Advertisement

ಎಫ್‌ಡಿಎ ಪರೀಕ್ಷೆ: ತೀವ್ರ ಕಟ್ಟೆಚ್ಚರ

11:16 AM Feb 02, 2018 | Team Udayavani |

ಕಲಬುರಗಿ: ನಗರ ಮತ್ತು ಜೇವರ್ಗಿ ಪಟ್ಟಣದಲ್ಲಿ ಫೆ. 4ರಂದು ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಯ ನೇಮಕಾತಿಗಾಗಿ ನಡೆಯುವ ಎಫ್‌.ಡಿ.ಎ. ಪರೀಕ್ಷೆಯನ್ನು ತೀವ್ರ ಕಟ್ಟೆಚ್ಚರ ಮತ್ತು ಜವಾಬ್ದಾರಿಯಿಂದ ನಡೆಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೂಟ್‌ ಅಧಿಕಾರಿಗಳು, ಜಾಗೃತಿ ದಳದ ಮುಖ್ಯಸ್ಥರು ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಮೇಲ್ವಿಚಾರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಲಬುರಗಿ ನಗರದಲ್ಲಿ 75 ಮತ್ತು ಜೇವರ್ಗಿಯ 4 ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 75 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 31 ಸಾವಿರ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸುಸೂತ್ರವಾಗಿ ನಡೆಯಲು ತಲಾ 19 ಮಾರ್ಗಾ ಧಿಕಾರಿಗಳು ಹಾಗೂ ಜಾಗೃತ ದಳದ ವೀಕ್ಷಕರನ್ನು ನೇಮಿಸಲಾಗಿದೆ. ವೀಕ್ಷಕರು ಹಾಗೂ ಮಾರ್ಗಾಧಿ ಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ತಮಗೆ ವಹಿಸಲಾದ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳಿಗೆ ಅಗತ್ಯ ಸಲಹೆ-ಸೂಚನೆ ನೀಡಬೇಕೆಂದರು.
ಫೆಬ್ರವರಿ 4ರಂದು ಬೆಳಗ್ಗೆ 10ರಿಂದ 11:30 ಗಂಟೆವರೆಗೆ ಪತ್ರಿಕೆ-1 ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ 2 ರಿಂದ 3:30 ಗಂಟೆಯವರೆಗೆ ಪತ್ರಿಕೆ-2 ಸಾಮಾನ್ಯ ಕನ್ನಡ, ಇಂಗ್ಲಿಷ ಪರೀಕ್ಷೆ ನಡೆಯಲಿದೆ.

ಓ.ಎಂ.ಆರ್‌. ಶೀಟ್‌ನಲ್ಲಿ ಅಭ್ಯರ್ಥಿಗಳ ಎಲ್ಲ ಮಾಹಿತಿ ಮುದ್ರಿತ ಗೊಂಡಿರುವುದರಿಂದ ಅದನ್ನು ಖಚಿತಪಡಿಸಿಕೊಂಡು ಅಭ್ಯರ್ಥಿಗಳು ಕೇವಲ ಸಹಿ ಮಾತ್ರ ಮಾಡಬೇಕೆಂದರು. ರವಿವಾರ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ ನಂತರ ಉತ್ತರ ಪತ್ರಿಕೆಗಳ ರವಾನೆಗಾಗಿ ಕಲಬುರಗಿ ನಗರದ 06 ಮತ್ತು ಜೇವರ್ಗಿ ಪಟ್ಟಣದಲ್ಲಿ 01 ಅಂಚೆ ಕಚೇರಿಗಳು ವಿಶೇಷವಾಗಿ ಕಾರ್ಯನಿರ್ವಹಿಸಲಿವೆ ಎಂದರು.

ಮಾರ್ಗಾಧಿಕಾರಿಗಳು ಪರೀಕ್ಷಾ ದಿನದಂದು ನಿಗದಿತ ಸಮಯಕ್ಕೆ ಖಜಾನೆಯಲ್ಲಿ ಹಾಜರಿದ್ದು, ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ಪೂರೈಸಬೇಕು. ಆದರೆ ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಪಡೆಯುವ ಮುನ್ನ ಬಂಡಲ್‌ ಭದ್ರಪಡಿಸಿರುವುದನ್ನು (ಸೀಲ್‌) ಖಚಿತಪಡಿಸಿಕೊಳ್ಳಬೇಕು ಎಂದರು.

Advertisement

ಪರೀಕ್ಷಾ ಕೇಂದ್ರದಲ್ಲಿ ಆಸನ, ಕುಡಿಯುವ ನೀರು, ಸಾಕಷ್ಟು ಬೆಳಕಿನ ಮತ್ತು ಶೌಚಾಲಯ ವ್ಯವಸ್ಥೆ ಬಗ್ಗೆ ಹಾಗೂ ಸುಗಮ ಪರೀಕ್ಷಾ ಸಿದ್ಧತೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪ್ರತ್ಯೇಕ ಮಹಿಳಾ ಮತ್ತು ಪುರುಷ ಪೊಲೀಸರನ್ನು ನೇಮಿಸುವುದು. ಪೊಲೀಸರು ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮುನ್ನವೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದು, ಅಭ್ಯರ್ಥಿಗಳನ್ನು ತಪಾಸಣೆ ನಡೆಸಿಯೇ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಉಪಕರಣಗಳು ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್‌, ಪೇಜರ್‌, ಬ್ಲೂಟೂತ್‌, ವೈರಲೆಸ್‌ ಸೆಟ್‌, ಸ್ಲೆಡ್‌ರೂಲ್‌ ಕ್ಯಾಲ್ಕುಲೇಟರ್‌, ವಾಚ್‌ ಕ್ಯಾಲ್ಕುಲೇಟರ್‌, ಪಠ್ಯ ಪುಸ್ತಕ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ತರುವುದನ್ನು ನಿಷೇಧಿ ಸಲಾಗಿದೆ. ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾದರೆ ಅಂತಹವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್‌, ಕರ್ನಾಟಕ ಲೋಕಸೇವಾ ಆಯೋಗ ಕಲಬುರಗಿ ಪ್ರಾಂತೀಯ ಕಚೇರಿಯ ಹಿರಿಯ ಸಹಾಯಕ ಅಂಬರೀಷ, ಮಾರ್ಗಾಧಿ ಕಾರಿಗಳು, ವೀಕ್ಷಕರು, ಮುಖ್ಯ ಮೇಲ್ವಿಚಾರಕರು ಹಾಜರಿದ್ದರು.

ಪ್ರವೇಶ ಪತ್ರ-ಗುರುತಿನ ಚೀಟಿ ಕಡ್ಡಾಯ
ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ಆಧಾರ ಕಾರ್ಡ್‌ ತರುವುದು ಕಡ್ಡಾಯವಾಗಿದೆ. ಒಂದು ವೇಳೆ ಆಧಾರ ಕಾರ್ಡ್‌ ಇಲ್ಲದಿದ್ದಲ್ಲಿ ಆಧಾರ ನೋಂದಣಿ ಮಾಡಿದ ಸ್ವೀಕೃತ ಪ್ರತಿಯೊಂದಿಗೆ ಚುನಾವಣಾ ಗುರುತಿನ ಚೀಟಿ, ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌ ಅಥವಾ ಸರ್ಕಾರಿ ನೌಕರರ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಮೂಲ ದಾಖಲೆ ತರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳು ಗುರುತಿನ ಚೀಟಿಯನ್ನು ತರದಿದ್ದಲ್ಲಿ ಪರೀಕ್ಷೆ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ.
 ಭೀಮಾಶಂಕರ ತೆಗ್ಗೆಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next