ಮಿಲಿಟರಿ ನ್ಯಾಯಾಲಯ ಅಸ್ತಿತ್ವದಲ್ಲಿದೆ ಎನ್ನುವ ವಾಸ್ತವವೇ “ಪಾಕಿಸ್ಥಾನದ ನ್ಯಾಯಾಂಗ ಮತ್ತು ಸಂಸತ್ತು ಎಷ್ಟು ದುರ್ಬಲವಾಗಿದೆ’ ಎನ್ನುವುದನ್ನು ತೋರಿಸುತ್ತಿದೆ. ಹೀಗಿದ್ದಾಗ ತನಗಿಂತಲೂ ಬಲಿಷ್ಠವಾಗಿರುವ ಮಿಲಿಟರಿಯ ವಿರುದ್ಧ ಸರಕಾರವೇಕೆ ಆಗಾಗ ಮುಖಾಮುಖೀಯಾಗುತ್ತಿದೆ? ಅದೇಕೆ ಪ್ರಧಾನಿ ಷರೀಫ್ ಅವರು ಭದ್ರತಾ ಪಡೆಗಳ ಅನುಮತಿ ಪಡೆಯದೆಯೇ ಉದ್ಯಮಿ ಸಜ್ಜನ್ ಜಿಂದಾಲ್‌ರನ್ನು ಪಾಕ್‌ಗೆ ಕರೆಸಿಕೊಂಡು ಭೇಟಿಯಾದರು?
ಪಾಕಿಸ್ತಾನದ ಸರ್ಕಾರ ಮತ್ತು ಮಿಲಿಟರಿ ನಡುವಿನ ಸಂಬಂಧ ಮೊದಲಿನಿಂದಲೂ ಸಾರ್ವಜನಿಕ ಚರ್ಚೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ದುರಂತವೆಂದರೆ, ಪಾಕ್‌ನ ಬಹುತೇಕ ಜನಸಾಮಾನ್ಯರು ಮತ್ತು ಟಿವಿ ಪಂಡಿತರು ಈ ವಿಷಯದ ಬಗ್ಗೆ ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ಅಲ್ಪಸ್ವಲ್ಪ ತಿಳಿದುಕೊಂಡಿದ್ದಾರಷ್ಟೆ. ಇನ್ನು ಬುದ್ಧಿಜೀವಿಗಳ ಚರ್ಚೆಗಳೂ ವಿವಾದಾಸ್ಪದವಾಗಿರುತ್ತವೆ ಮತ್ತು ಪೂರ್ವಗ್ರಹದಿಂದ ಕೂಡಿರುತ್ತವೆ. ಈ ವಿಷಯವಾಗಿ ನೈಜ ಯೋಚನೆಗಳನ್ನು ಮುಂದಿಡುವವರು ಇದ್ದಾರಾದರೂ ಅವರನ್ನು ಓದಿಕೊಂಡವರು ಕಡಿಮೆ. ಓದಿಕೊಂಡರೂ ಅರ್ಥಮಾಡಿಕೊಂಡದ್ದು ಇನ್ನೂ ಕಡಿಮೆ. ಕೆಲವೊಮ್ಮೆ ಇಂಥ ನಿಷ್ಕಲ್ಮಷ ವಾದಗಳನ್ನು ಮುಂದಿಡುವವರಿಗೆ ವಿಶ್ವಾಸಘಾತಕರೆಂದೋ ಅಥವಾ ದೇಶದ್ರೋಹಿಗಳೆಂದೋ ಹಣೆಪಟ್ಟಿ ಕಟ್ಟಲಾಗುತ್ತದೆ.
ವಾಸ್ತವದಲ್ಲಿ, ಪಾಕಿಸ್ತಾನದ ಇತಿಹಾಸದಲ್ಲೇ ದೀರ್ಘಕಾಲೀನ ಆಡಳಿತಾತ್ಮಕ, ನಾಗರಿಕ, ನ್ಯಾಯಿಕ ಮತ್ತು ಮಿಲಿಟರಿ ಸರ್ವಾಧಿಕಾರತ್ವ ತುಂಬಿ ತುಳುಕುತ್ತಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇವನ್ನೆಲ್ಲ ನಾಗರಿಕರು ಪ್ರಬಲವಾಗಿ ವಿರೋಧಿಸಿದ ಉದಾಹರಣೆಗಳೂ ಪಾಕ್‌ನ ಇತಿಹಾಸದಲ್ಲಿ ಸಾಕಷ್ಟಿವೆ. ಜನರು ಆಯುಬ್‌ರ ಆಡಳಿತವನ್ನು ಪ್ರಶ್ನಿಸಿದರು, ಜುಲ್ಫಿàಕರ್ ಅಲಿ ಭುಟ್ಟೋ ವಿರುದ್ಧ ಪ್ರತಿಭಟಿಸಿದರು, ಜಿಯಾ ಮತ್ತು ಮುಷರಫ್ ಆಡಳಿತವನ್ನು ಎದುರುಹಾಕಿಕೊಂಡರು. ಇದಷ್ಟೇ ಅಲ್ಲ, ಇಮ್ರಾನ್ ಖಾನ್ ಮತ್ತು ತಹೀರುಲ್ ಕಾದ್ರಿ ಅವರನ್ನು ಹಿಂಬಾಲಿಸುವ ಒಂದು ವರ್ಗವೂ ಆಗ ಜರ್ದಾರಿ ಮತ್ತು ಈಗ ಷರೀಫ್ ಆಡಳಿತದ ವಿರುದ್ಧ ನಿಂತಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಪ್ರಬಲ ಸರ್ವಾಧಿಕಾರತ್ವಕ್ಕೆ, ಜನರಿಂದ ಅಷ್ಟೇ ಪ್ರಬಲವಾದ ವಿರೋಧ ಎದುರಾಗಿರುವುದನ್ನೂ ನಮ್ಮ ದೇಶ ನೋಡಿದೆ. ಹೀಗಾಗಿ, ಸದ್ಯದ “ಸರ್ಕಾರ ವರ್ಸಸ್ ಮಿಲಿಟರಿ’ ಚರ್ಚೆಯನ್ನು ಇತಿಹಾಸದ ಹಿನ್ನೆಲೆಯಲ್ಲಿಟ್ಟು ನೋಡಿದಾಗ ಸ್ಪಷ್ಟ ಚಿತ್ರಣವನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಆದಾಗ್ಯೂ, ಹೀಗೆ ನೋಡುವುದಕ್ಕಾಗಿ ಸಿದ್ಧಾಂತದಲ್ಲಿ ವಸ್ತುನಿಷ್ಠತೆ ಇರಬೇಕು. ಜೊತೆಗೆ ನಮ್ಮ ಬಗ್ಗೆ ಮತ್ತು ನಮ್ಮ ದೇಶದ ವಾಸ್ತವ ಪರಿಸ್ಥಿತಿಯ ಬಗ್ಗೆ ನಾವು ಪ್ರಾಮಾಣಿಕರಾಗಿರಬೇಕು.
ಈಗಿನ “ಮಿಲಿಟರಿ ವರ್ಸಸ್ ಸರ್ಕಾರ’ ಚರ್ಚೆಯು ಪ್ರಮುಖವಾಗಿ ಇಬ್ಬರ ಸುತ್ತಲೇ ಗಿರಕಿ ಹೊಡೆಯುತ್ತಿದೆ: ಜನರಲ್ ಬಾಜ್ವಾ ನೇತೃತ್ವದ ಪಾಕ್ ಸೇನೆ ಮತ್ತು ನವಾಜ್ ಷರೀಫ್ ನೇತೃತ್ವದ ಸರ್ಕಾರ. ನಿಸ್ಸಂಶಯವಾಗಿಯೂ ಪಾಕ್ ಸೇನೆ ನಮ್ಮ ದೇಶದ ಅತಿ ಬಲಿಷ್ಠ ಶಕ್ತಿ. ಸಾಂಸ್ಥಿಕವಾಗಿ(ಸರ್ಕಾರಕ್ಕೆ ಹೋಲಿಸಿದರೆ ಇದು ಹೆಚ್ಚು ಸಂಘಟಿತವಾಗಿದೆ ಮತ್ತು ಶಿಸ್ತಿನಿಂದ ಕೂಡಿದೆ), ರಾಜಕೀಯವಾಗಿ(ರಾಜಕೀಯದಲ್ಲಿ ತೊಡಗಿದೆ), ವ್ಯೂಹಾತ್ಮಕವಾಗಿ(ವಿದೇಶಾಂಗ ನೀತಿಯನ್ನು ಪಾಕ್ ಸೇನೆ ನಿರ್ಧರಿಸುತ್ತದೆ) ಮತ್ತು ಸಮಾಜೋಆರ್ಥಿಕವಾಗಿ(ಜನರ ವಿಶ್ವಾಸ ಗಳಿಸಲು ಅವರನ್ನು ತಲುಪುತ್ತಿದೆ). ಈ ಅಂಶಗಳಲ್ಲಿ ಸರ್ಕಾರ ಮಾತ್ರ ಕಳಪೆ ಪ್ರದರ್ಶನ ನೀಡುತ್ತಿದೆ. ನಮ್ಮ ಸಂವಿಧಾನವು ಸೇನೆಗೆ ರಾಜಕೀಯ ಮತ್ತು ವ್ಯೂಹಾತ್ಮಕ ಪಾತ್ರವನ್ನು ದಯಪಾಲಿಸಿಲ್ಲ. ಹೀಗಾಗಿ, ಆಡಳಿತದ ಮೇಲೆ ಆಕ್ರಮಣ ಮಾಡಿ ಅಧಿಕಾರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುವವರು ಒಂದೋ ಸಂವಿಧಾನವನ್ನು ಉಲ್ಲಂ ಸಬೇಕು ಅಥವಾ ತಾತ್ಕಾಲಿಕ ಆದೇಶದ ಮೂಲಕ ತಮಗೆ ಬೇಕಿರುವ ಅಂಶವನ್ನು ಸಂವಿಧಾನದಲ್ಲಿ ಸೇರಿಸಬೇಕು. ಆದಾಗ್ಯೂ ಸಂವಿಧಾನದ 21 ಮತ್ತು 23ನೇ(ಈಗಿನ) ತಿದ್ದುಪಡಿಗಳು ಪಾಕ್ ಸೇನೆಗೆ ಮಿಲಿಟರಿ ನ್ಯಾಯಾಲಯಗಳನ್ನು ಸ್ಥಾಪಿಸಿ ನಾಗರಿಕರನ್ನು ಉಗ್ರವಾದದ ಆರೋಪದಲ್ಲಿ ವಿಚಾರಣೆ ನಡೆಸುವ ಅವಕಾಶ ಒದಗಿಸಿಕೊಟ್ಟಿದೆ. ಮಿಲಿಟರಿ ನ್ಯಾಯಾಲಯ ಅಸ್ತಿತ್ವದಲ್ಲಿದೆ ಎನ್ನುವ ವಾಸ್ತವವೇ “ಪಾಕಿಸ್ತಾನದ ನ್ಯಾಯಾಂಗ ಮತ್ತು ಸಂಸತ್ತು ಎಷ್ಟು ದುರ್ಬಲವಾಗಿದೆ’ ಎನ್ನುವುದನ್ನು ತೋರಿಸುತ್ತಿದೆ. ಹೀಗಿದ್ದಾಗ ತನಗಿಂತಲೂ ಬಲಿಷ್ಠವಾಗಿರುವ ಮಿಲಿಟರಿಯ ವಿರುದ್ಧ ಸರ್ಕಾರವೇಕೆ ಆಗಾಗ ಮುಖಾಮುಖೀಯಾಗುತ್ತಿದೆ? ಅದೇಕೆ ಪ್ರಧಾನಿ ಷರೀಫ್ ಅವರು ಭದ್ರತಾ ಪಡೆಗಳ ಅನುಮತಿ ಪಡೆಯದೆಯೇ ಭಾರತೀಯ ಉದ್ಯಮಿ ಸಜ್ಜನ್ ಜಿಂದಾಲ್‌ರನ್ನು ಪಾಕ್‌ಗೆ ಕರೆಸಿಕೊಂಡು ಭೇಟಿಯಾದರು? ಇದೇ ಪ್ರಶ್ನೆಯನ್ನು ಇನ್ನೊಂದು ರೀತಿಯಲ್ಲಿ ಕೇಳಬಹುದು. ಮಿಲಿಟರಿಯೇ ಪಾಕಿಸ್ತಾನದ ಪರಮೋಚ್ಚ ಶಕ್ತಿ ಅಂದಮೇಲೆ, ಅದು ಷರೀಫ್ ಮತ್ತು ಜಿಂದಾಲ್‌ರ ಭೇಟಿಯಿಂದ ಏಕೆ ಚಿಂತೆಗೀಡಾಗಬೇಕು? ದೇಶೀಯ ರಾಜಕೀಯದಲ್ಲಿ “ಭಾರತ ಮತ್ತು ಅಮೆರಿಕದ ಪಾತ್ರವಿದೆ’ ಎಂಬ ವಾಟ್ಸ್‌ಆ್ಯಪ್ ಮೆಸೇಜುಗಳ ಬಗ್ಗೆ ಏಕೆ ಅದು ತಲೆಕೆಡಿಸಿಕೊಳ್ಳಬೇಕು?
ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದರೆ, ಹೇಗೆ ನವಾಜ್‌ರ ಸರಕಾರ ಸೇನೆಯ ಜೊತೆ ಹೊಂದಾಣಿಕೆ ಮಾಡಿ ಕೊಂಡಿತು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನವಾಜ್‌ರ ಪ್ರಮುಖ ಉದ್ದೇಶ ತಮ್ಮ ಆಡಳಿತಾವಧಿಯನ್ನು ನಿರ್ವಿಘ್ನವಾಗಿ ಪೂರ್ತಿಗೊಳಿಸಬೇಕು ಮತ್ತು ರಾಜಕೀಯ-ಆರ್ಥಿಕ ಲಾಭ ಪಡೆಯಬೇಕು ಎನ್ನುವುದೇ ಹೊರತು, ಪಾಕಿಸ್ತಾನವನ್ನು ಪ್ರಜಾ ಪ್ರಭುತ್ವಿàಕರಿಸಬೇಕು ಎನ್ನುವುದಲ್ಲ. ಈ ಕಾರಣಕ್ಕಾಗಿಯೇ ಅವರ ಸರ್ಕಾರ ಸೇನೆಯ ಸಹಾಯ ಪಡೆಯಿತು. ಈ ನಡೆಯಿಂದ ಸರ್ಕಾರಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಿತಾದರೂ, ರಾಜಕೀಯವಾಗಿ ಮತ್ತು ಸಾಂಸ್ಥಿಕವಾಗಿ ಅದು ದುರ್ಬಲಗೊಂಡಿತು. ರಾಹಿಲ್ ಷರೀಫ್ರ ಅಧಿಕಾರಾವಧಿಯಲ್ಲಿ ಅಸ್ತಿತ್ವಕ್ಕೆ ಬಂದು ಕಾಣೆಯಾಗಿತ್ತು ಮಿಲಿಟರಿ ನ್ಯಾಯಾಲಯ. ನವಾಜ್ ಸರಕಾರ ಸಂವಿಧಾನದ ತಿದ್ದುಪಡಿಯ ಮೂಲಕ ಮತ್ತೆ ಮಿಲಿಟರಿ ನ್ಯಾಯಾಲಯವನ್ನು ಸ್ಥಾಪಿಸಲು ಸೇನೆಗೆ ಸಹಕರಿಸಿತು. ನವಾಜ್ ಹೀಗೇಕೆ ಮಾಡಿದರು ಎನ್ನುವುದನ್ನು ಸಾಮಾನ್ಯ ಓದುಗರೂ ಅರ್ಥಮಾಡಿಕೊಳ್ಳಬಲ್ಲರು.
ಆದರೆ ನಮ್ಮ ಮಿಲಿಟರಿಯು ತನ್ನ ಸಾಂಪ್ರದಾಯಿಕ ತಂತ್ರಕ್ಕೆ ಅಂಟಿಕೊಂಡು ವಿದೇಶಾಂಗ ನೀತಿಗಳಲ್ಲಿ ಅಧಿಕಾರ ಚಲಾಯಿಸಲು ಮುಂದಾಯಿತು. “ಪಾಕಿಸ್ತಾನವೇನಾದರೂ ಭಾರತದೊಂದಿಗೆ ಸೌಹಾರ್ದ ಸಾಧಿಸಿದರೆ, ಪಾಕ್ ಸೇನೆಯು ರಾಜಕೀಯ ಮತ್ತು ವ್ಯೂಹಾತ್ಮಕ ವಲಯದಲ್ಲಿ ತನ್ನ ಪ್ರಸ್ತುತತೆ ಕಳೆದುಕೊಳ್ಳುತ್ತದೆ’ ಎಂಬುದೇ ಮಿಲಿಟರಿಯ ಈ ಸಾಂಪ್ರದಾಯಿಕ ಫಾರ್ಮುಲಾ.
ಇತ್ತ ನವಾಜ್ “”ಹೇಗಿದ್ದರೂ ಮಿಲಿಟರಿ ನ್ಯಾಯಾಲಯ ಸ್ಥಾಪಿಸಿದ್ದೇವೆ, ಪಂಜಾಬ್ ಪ್ರಾಂತ್ಯದಲ್ಲಿನ ಆಡಳಿತವನ್ನು ಅದರ ಹಿಡಿತಕ್ಕೇ ಕೊಟ್ಟಿದ್ದೇವೆ. ಹೀಗಾಗಿ ನಮ್ಮ ಆಡಳಿತದ ಮೇಲೆ ಆಕ್ರಮಣ ಮಾಡಲು ಪಾಕ್ ಸೇನೆಯ ಮುಂದೆ ಯಾವುದೇ ಕಾರಣವಿಲ್ಲ” ಎಂದು ಭಾವಿಸಿದರು. ಈ ನಂಬಿಕೆಯ ಮೇಲೆಯೇ ಅವರು ಸೇನೆಯ ಪೂರ್ವಾನುಮತಿ ಪಡೆಯದೇ ಮೊದಲು ಭಾರತದ ಪ್ರಧಾನಿ ಮೋದಿಯವರನ್ನು, ನಂತರ ಸಜ್ಜನ್ ಜಿಂದಾಲ್‌ರನ್ನು ಕರೆಸಿಕೊಂಡರು. ಇತ್ತೀಚೆಗೆ ವಿತ್ತ ಸಚಿವ ಇಷಕ್ ದಾರ್‌ರನ್ನು ಅಮೆರಿಕಕ್ಕೂ ಕಳುಹಿಸಿಕೊಟ್ಟರು. ರಾಜಕೀಯವಾಗಿಯಾದರೂ ಸೇನೆಗಿಂತ ಒಂದು ಕೈ ಮೇಲಿರಬೇಕೆಂಬ ಕಾರಣಕ್ಕೆ ಪಾಕ್ ಸರ್ಕಾರ ಅಮೆರಿಕನ್ನರ ಜೊತೆಗೂ ಮಾತುಕತೆಯಲ್ಲಿ ತೊಡಗಿರಬಹುದು. ಆದರೆ “ಪಾಕಿಸ್ತಾನದ ರಾಜಕೀಯದಲ್ಲಿ ಅಮೆರಿಕ ಪಾತ್ರವಹಿಸಲಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳು ನಿಜವಾಗುತ್ತವೆ ಎನ್ನುವುದಕ್ಕೆ ಸಾಧ್ಯವಿಲ್ಲ. ಅಮೆರಿಕ ಈಗಂತೂ ಪಾಕಿಸ್ತಾನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ಅದು ಭಾರತದೊಂದಿಗಿನ ತನ್ನ ಸಂಬಂಧಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಆಸಕ್ತವಾಗಿದೆ. ಪಾಕ್ ಮಿಲಿಟರಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬ ನವಾಜ್‌ರ ಪ್ರಯತ್ನದಿಂದಾಗಿ ಸೇನೆ ಮತ್ತು ಸರ್ಕಾರದ ನಡುವೆ ಬಿಕ್ಕಟ್ಟು ಹುಟ್ಟುಹಾಕಿದೆ. ಇದೆಲ್ಲದರಿಂದಾಗಿ, ಕ್ಷಿಪ್ರಕ್ರಾಂತಿಯ ಸಾಧ್ಯತೆಯೂ ಇದೆ. ಆದರೆ ಇದೊಂದು ಅಸಂವಿಧಾನಿಕ ನಡೆಯಾಗಿದ್ದು, ಇಂಥ ನಡೆಗಳಿಂದಾಗಿ ರಾಜಕೀಯ-ಆರ್ಥಿಕ ತೊಂದರೆಗಳು ಎದುರಾಗುತ್ತವೆ. ಇಷ್ಟೆಲ್ಲ ಎದುರಿಸಲು ಪಾಕ್ ಸೇನೆಗೆ ಸಾಧ್ಯವೇ? ಹೌದು ಎನ್ನುವುದಾದರೆ, ಇಂದು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಒಂದು ದೇಶವಾಗಿ ಇದನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವಿದೆಯೇ?
“ಸಾಧ್ಯವಿಲ್ಲ’ ಎನ್ನುವುದೇ ನನ್ನ ಉತ್ತರ. ಹೀಗಾಗಿ ನಾನು ಸೇನೆ ಮತ್ತು ಸರ್ಕಾರಿ ನಾಯಕತ್ವಕ್ಕೆ ಕೇಳಿಕೊಳ್ಳುವುದಿಷ್ಟೆ. ಈ ಬಿಕ್ಕಟ್ಟನ್ನು ಸಾಂವಿಧಾನಿಕ ಚೌಕಟ್ಟಿನಲ್ಲೇ ಬಗೆಹರಿಸಿಕೊಳ್ಳಿ. ನೆನಪಿಡಿ; ಸ್ವಹಿತಾಸಕ್ತಿಗಾಗಿ ಇಡೀ ದೇಶ ಮತ್ತು ಸಮಾಜದ ಹಿತಾಸಕ್ತಿಯನ್ನು ಕಡೆಗಣಿಸಿದರೆ, ಮೊದಲೇ ಅಂತಾರಾಷ್ಟ್ರೀಯ ಹಾಗೂ ದೇಶೀಯವಾಗಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿರುವ ನಮ್ಮ ದೇಶ ಇನ್ನಷ್ಟು ದುರ್ಬಲವಾಗುತ್ತದೆ. ಸೇನೆ ಮತ್ತು ಸರ್ಕಾರದ ನಡುವಿನ ಈ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸುತ್ತಾ ಹೋದರೆ ಅಥವಾ ಕ್ಷಿಪ್ರಕ್ರಾಂತಿ ನಡೆದು ಆಡಳಿತವೇನಾದರೂ ಮಿಲಿಟರಿಯ ಹಿಡಿತಕ್ಕೆ ಬಂದರೆ, ಒಂದು ದೇಶವಾಗಿ ಪಾಕಿಸ್ತಾನ ಭವಿಷ್ಯದೆಡೆಗೆ ನಡೆಯುವ ಬದಲು ಭೂತಕಾಲಕ್ಕೆ ಹೋಗಿ ಕೂಡುತ್ತದೆ. ಆಗ ನಮ್ಮ ನೆರೆ ರಾಷ್ಟ್ರಗಳು(ಮುಖ್ಯವಾಗಿ ಭಾರತ) ಆರ್ಥಿಕವಾಗಿ ಮತ್ತು ವ್ಯೂಹಾತ್ಮಕವಾಗಿ ನಮಗಿಂತ ಎಷ್ಟೋ ಮುಂದೆ ಸಾಗಿಬಿಡುತ್ತವೆ. ಪಾಕಿಸ್ತಾನದ ಉಳಿವು ಇರುವುದು ಸಾಂವಿಧಾನಿಕ ಆಡಳಿತದಲ್ಲಿ, ಸಮತೋಲಿತ ಮಿಲಿಟರಿ-ಸರ್ಕಾರಿ ಸಂಬಂಧಗಳಲ್ಲಿ ಹಾಗೂ ಸಹಿಷ್ಣುತೆ ಮತ್ತು ಶಾಂತಿಯಲ್ಲಿ.
(ಲೇಖಕರು ಪಾಕಿಸ್ಥಾನದ ಇಕ್ರಾ ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರು)
ಡಾ. ಎಜಾಝ್ ಹುಸೇನ್