Advertisement

ಥೇಟ್‌ ಅಮ್ಮನ ಕೈರುಚಿ!

04:32 PM Jun 16, 2018 | |

ಶಿವಾನಂದ ಸರ್ಕಲ್‌ನಿಂದ ಮೆಜೆಸ್ಟಿಕ್‌ ಕಡೆ ಹೋಗುವ ರಸ್ತೆಯಲ್ಲಿ ಹತ್ತು ಹೆಜ್ಜೆ ನಡೆದರೆ ಸಾಕು; ಬ್ರಿಡ್ಜ್ ಸಿಗುತ್ತದೆ. ಅಲ್ಲಿಂದ ಮತ್ತೆ ಹತ್ತು ಹೆಜ್ಜೆ ಮುಂದೆ ಹೋದರೆ ಸರ್ಕಲ್‌ ಇದೆ. ಅಲ್ಲಿ ಬಲಕ್ಕೆ ತಿರುಗಿ, ಮುಂದೆ ಹೋದರೆ, ಗುಂಪು ಗುಂಪಾಗಿ ನಿಂತ ಜನ ರವಾ ಇಡ್ಲಿಯನ್ನೋ, ದೋಸೆ- ಚಿತ್ರಾನ್ನವನ್ನೋ ತಿನ್ನುವುದು ಕಾಣಿಸುತ್ತದೆ. ತಿಂಡಿಪ್ರಿಯರು ಹೋಗಬೇಕಿರೋದೇ ಅಲ್ಲಿಗೆ… “ಅಮ್ಮ ಬ್ರಾಹ್ಮಿನ್‌ ಕೆಫೆ’ ಎಂಬ ಹೋಟೆಲ್‌ನ ಪರಿಚಯವನ್ನು ಹೀಗೆ ಮಾಡಿ ಕೊಡಬಹುದು. 

Advertisement

ಬಗೆಬಗೆಯ ಭಕ್ಷ್ಯಗಳು
ತಟ್ಟೆ ಇಡ್ಲಿ, ಚಿತ್ರಾನ್ನಕ್ಕೆ ಹೆಸರುವಾಸಿಯಾಗಿರುವ “ಅಮ್ಮ ಬ್ರಾಹ್ಮಿನ್‌ ಕೆಫೆ’ಯಲ್ಲಿ ಮಸಾಲೆ ದೋಸೆ, ರೈಸ್‌ಬಾತ್‌, ಬೆಣ್ಣೆ ದೋಸೆ, ಮೊಸರನ್ನ, ವಡೆ, ರವಾ ಇಡ್ಲಿ, ರಾಗಿ ದೋಸೆ, ಬಜ್ಜಿ, ಚಪಾತಿ, ಜಾಮೂನ್‌, ಹೋಳಿಗೆ, ಖಾಲಿ ದೋಸೆ, ಚೌಚೌ ಬಾತ್‌, ಶ್ಯಾವಿಗೆ ಬಾತ್‌, ಈರುಳ್ಳಿ ದೋಸೆ ಸೇರಿದಂತೆ ಹಲವು ಬಗೆಯ ತಿನಿಸುಗಳು ಸಿಗುತ್ತವೆ.

ಕೈಗೆಟಕುವ ದರ
ಶುಚಿರುಚಿಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಂಡಿರುವುದು, ಎಲ್ಲಾ ತಿನಿಸುಗಳ ಬೆಲೆ ಮಧ್ಯಮ ವರ್ಗದವರಿಗೆ ಎಟುಕುವಂತೆಯೇ ಇರುವುದು, ಈ ಹೋಟೆಲ್‌ನ ಪ್ಲಸ್‌ ಪಾಯಿಂಟ್‌. ಇದೇ ಕಾರಣಕ್ಕೆ ಇಲ್ಲಿಗೆ ಎಲ್ಲ ವಯೋಮಾನದವರೂ ಬರುತ್ತಾರೆ.

  ಉಡುಪಿ ಸಮೀಪದ ಉಣಚೂರಿನ ಶ್ಯಾಂ ಭಟ್‌, ಈ ಹೋಟೆಲ್‌ನ ಮಾಲೀಕರು. ಹೋಟೆಲ್‌ ಉದ್ಯಮದಲ್ಲಿ ಒಟ್ಟು 30 ವರ್ಷಗಳ ಅನುಭವ ಹೊಂದಿರುವ ಇವರು, 2000ನೇ ಇಸವಿಯಲ್ಲಿ ಈ ಹೋಟೆಲ್‌ ಆರಂಭಿಸಿದರು. 18 ವರ್ಷಗಳಿಂದ, ಗ್ರಾಹಕರ ಸಂತೃಪ್ತಿಯೇ ನಮ್ಮ ಸಂತೋಷ ಎಂಬ ಧ್ಯೇಯವನ್ನಿಟ್ಟುಕೊಂಡು ಹೋಟೆಲ್‌ ನಡೆಸುತ್ತಿದ್ದಾರೆ. ಈ ಹೋಟೆಲ್‌, ಸಂತೋಷ, ಸಂತೃಪ್ತಿ, ಸಮಾಧಾನ ಮತ್ತು ನೆಮ್ಮದಿಯನ್ನು ನಮಗೆ ದಂಡಿಯಾಗಿ ನೀಡಿದೆ ಎನ್ನುತ್ತಾರೆ ಶ್ಯಾಂ ಭಟ್‌.

Advertisement

ಹಾಳೆ ತಟ್ಟೆ, ಮಿನರಲ್‌ ವಾಟರ್‌
ತಿಂಡಿ ತಿನ್ನಲು ಬಳಸುವ ತಟ್ಟೆ ಹಾಗೂ ಕುಡಿಯುವ ನೀರು ಶುಚಿಯಾಗಿರಬೇಕು. ಆಗ ಮಾತ್ರ ಸಮಾಧಾನದಿಂದ ತಿನ್ನಲು ಮನಸ್ಸು ಬರುತ್ತದೆ. ಇದನ್ನು ಗಮನಿಸಿಯೇ ಇಲ್ಲಿ ಊಟಕ್ಕೆ ಹಾಳೆಯ ತಟ್ಟೆ ಹಾಗೂ ಕುಡಿಯಲು ಮಿನರಲ್‌ ವಾಟರ್‌ ನೀಡಲಾಗುತ್ತಿದೆ. 

ಏಳರಿಂದ ಒಂಬತ್ತು
ವಾರದ ಏಳು ದಿನವೂ ಈ ಹೋಟೆಲ್‌ ತೆರೆದಿರುತ್ತದೆ. ಬೆಳಗ್ಗೆ 7ರಿಂದ ಆರಂಭವಾಗುವ ಆಹಾರ ಸೇವೆಯ ಕಾಯಕ ರಾತ್ರಿ 9 ಗಂಟೆಗೆ ಮುಗಿಯುತ್ತದೆ. ಪ್ರತಿ ದಿನವೂ 700 ರಿಂದ 800 ತಟ್ಟೆ ಇಡ್ಲಿಗಳು ಮಾರಾಟವಾಗುತ್ತವೆ. 

ಮೊದಲೇ ಆರ್ಡರ್‌ ಮಾಡ್ತಾರೆ
ಈ ಕೆಫೆಯ ವಿಶೇಷತೆ ಎಂದರೆ ಗ್ರಾಹಕರು ತಮಗೆ ಬೇಕಾದ ತಿನಿಸನ್ನು ಮೊದಲೇ ಆರ್ಡರ್‌ ಮಾಡುತ್ತಾರೆ. ಆಟೋ, ಕ್ಯಾಬ್‌ಗಳ ಚಾಲಕರು ಹಾಗೂ ಇಲ್ಲಿನ ರುಚಿಗೆ ಮಾರು ಹೋದವರು, “ಇನ್ನು ಅರ್ಧ ಗಂಟೇಲಿ ಬಂದುಬಿಡ್ತೇವೆ ಸರ್‌. ಅಲ್ಲಿಯ ತನಕ ಹೋಟೆಲ್‌ ಕ್ಲೋಸ್‌ ಮಾಡಬೇಡಿ. ನಾವ್‌ ಬಂದು ಪಾರ್ಸೆಲ್‌ ತಗೊಂಡು ಹೋಗ್ತಿàವಿ’ ಎಂದು ವಿನಂತಿಸುತ್ತಾರೆ.

“ಗ್ರಾಹಕರ ತೃಪ್ತಿಯೇ ನಮಗೆ ಮುಖ್ಯ. ನಗುಮುಖದಿಂದ ಮಾತನಾಡಿಸಿದರೆ ಗ್ರಾಹಕರು ನಾಳೆಯೂ ನಮ್ಮ ಹೋಟೆಲ್‌ಗೆ ಬರುತ್ತಾರೆ.ದಿನವೂ ನೂರಾರು ಮಂದಿ ಗ್ರಾಹಕರ ಜಿಹ್ವಾ ಚಾಪಲ್ಯ ತಣಿಸುವುದರೊಂದಿಗೆ, ಏಳು ಮಂದಿಗೆ ನೌಕರಿ ನೀಡಿರುವ ಖುಷಿ ನನ್ನ ಪಾಲಿಗಿದೆ’
– ಶ್ಯಾಂ ಭಟ್‌

“ಎರಡು ವರ್ಷಗಳಿಂದ ಊಟಕ್ಕೆ ಬರುತ್ತಿದ್ದೇನೆ. ಮನೆಯಲ್ಲಿ ಊಟ ಮಾಡಿದ ಅನುಭವವಾಗುತ್ತದೆ. ಇಲ್ಲಿನ ರುಚಿ ಮತ್ತು ಶುಚಿಯ ವಾತಾವರಣವೇ ನಮ್ಮನ್ನು ಇಲ್ಲಿಗೆ ಬರಮಾಡಿಕೊಳ್ಳುತ್ತದೆ’.
 ಶರತ್‌, ಗ್ರಾಹಕ

 ಗಿರೀಶ ಜಿ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next