ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವಿವಿಧ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ (ಎಫ್ ಡಿಎ) ನೇಮಕಾತಿಯ ಪರೀಕ್ಷೆಯ ಅಕ್ರಮದಲ್ಲೂ ಪ್ರಮುಖ ಆರೋಪಿಯಾಗಿರುವ ಪಿಎಸ್ಐ ನೇಮಕಾತಿ ಹಗರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.
ಅಫಜಲಪುರ ಸಿಪಿಐ ಪಂಡಿತ ಸಗರ ಸೇರಿ ಕಲಬುರಗಿ ಪೊಲೀಸ್ ಆಯುಕ್ತಾಲಯದ ಅಧಿಕಾರಿಗಳ ಒಳಗೊಂಡ ವಿಶೇಷ ತಂಡ ರಚಿಸಲಾಗಿದೆ. ತಂಡ ಬಂಧಿಸುವ ನಿಟ್ಟಿನಲ್ಲಿ ಮಾಹಿತಿ ಹಾಕಲು ಕಾರ್ಯೋನ್ಮುಖಗೊಂಡಿದೆ.
ಎಫ್ ಡಿಎ ನೇಮಕಾತಿಯ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಬಹಿರಂಗ, ಬ್ಲೂಟೂತ್ ಬಳಕೆ ಸೇರಿದಂತೆ ಇತರ ಅಕ್ರಮವಾಗಲು ಆರ್. ಡಿ ಪಾಟೀಲ್ ಕೈವಾಡ ಇರುವ ಹಿನ್ನೆಲೆಯಲ್ಲಿ ಆರೋಪಿ 1 ಎಂದು ಎಫ್ಐಆರ್ ದಲ್ಲಿ ದಾಖಲಿಸಿಕೊಳ್ಳಲಾಗಿದೆ.
ಬ್ಲೂಟೂತ್ ಬಳಕೆ ಮಾಡಿ ಸಿಕ್ಕಿ ಬಿದ್ದಿರುವ ಅಭ್ಯರ್ಥಿಗಳೇ ಆರ್. ಡಿ .ಪಾಟೀಲ್ ಸಹಾಯದಿಂದಲೇ ಅಕ್ರಮ ಮಾಡಲು ಸಾಧ್ಯವಾಗಿದೆ ಎಂದು ಹಾಗೂ ಇದರ ಹಿಂದೆ ವ್ಯವಸ್ಥಿತ ತಂಡವೇ ಇದೆ ಎಂದು ಹೇಳಿದ್ದರಿಂದ ಭವಿಷ್ಯದಲ್ಲಿ ಇಂತಹ ಪ್ರಕರಣ ಮರುಕಳಿಸದ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕಿರುವುದರಿಂದ ವಿವಿಧ ಆಯಾಮಗಳಲ್ಲಿ ತನಿಖೆಗೈಯಲು ಈಗ ಆರ್.ಡಿ ಪಾಟೀಲ್ ಬಂಧನ ಮುಖ್ಯವಾಗಿದೆ. ಆದರೆ ಪ್ರಕರಣ ಹೊರ ಬರುತ್ತಿದ್ದಂತೆ ಆರ್ ಡಿ ಪಾಟೀಲ್ ಅಜ್ಞಾತ ಸ್ಥಳಕ್ಕೆ ಹೋಗಿದ್ದು, ಯಾರಿಗೂ ಸುಳಿವು ಸಿಕ್ಕಿಲ್ಲ. ಹೀಗಾಗಿ ಬಂಧನ ಪೊಲೀಸರಿಗೆ ಒಂದು ಸವಾಲಾಗಿ ಪರಿಣಮಿಸುವ ಸಾದ್ಯತೆಗಳಿವೆ. ಬಂಧನಕ್ಕಿಂತ ಸಾಕ್ಷಿ ಗಳು ಬಲಪಡಿಸುವ ಕೆಲಸ ಈಗ ಪ್ರಮುಖವಾಗಿದೆ ಎನ್ನಲಾಗಿದೆ. ಸಾಕ್ಷಿಗಳು ನಾಶಪಡಿಸಬಹುದು. ಆದರೆ ಆರೋಪಿಗಳನ್ನು ನಾಶಪಡಿಸಲು ಸರಳವಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪಿಎಸ್ಐ ಹಗರಣ ಪ್ರಕರಣ ದಾಖಲಾದ ನಂತರ ವ್ಯಾಪಕ ಶೋಧ ಹಾಗೂ ಕಾರ್ಯಾಚರಣೆ ನಡೆಸಿ ಎರಡು ವಾರಗಳ ನಂತರ ಮಹಾರಾಷ್ಟ್ರದಲ್ಲಿ ಸಿಒಡಿ ತಂಡ ಆರ್. ಡಿ. ಪಾಟೀಲ್ ನ್ನು ಬಂಧಿಸಿತ್ತು. ತದನಂತರ ಎಷ್ಟೆಲ್ಲಾ ನಾಟಕವಾಡಿದ ಎಂಬುದು ಇಲ್ಲಿ ಸ್ಮರಿಸಬಹುದಾಗಿದೆ.