Advertisement

ಕುಸಿಯುವ ಭೀತಿಯಲ್ಲಿ ಕರ್ನೂರು, ಕೋಟಿಗದ್ದೆ  ಸೇತುವೆಗಳು

11:28 AM Jul 04, 2018 | Team Udayavani |

ಈಶ್ವರಮಂಗಲ : ಪಳ್ಳತ್ತೂರು ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಕೇರಳ ಸಂಪರ್ಕಕ್ಕೆ ಪರ್ಯಾಯ ರಸ್ತೆಯಾದ ಕಾವು – ಪಳ್ಳತ್ತೂರಿನಲ್ಲಿ ಎರಡು ಸೇತುವೆಗಳು ವಾಹನಗಳ ಸಂಚಾರದ ಒತ್ತಡದಿಂದ ಅಪಾಯದಲ್ಲಿವೆ. ಹೀಗಾಗಿ, ಕೇರಳ ಸಂಪರ್ಕ ಆತಂಕಿತವಾಗಿದೆ. ಪಳ್ಳತ್ತೂರು ಸೇತುವೆ ಕಾಮಗಾರಿಯನ್ನು ಕೇರಳ ರಾಜ್ಯದ ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದ್ದು, ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದೆ. ಸದ್ಯಕ್ಕೆ ಕಾಮಗಾರಿ ಮುಗಿಯುವಂತಿಲ್ಲ. ಹೀಗಾಗಿ, ಪಂಚೋಡಿಯಿಂದ ಕರ್ನೂರು, ಗಾಳಿ ಮುಖ ಮೂಲಕ ಜಿ.ಪಂ.ರಸ್ತೆಯಲ್ಲಿ ಸಂಚರಿಸಬೇಕು. ಆದರೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಮಳೆಯ ನೀರು ರಸ್ತೆ ಅಂಚಿನಲ್ಲಿಯೇ ಹೋಗುವುದರಿಂದ ರಸ್ತೆ ಅಂಚಿನಲ್ಲಿ ಹೊಂಡಗಳಾಗಿ ವಾಹನ ಸಂಚಾರ ದುಸ್ತರವಾಗಿದೆ. ಅಧಿಕ ಸಾಮರ್ಥ್ಯದ ಘನ ವಾಹನಗಳು ಈ ರಸ್ತೆಯ ಮೂಲಕವೇ ಕೇರಳಕ್ಕೆ ಹೋಗಿ ಬರುತ್ತಿವೆ. ಮಣ್ಣಿನ ತೇವಾಂಶ ಹೆಚ್ಚು ಇರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಕೆಸರುಮಯವಾಗಿದೆ.

Advertisement

ಜಿ.ಪಂ. ರಸ್ತೆಯ ಮೇಲೆ ಒತ್ತಡ ಹೆಚ್ಚಿರುವುದರಿಂದ ಎರಡೂ ಕಡೆಯ ಸೇತುವೆಗಳು ಅಲುಗಾಡಲು ಶುರುವಾಗಿವೆ. ಸುಮಾರು 30 ವರ್ಷಗಳಷ್ಟು ಹಳೆಯ ಸೇತುವೆಗಳ ಕೆಳಭಾಗದಲ್ಲಿ ಆಧಾರ ಕಲ್ಲುಗಳು ಮಳೆಯ ನೀರಿಗೆ ಕೊಚ್ಚಿ ಹೋಗಿವೆ. ಸೇತುವೆ ಕೆಳಭಾಗದ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದ್ದು, ಸಿಮೆಂಟ್‌ ಪದರಗಳು ಉದುರಲು ಆರಂಭಿಸಿವೆ. ಘನ ವಾಹನಗಳು ಸಂಚರಿಸುವಾಗ ಈ ಸೇತುವೆಯೇ ಅಲುಗಾಡುತ್ತದೆ. ಒಟ್ಟಾರೆಯಾಗಿ ಈ ರಸ್ತೆ ಹಾಗೂ ಸೇತುವೆಗಳಲ್ಲಿ ಆತಂಕಪಡುತ್ತಲೇ ಸಾಗುವಂತಾಗಿದೆ.

ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಸೇತುವೆ ಹಾಗೂ ರಸ್ತೆಯ ಬಗ್ಗೆ ತಾಸುಗಟ್ಟಲೆ ಚರ್ಚೆ ನಡೆದಿದೆ. ಈ ರಸ್ತೆಯಲ್ಲಿ ಅಕ್ರಮ ಮರಳು, ಕೆಂಪು ಕಲ್ಲುಗಳನ್ನು ಲಾರಿಗಳಲ್ಲಿ ಮಿತಿಮೀರಿ ಹೇರಿ, ಸಾಗಿಸಲಾಗುತ್ತದೆ. ಹಲವು ವಾಹನಗಳಿಗೆ ಪರವಾನಿಗೆಯೂ ಇಲ್ಲ. ಆದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸೇತುವೆ ಅಲುಗಾಡುತ್ತಿದೆ. ಹೀಗೇ ಮುಂದುವರಿದರೆ ಸೇತುವೆ ಕುಸಿದು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಘನ ವಾಹನಗಳಿಗೆ ಸಂಚಾರ ನಿರ್ಬಂಧಿಸುವ ಬ್ಯಾನರ್‌ ಆಳವಡಿಸುವಂತೆ ಸದಸ್ಯರು ಆಗ್ರಹಿಸಿದರು. ಅಧಿಕಾರಿಗಳಿಗೆ ಬರೆಯಲು ತೀರ್ಮಾನಿಸಲಾಯಿತು.

ಪರ್ಯಾಯ ರಸ್ತೆಯಿಲ್ಲ
ರಸ್ತೆ ಕುಸಿತ ಅಥವಾ ರಿಪೇರಿ ಮಾಡಲು ಹೊರಟರೆ ಸಂಪರ್ಕಕ್ಕೆ ಪರ್ಯಾಯ ರಸ್ತೆ ಯಾವುದೂ ಇಲ್ಲ. ಈಗಾಗಲೇ ಪಳ್ಳತ್ತೂರು ಸೇತುವೆಯ ಕಾಮಗಾರಿಗೆ ಸಂಚಾರ ನಿರ್ಬಂಧಿಸುವುದರಿಂದ ಬೆದ್ರಾಡಿ ಅಥವಾ ಕೋಟಿಗದ್ದೆ ಸೇತುವೆ ಕುಸಿತ ಕಂಡರೆ ಕಾವು, ಜಾಲ್ಸೂರು ಮೂಲಕ ಗಾಳಿಮುಖವಾಗಿ ಸಂಚರಿಸಬೇಕಾಗುತ್ತದೆ. ಆದ್ದರಿಂದ ಈ ಕೂಡಲೇ ಸೇತುವೆಯ ಸಾಮರ್ಥ್ಯವನ್ನು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಿರ್ಣಯ ಕೈಗೊಂಡಿದ್ದೇವೆ
ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಂಡು ಜಿ.ಪಂ. ಎಂಜಿನಿಯರಿಂಗ್‌ ವಿಭಾಗಕ್ಕೆ ಹಾಗೂ ಶಾಸಕರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬರೆಯಲಾಗಿದೆ. ಶಕುಂತಳಾ ಶೆಟ್ಟಿ ಶಾಸಕರಾಗಿದ್ದಾಗ ಪಂಚೋಡಿ- ಗಾಳಿಮುಖ ಜಿ.ಪಂ. ರಸ್ತೆಯನ್ನು ಎಂಡಿಆರ್‌ಗೆ ಮೇಲ್ದರ್ಜೆಗೆ ಏರಿಸುವಂತೆ ಲೋಕೋಪಯೋಗಿ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದಾರೆ. ತತ್‌ಕ್ಷಣ ಸ್ಪಂದಿಸಬೇಕು.
– ಶ್ರೀರಾಮ್‌ ಪಕ್ಕಳ, ಉಪಾಧ್ಯಕ್ಷರು,
ನೆಟ್ಟಣಿಗೆಮುಟ್ನೂರು ಗ್ರಾ.ಪಂ.

Advertisement

ಮಾಧವ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next