Advertisement

Cooperative Society; ಪಿಗ್ಮಿ ಸಂಗ್ರಾಹಕರಿಗೂ ಕಮಿಷನ್‌ ನಷ್ಟದ ಭೀತಿ; ಕಳವಳ

01:05 AM Mar 25, 2024 | Team Udayavani |

ಮಂಗಳೂರು: ರಾಜ್ಯ ಸರಕಾರ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಹೊರಡಿಸಿರುವ ಆದೇಶ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ವಿವಿಧೋದ್ದೇಶ ಸಹಕಾರ ಸಂಘಗಳು ಹಾಗೂ ಪಿಗ್ಮಿ ಸಂಗ್ರಾಹಕರಲ್ಲಿ ಕಳವಳ ಮೂಡಿಸಿದೆ.

Advertisement

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಕಲಂ 30ಬಿ ಅಡಿಯಲ್ಲಿ ಸರಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸಹಕಾರ ಸಂಘಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆಗಾಗಿ ಸಹಕಾರ ಸಂಘಗಳ ಗುಣಮಟ್ಟದ ಅಭಿವೃದ್ಧಿಗಾಗಿ ಎಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಎಂದು ಸರಕಾರ ಈ ನಿರ್ದೇಶನಗಳನ್ನು ಹೊರಡಿಸಿದೆ.

ಇದರಂತೆ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ವಿವಿಧೋದ್ದೇಶ ಸಹಕಾರ ಸಂಘಗಳು ಭಾರತೀಯ ಸ್ಟೇಟ್‌ಬ್ಯಾಂಕ್‌ ವಿವಿಧ ಠೇವಣಿ ಮೇಲೆ ವಿವಿಧ ಅವಧಿಗೆ ನಿಗದಿಪಡಿಸುವ ಬಡ್ಡಿದರ ಅಥವಾ ಅದರ ಮೇಲೆ ಶೇ. 2ರಷ್ಟು ಅಧಿಕ ಬಡ್ಡಿ ಮಾತ್ರವೇ ನಿಗದಿಪಡಿಸಬೇಕು. ಸಾಮಾನ್ಯವಾಗಿ ಸಹಕಾರಿ ಸಂಘಗಳು ಶೇ. 10ರಷ್ಟು ಬಡ್ಡಿದರ ನೀಡುತ್ತಿದ್ದು, ಇನ್ನು ಹಾಗೆ ನೀಡುವಂತಿಲ್ಲ. ಇದು ಸಹಕಾರಿ ಸಂಘಗಳಿಗೆ ಬರುವ ಗ್ರಾಹಕರಿಗೆ ನಷ್ಟವಾಗಲಿದೆ.

ಮೀಸಲು ಹೂಡಿಕೆ
ತಾವು ಸಂಗ್ರಹಿಸುವ ಠೇವಣಿಯ ಮೊತ್ತದ ಒಂದು ಪಾಲನ್ನು ಸಹಕಾರಿ ಸಂಘಗಳು ಹಿಂದೆ ಇತರ ಸಹಕಾರಿ ಬ್ಯಾಂಕ್‌ಗಳಲ್ಲಿ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಹಂಚಿ ಇರಿಸುತ್ತಿದ್ದವು. ಇದರಿಂದ ಸುರಕ್ಷೆಯೂ ಇತ್ತು, ಗ್ರಾಹಕರು ಕೇಳುವಾಗ ಹಿಂದಿರುಗಿಸಲು ನೆರವಾಗುತ್ತಿತ್ತು. ಆದರೆ ಹೊಸ ಆದೇಶದ ಪ್ರಕಾರ ಡಿಸಿಸಿ ಬ್ಯಾಂಕ್‌ಗಳು ಅಥವಾ ಅಪೆಕ್ಸ್‌ ಬ್ಯಾಂಕ್‌ನಲ್ಲಿ ಮಾತ್ರವೇ ಇರಿಸಬೇಕು ಎಂದಿದೆ. ದ.ಕ. ಸೇರಿದಂತೆ ಒಂದೆರಡು ಡಿಸಿಸಿ ಬ್ಯಾಂಕ್‌ಗಳು ಮಾತ್ರವೇ ಲಾಭದಲ್ಲಿವೆ, ಉಳಿದವುಗಳಲ್ಲಿ ಮೊತ್ತ ಇರಿಸುವುದು ಕೂಡ ಸುರಕ್ಷಿತವಾಗಿಲ್ಲ, ಅಲ್ಲದೆ ಅಪೆಕ್ಸ್‌, ಜಿಲ್ಲಾ ಡಿಸಿಸಿ ಬ್ಯಾಂಕ್‌ಗಳಲ್ಲಿ ಮೊತ್ತ ಇರಿಸಿದ್ದರ ಬಗ್ಗೆ ಸರಕಾರ ಖಾತ್ರಿ ನೀಡುವುದೇ ಎಂದು ಸಂಘಗಳ ಆಡಳಿತದಾರರು ಕೇಳುತ್ತಾರೆ.

ಏಜೆಂಟರ ಬದುಕಿಗೂ ಹೊಡೆತ
ಸಾಮಾನ್ಯವಾಗಿ ಪಿಗ್ಮಿ ಏಜೆಂಟರಿಗೆ ಅವರು ಸಂಗ್ರಹಿಸುವ ಠೇವಣಿಗೆ ಶೇ. 3.5ರಿಂದ ಶೇ. 4.5ರ ವರೆಗೂ ಕಮಿಷನ್‌ ನೀಡಲಾಗುತ್ತದೆ. ಆದರೆ ಇನ್ನು ಮುಂದೆ ಇದು ಶೇ. 3 ಮೀರುವಂತಿಲ್ಲ ಎಂಬ ಆದೇಶ ಬಂದಿದೆ. ಇದರಿಂದ ಅದನ್ನೇ ನಂಬಿಕೊಂಡು ಬದುಕುವ ಸಹಸ್ರಾರು ಪಿಗ್ಮಿ ಸಂಗ್ರಾಹಕರಿಗೂ ಸಮಸ್ಯೆಯಾಗುವ ಆತಂಕ ಉಂಟಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next