ಸಿನಿಮಾಗಳು ಗೆದ್ದ ಸಂಭ್ರಮದಲ್ಲಿ ತೇಲಾಡಬೇಕಿದ್ದ ಕನ್ನಡ ಚಿತ್ರರಂಗ ಒಂದರ ಹಿಂದೊಂದರಂತೆ ಶಾಕಿಂಗ್ ನ್ಯೂಸ್‌ಗಳನ್ನು ಎದುರಿಸುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳ ಸುದ್ದಿಯ ಬದಲು ಕನ್ನಡ ಚಿತ್ರರಂಗದ ವಿವಾದಗಳು ಸದ್ದು ಮಾಡುತ್ತವೆ. ಇದೇ ಕಾರಣದಿಂದ ಸಿನಿಮಾ ಮಂದಿ ನಿಜಕ್ಕೂ ಶಾಕ್ ಆಗಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಚಂದನ್-ನಿವೇದಿತಾ ಡೈವೋರ್ಸ್ ಸುದ್ದಿ, ಅದರ ಬೆನ್ನಿಗೆ ದೊಡ್ಮನೆಯ ಕುಡಿ ವಿನಯ್ ವಿಚ್ಛೇದನ… ಈಗ ಕೊಲೆ ಆರೋಪಿಯಾದ ದರ್ಶನ್.
ವಿಚ್ಛೇದನವೇನೋ ಅವರವರ ವೈಯಕ್ತಿಕ ವಿಚಾರವೆಂದು ಪಕ್ಕಕ್ಕಿಟ್ಟರೂ ಸದ್ಯ ದರ್ಶನ್ ಪ್ರಕರಣವಂತೂ ಇಡೀ ಸ್ಯಾಂಡಲ್‌ವುಡ್ ತಲೆತಗ್ಗಿಸುವಂತಾಗಿರುವುದು ಸುಳ್ಳಲ್ಲ. ಕೆಲವು ದಿನಗಳ ಹಿಂದಷ್ಟೇ ಗೋವಾದಲ್ಲಿ ನಿರ್ಮಾಪಕರು ಪಾರ್ಟಿ ಮಾಡಿ ಹೊಡೆದಾಡಿದ ವಿಚಾರಕ್ಕೆ ಸ್ಯಾಂಡಲ್‌ವುಡ್ ಬಗ್ಗೆ ಅನೇಕರು ತುತ್ಛವಾಗಿ ಮಾತನಾಡುತ್ತಿದ್ದರು.
ಈಗ ಬಹುಬೇಡಿಕೆಯ, ಅಪಾರ ಅಭಿಮಾನಿ ವರ್ಗ ಹೊಂದಿರುವ ಸ್ಟಾರ್ ನಟನೊಬ್ಬ ಸಣ್ಣ ವಿಚಾರಕ್ಕೆ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡುವ, ಮಾಡಿಸುವ ಹಂತಕ್ಕೆ ಹೋಗುತ್ತಾನೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾದರೂ ಯಾವ ಸಿನಿಮಾವೂ ಗೆದ್ದಿಲ್ಲ. ಸೆಕೆಂಡ್ ಹಾಫ್ ನ ಲ್ಲಾದರೂ ಸಿನಿಮಾಗಳು ಗೆಲ್ಲಬಹುದು, ಯಶಸ್ಸನ್ನು ಸಂಭ್ರಮಿಸಬಹುದು ಎಂದು ಕಾಯುತ್ತಿದ್ದ ಸಿನಿಮಾ ಮಂದಿ ಹಾಗೂ ಪ್ರೇಕ್ಷಕರಿಗೆ ಸ್ಯಾಂಡಲ್‌ವುಡ್ ನಟ ಶಾಕ್ ನೀಡಿದಂತಾಗಿದೆ. ಒಂದಷ್ಟು ದಿನವಂತೂ ಸ್ಯಾಂಡಲ್‌ವುಡ್ ಇದೇ ಸುದ್ದಿಯ ಗುಂಗಲ್ಲಿರುವುದಂತೂ ಸುಳ್ಳಲ್ಲ.
ರಿಲೀಸ್ ಸಿನಿಮಾಗಳ ಟೆನ್ಷನ್: ಈ ವಾರ ಕನ್ನಡ ಚಿತ್ರರಂಗದಲ್ಲಿ ಆರು ಚಿತ್ರಗಳು ಬಿಡುಗಡೆಯಾಗುತ್ತಿವೆ ಕೋಟಿ, ಲವ್‌ಲೀ, ಶಿವಮ್ಮ, ಶೆಫ್ ಚಿದಂಬರ, ಚಿ. ತು. ಸಂಘ, ಯಾವೋ ಇವೆಲ್ಲ ಚಿತ್ರಗಳು ಈ ವಾರ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಇದರಲ್ಲಿ ಒಂದಷ್ಟು ಸಿನಿಮಾಗಳು ನಿರೀಕ್ಷೆ ಕೂಡಾ ಹುಟ್ಟು ಹಾಕಿವೆ. ಆದರೆ, ಈಗ ಆ ಸಿನಿಮಾಗಳಿಗೆ ದರ್ಶನ್ ಪ್ರಕರಣದ ಕರಿನೆರಳು ಬೀಳುತ್ತಾ ಎಂಬ ಚಿಂತೆಯಾಗಿದೆ.
ಮುಖ್ಯವಾಗಿ ಜನರ ಹಾಗೂ ಮಾಧ್ಯಮಗಳ ಗಮನವೆಲ್ಲಾ ಈ ಘಟನೆಯ ಮೇಲಿದೆ. ಹೀಗಿರುವಾಗ ತಮ್ಮ ಸಿನಿಮಾಗಳಿಗೆ ಸಿಗಬೇಕಾದ ಪ್ರಚಾರ,ಮಾನ್ಯತೆ ಸಿಗುತ್ತಾ ಎಂಬ ಟೆನ್ಷನ್ ಅಂತೂ ತಂಡಗಳಿಗೆ ಇವೆ.
ಅತಿರೇಕದ ಅಭಿಮಾನ: ಅಭಿಮಾನಿಗಳ ಅತಿರೇಕದ ಅಭಿಮಾನ ಇವತ್ತು ಸ್ಟಾರ್ ನಟರನ್ನು ದಾರಿ ತಪ್ಪಿಸುತ್ತಿದೆಯಾ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ತಾವೇನು ಮಾಡಿದರೂ “ಜೈಕಾರ’ ಹಾಕುತ್ತಾರೆ ಎಂಬ ಮನಸ್ಥಿತಿಗೆ ಸ್ಟಾರ್ ನಟರು ಬಂದರೆ ಅದು ಮುಂದೆ ಅನೇಕ ಅನಾಹುತಗಳಿಗೆ ದಾರಿ ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ. ಒಳ್ಳೆಯ ಸಿನಿಮಾಗಳನ್ನು ಗೆಲ್ಲಿಸಿ ಆ ಮೂಲಕ ಸ್ಟಾರ್ ನಟನನ್ನು ಅಭಿಮಾನಿಗಳು ಮೆರೆಸಬೇಕೇ ವಿನಃ ಆತ ಮಾಡಿದ ತಪ್ಪುಗಳನ್ನು ಸಮಜಾಯಿಷಿಕೊಂಡಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.