮಲೇರಿಯಾ ದೃಢಪಟ್ಟಿದೆ. ದ.ಕ. ಜಿಲ್ಲೆಯ ಜಪ್ಪು, ಕುದ್ರೋಳಿ ಭಾಗದಲ್ಲಿ ಈ ಹಿಂದೆ ಮಲೇರಿಯಾ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿತ್ತಾದರೂ ಪ್ರಸ್ತುತ ಕಡಿಮೆಯಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆಲವೊಂದು ಪ್ರಕರಣಗಳು ವರದಿಯಾಗುತ್ತಿವೆ.
ಉಡುಪಿಯಲ್ಲಿ ಜೂನ್ ಅಂತ್ಯಕ್ಕೆ 45 ಡೆಂಗ್ಯೂ ಪ್ರಕರಣಗಳಿದ್ದರೆ ಜುಲೈ ಅಂತ್ಯಕ್ಕೆ 85 ಪ್ರಕರಣಗಳು ಕಂಡುಬಂದಿವೆ. ಆಗಸ್ಟ್‌ನಲ್ಲಿ 75 ಪ್ರಕರಣಗಳು ವರದಿಯಾಗಿವೆ. ದ.ಕ. ಜಿಲ್ಲೆಯಲ್ಲಿಯೂ ಇಳಿಮುಖಗೊಂಡಿದ್ದ ಪ್ರಕರಣ ಆಗಸ್ಟ್‌ನಲ್ಲಿ 132ಕ್ಕೆ ತಲುಪಿದೆ. ಈಗಾಗಲೇ ಸೋಂಕು ಲಕ್ಷಣ ಕಂಡುಬಂದವರಲ್ಲಿ ಹೆಚ್ಚಿನ ಮಂದಿ ವಲಸೆ ಕಾರ್ಮಿಕರೇ ಆಗಿದ್ದಾರೆ. ಝಾರ್ಖಂಡ್, ಅಸ್ಸಾಂ, ಉತ್ತರ ಪ್ರದೇಶ ಸಹಿತ ಅನ್ಯ ಜಿಲ್ಲೆಗಳಿಂದ ವಲಸೆ ಬಂದು ಇಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಈ ರೋಗ ಲಕ್ಷಣಗಳು ಕಂಡುಬಂದಿವೆ. ವಿವಿಧೆಡೆ ತಪಾಸಣೆ
ಉಡುಪಿ ಜಿಲ್ಲೆಯಲ್ಲಿ ಸುಮಾರು 900ಕ್ಕೂ ಅಧಿಕ ಮಂದಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು ಹಾಗೂ ದ.ಕ. ಜಿಲ್ಲೆಯಲ್ಲಿ 1,353 ಮಂದಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ 45 ಮಂದಿ ಸಿಬಂದಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಹೆಚ್ಚು ರೋಗಲಕ್ಷಣ ಕಂಡುಬಂದಿರುವ ಪ್ರದೇಶಗಳಿಗೆ ಭೇಟಿ ನೀಡಿ ಲಾರ್ವ ಸರ್ವೇ, ರಕ್ತದ ಮಾದರಿ ಸಂಗ್ರಹ ನಡೆಸುತ್ತಿದ್ದಾರೆ.
Related Articles
ಮಲೇರಿಯಾ, ಡೆಂಗ್ಯೂ ರೋಗಲಕ್ಷಣಗಳು ಗ್ರಾಮೀಣ ಭಾಗಕ್ಕಿಂತಲೂ ನಗರ ಭಾಗದಲ್ಲಿ ಹೆಚ್ಚು ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಅತೀ ಹೆಚ್ಚು ಜನರು ಇರುವುದು, ಹೆಚ್ಚಿನ ಕಾರ್ಯಚಟುವಟಿಕೆ, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗುವುದು, ಪಾಳುಬಿದ್ದ ಕಟ್ಟಡಗಳಲ್ಲಿ ನೀರು ನಿಲ್ಲುವುದರಿಂದಲೂ ಸೊಳ್ಳೆಗಳು ಉತ್ಪತ್ತಿಯಾಗಿ ಹರಡಲು ಕಾರಣವಾಗುತ್ತಿದೆ. ಈ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಸ್ಥಳಿಯಾಡಳಿತ ಕೂಡ ಹೆಚ್ಚಿನ ಗಮನ ಹರಿಸಿ ಶುಚಿತ್ವಕ್ಕೆ ಆದ್ಯತೆ ನೀಡುವ ಆವಶ್ಯಕತೆಯಿದೆ.
Advertisement
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ರಕ್ತದ ಮಾದರಿಯನ್ನು ಸಂಗ್ರಹಿಸಲಾಗುತ್ತಿದೆ. ನಿರಂತರ ಜ್ವರಲಕ್ಷಣ ಕಂಡುಬಂದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಹಾಗೆಯೇ ಅನ್ಯ ರಾಜ್ಯದಿಂದ ಬರುವವರಲ್ಲಿ ಜ್ವರಲಕ್ಷಣ ಕಂಡುಬಂದರೆ ತಪಾಸಣೆ ಮಾಡುವುದು ಉತ್ತಮ.-ಡಾ| ಪ್ರಶಾಂತ್ ಭಟ್, ಡಾ| ನವೀನ್‌ಚಂದ್ರ ಕುಲಾಲ್
ಉಡುಪಿ, ದ.ಕ., ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ