Advertisement

ಪರದಾಡಿದ ಗ್ರಾಹಕರು; ನೆರವಾದ ನರ್ಸಿಂಗ್‌ ಹೋಂ, ಜನೌಷಧಿ ಕೇಂದ್ರಗಳು

06:00 AM Sep 29, 2018 | |

ಉಡುಪಿ: ಔಷಧವನ್ನು ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ವಿತರಿಸಲು ಅವಕಾಶ ನೀಡುವ “ಇ-ಫಾರ್ಮಸಿ’ ವಿತರಣಾ ವ್ಯವಸ್ಥೆ ಮಾಡಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಆಲ್‌ ಇಂಡಿಯಾ ಆರ್ಗನೈಸೇಷನ್‌ ಆಫ್ ಕೆಮಿಸ್ಟ್ಸ್ ಆ್ಯಂಡ್‌ ಡ್ರಗ್ಗಿಸ್ಟ್ಸ್ ನೀಡಿದ ಕರೆಯಂತೆ ಉಡುಪಿ ಜಿಲ್ಲೆಯಲ್ಲಿಯೂ ಶುಕ್ರವಾರ ಔಷಧ ಅಂಗಡಿಗಳನ್ನು ಮುಚ್ಚಲಾಗಿತ್ತು. ಪರಿಣಾಮವಾಗಿ ಸಾರ್ವಜನಿಕರು ಔಷಧಕ್ಕಾಗಿ ಪರದಾಡುವಂತಾಯಿತು.

Advertisement

ಸಹಾಯಕ್ಕೆ ಬಂದ ಜನೌಷಧಿ ಕೇಂದ್ರ
ಖಾಸಗಿ ನರ್ಸಿಂಗ್‌ ಹೋಂಗಳು, ಜಿಲ್ಲಾಸ್ಪತ್ರೆಗಳಲ್ಲಿ ಔಷಧಗಳು ಲಭ್ಯವಿದ್ದವು. ಕೆಲವು ಮಂದಿ ನರ್ಸಿಂಗ್‌ ಹೋಂಗಳ ಮೆಡಿಕಲ್‌ಗ‌ಳಲ್ಲಿ ಔಷಧ ಖರೀದಿಸಿದರು. ಪ್ರಧಾನಮಂತ್ರಿ ಜನೌಷಧಿ ಕೇಂದ್ರ, ಜನಸಂಜೀವಿನಿ ಕೇಂದ್ರಗಳು ತೆರೆದಿದ್ದವು. “ಎಲ್ಲಾ ಮೆಡಿಕಲ್‌ಗ‌ಳು ಕೂಡ ಬಂದ್‌ ಇವೆ ಎಂದು ಔಷಧ ತೆಗೆದುಕೊಳ್ಳುವವರು ಬಂದಿಲ್ಲ. ಕೆಲವರು ಹುಡುಕಿಕೊಂಡು ಬಂದಿದ್ದಾರೆ’ ಎಂದು ಬಡಗುಪೇಟೆಯಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಸಿಬಂದಿ ತಿಳಿಸಿದರು. ಇತರ ಕೆಲವು ಜನೌಷಧಿ ಕೇಂದ್ರಗಳಲ್ಲಿ ಇತರ ದಿನಗಳಿಗಿಂತ ತುಸು ಹೆಚ್ಚಿನ ಗ್ರಾಹಕರಿದ್ದರು.

“ಅಜ್ಜರಕಾಡು ಜನಸಂಜೀವಿನಿ ಔಷಧ ಕೇಂದ್ರದಲ್ಲಿ ಇಂದು ಬೇರೆ ದಿನಕ್ಕಿಂತ ಶೇ.30ರಷ್ಟು ಗ್ರಾಹಕರು ಹೆಚ್ಚು ಆಗಮಿಸಿದ್ದರು’ ಎಂದು ಅಲ್ಲಿನ ಸಿಬಂದಿ ಹೇಳಿದರು. 

ಅಪರ ಜಿಲ್ಲಾಧಿಕಾರಿಗೆ ಮನವಿ
ಪ್ರಸ್ತಾವಿತ ಮಸೂದೆಯನ್ನು ಕೈಬಿಡುವಂತೆ ಬೆಳಗ್ಗೆ ಉಡುಪಿ ಜಿಲ್ಲಾ ಕೆಮಿಸ್ಟ್ಸ್ ಆ್ಯಂಡ್‌ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್‌(ಉಡುಪಿ ಇಜಲಾಲ ಔಷಧ ವ್ಯಾಪಾರಸ್ಥರ ಸಂಘ) ವತಿಯಿಂದ ಅಪರ ಜಿಲ್ಲಾಧಿಕಾರಿ ವಿದ್ಯಾ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ, ಕಾರ್ಯದರ್ಶಿ ವಿ.ಜಿ.ಶೆಟ್ಟಿ, ಖಜಾಂಚಿ ಅರುಣ್‌ ರಿಚರ್ಡ್‌ ಡೇಸಾ ಮೊದಲಾದವರು ಉಪಸ್ಥಿತರಿದ್ದರು. 

ಶೇ.100ರಷ್ಟು ಯಶಸ್ವಿ
ಜಿಲ್ಲೆಯ 400ಕ್ಕೂ ಅಧಿಕ ಮೆಡಿಕಲ್‌ ಶಾಪ್‌ಗ್ಳು ಸ್ವಯಂಪ್ರೇರಿತವಾಗಿ ವ್ಯಾಪಾರ ಸ್ಥಗಿತಗೊಳಿಸಿವೆ. ಬಂದ್‌ ಶೇ.100ರಷ್ಟು ಯಶಸ್ವಿಯಾಗಿದೆ. ನರ್ಸಿಂಗ್‌ ಹೋಂ ಗಳಲ್ಲಿ ಔಷಧ ಮಾರಾಟಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು. ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದರಿಂದಾಗಿ ದೇಶದಾದ್ಯಂತ 8.5 ಲಕ್ಷಕ್ಕೂ ಅಧಿಕ ಔಷಧ ಅಂಗಡಿಗಳ ಮಾಲಕರು, ಲಕ್ಷಾಂತರ ಉದ್ಯೋಗಿಗಳು, ಕುಟುಂಬಗಳು ಬೀದಿ ಪಾಲಾಗಲಿದ್ದಾರೆ. ಆನ್‌ಲೈನ್‌ನಲ್ಲಿ ನೇರ ವಾಗಿ ಔಷಧ ಮಾರಾಟ ಮಾಡುವುದರಿಂದ ಯುವಜನತೆಗೆ ಸುಲಭವಾಗಿ ಡ್ರಗ್‌ (ಮಾದಕ ವಸ್ತು) ಸಿಗುವ ಅಪಾಯವಿದೆ. ಗ್ರಾಮೀಣ ಭಾಗದ ಜನತೆಗೂ ತೊಂದರೆ ಯಾಗಲಿದೆ. ಇತರ ಹಲವಾರು ಸಮಸ್ಯೆಗಳು ಎದುರಾಗಲಿವೆ. ಹಾಗಾಗಿ ಸಾರ್ವಜನಿಕರು ಮತ್ತು ಔಷಧ ವ್ಯಾಪಾರಿಗಳ ಹಿತದೃಷ್ಟಿ ಯಿಂದ ಸರಕಾರ ಎಚ್ಚೆತ್ತುಕೊಂಡು ತನ್ನ ನಿರ್ಧಾರ ಬದಲಾಯಿಸಬೇಕಾಗಿದೆ. ಸರಕಾರಕ್ಕೆ ವಿರೋಧ ವ್ಯಕ್ತಪಡಿಸುವ ಉದ್ದೇಶದಿಂದ ಮೆಡಿಕಲ್‌ ಶಾಪ್‌ ಸ್ಥಗಿತ ಮಾಡುವುದು ಅನಿವಾರ್ಯವಾಯಿತು’ ಎಂದು ಈ ಸಂದರ್ಭದಲ್ಲಿ ವಿ.ಜಿ.ಶೆಟ್ಟಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next