Advertisement

ಮಗುಮುಖಕ್ಕೆ ಒಲವು

07:01 PM Apr 20, 2019 | mahesh |

ಮೊದಲು “ಸೀಗೆಪುಡಿ’, ನಂತರ “ಇದು ಇರುವಲ್ಲಿ ಆರೋಗ್ಯ ಇದೆ’ ಎಂದು ಪ್ರಚಾರದಲ್ಲಿದ್ದ ಕರಿಶಿಲೆಯಂತಹ “ಲೈಫ್ಬಾಯ್‌’ ಸಾಬೂನನ್ನು ದಿನವೂ ಬಿಡದೇ, ದೇಹದ ಎಲ್ಲ ಎಲುಬಿಗೂ ಬಡಿಸಿಕೊಂಡಂತಹ ನಮಗೆ “ಮಗುವಿನ ಮುಖ ಲಕ್ಷಣಗಳನ್ನು ಅಭ್ಯಾಸ ಮಾಡಿ, ಅವು ನೀವು ವಿನ್ಯಾಸ ಮಾಡುವ ಬೇಬಿ ಪ್ರಾಡಕ್ಟಿನಲ್ಲಿ ಅಡಕವಾಗಿರಬೇಕು’ ಎಂದು ಪ್ರೊಫೆಸರ್‌ ಹೇಳಿದಾಗ ಏನೂ ಅರ್ಥವಾಗಿರಲಿಲ್ಲ. ಸ್ವಚ್ಛಂದವಾಗಿ ಮಗುವನ್ನು ನೋಡಿದ ನಮ್ಮ ಕಣ್ಣುಗಳಿಗೆ ಈಗ ಕೊಟ್ಟಿರುವ ಟಾಸ್ಕ್ ಸ್ವಲ್ಪ ಬೇರೆಯೇ ಆಗಿತ್ತು. ಮಗುವಿನ ಮುದ್ದು ಮುಖ, ಕಣ್ಣುಗಳನ್ನು ನೋಡುವುದು, ಎತ್ತಿಕೊಳ್ಳುವುದು, ನಾವು ಅಡಗಿದಂತೇ ಮಾಡಿ ಕ್ಷಣಾರ್ಧದಲ್ಲಿ ನಮ್ಮ ಮುಖ ತೋರಿಸಿ ಮಗುವನ್ನು ನಗಿಸುವುದು, ಅದರ ತಲೆಯನ್ನು ಮೂಸುವುದು ಮತ್ತು ಆ ಪ್ರಕ್ರಿಯೆಯಲ್ಲೇ ನಮ್ಮ ಕಣ್ಣುಗಳನ್ನು ಮುಚ್ಚಿ ಆ ಪರಿಮಳವನ್ನು ಮೂಗಿನಿಂದ ಮಿದುಳಿಗೆ ಸೇರಿಸುತ್ತ ಕಳೆದು ಹೋಗುವುದು. ಯಾರಿಗೆ ಬೇಡ ಹೀಗೆ ಕಳೆದುಹೋಗುವುದು? ಕಳೆದು ಹೋಗುವಾಗ ಸರಿಯಾಗೇ ಕಳೆದುಹೋಗಬೇಕು ಎನ್ನುವ ವಾದವು ಸರಿಯೇ. ಆದರೆ, ಹೀಗೆಲ್ಲ ಮಾಡುತ್ತ ನಾವು ಕಳೆದುಹೋದರೆ ನಾವು ವಿನ್ಯಾಸ ಮಾಡುತ್ತಿರುವ ಪ್ರಾಡಕ್ಟಿಗೆ ಕಷ್ಟ! ಅದು ನಮ್ಮ ಜಾಗೃತ ಸ್ಥಿತಿಯನ್ನು ಬಯಸುತ್ತದೆ. ಹೀಗೆ ಮನಸ್ಸು, ಬುದ್ಧಿ ಜಾಗೃತವಾದಾಗಲೇ ಮಗುವಿನ ಕಣ್ಣು ದೊಡ್ಡದು, ತಲೆದೊಡ್ಡದು, ಮೂಗು ಚಿಕ್ಕದು, ಎತ್ತರದ ಹಣೆ, ಗುಂಡುಮುಖ, ಗುಂಡು ಗುಂಡು (ಚೂಪಲ್ಲದ, ದೊಡ್ಡ ವೃತ್ತದ ರೌಂಡೆಡ್‌ ಫೀಚರ್ಸ್‌) ಕೈ ಕಾಲುಗಳಿವೆಯಲ್ಲ ಎಂದೆಲ್ಲ ಗಮನಕ್ಕೆ ಬಂದಿದ್ದು.

Advertisement

ಈ ಮಗುವಿನ ಮುಖಲಕ್ಷಣದ ಸಾಂಕೇತಿಕ ರೂಪವನ್ನು ಆ ಮೆಡಿಕಲ್‌ ಶಾಪಿನ ಗ್ಲಾಸಿನಲ್ಲಿರುವ ಜಾನ್ಸನ್‌ ಬೇಬಿ ಸೋಪ್‌, ನಿಪ್ಪಲ್‌, ಹಾಲು ಬಾಟಲಿಗಳ ಆಕಾರದಲ್ಲಿ ಸೇರಿಸಿದುದರಿಂದಲೇ ಅಲ್ಲವೇ ಮಾರಾಟ ಮಾಡುವ ಗ್ರಾಹಕರ ಸೆರೆಹಿಡಿದದ್ದು. ಹಾಗಾದರೆ, ಇಲ್ಲಿ ನಡೆದದ್ದಾರೂ ಏನು? ಎಂದು ಗಮನಿಸಬೇಕು. ಮಗುವಿನ ಮುಖಲಕ್ಷಣಗಳು ಆ ಪ್ರಾಡಕ್ಟಿನಲ್ಲಿ ಕಂಡಾಗ ಅದೂ ಮಗುವಂತೇ ಕಂಡಿದ್ದು, ಅನಿಸಿದ್ದು. ಅಂದರೆ ಮುಖಲಕ್ಷಣಗಳ ಮೂಲಕ ನಾವು ಗುಣಲಕ್ಷಣಗಳನ್ನು ಗ್ರಹಿಸುತ್ತೇವೆ ಎಂದಾಯಿತಲ್ಲ. ಅದು ವಾಸ್ತವದಲ್ಲಿ ಇರಲಿ ಇರದೇ ಇರಲಿ, ಮುಖಲಕ್ಷಣಗಳನ್ನು ಕಂಡಾಗ ನಾವು ಆತ ಹೀಗಿರಬಹುದು, ಆತನ ಧ್ವನಿ ಹೀಗಿರಬಹುದು, ಆತ ಒಳ್ಳೆಯವ, ಕೆಟ್ಟವ, ಆತ ಈ ರೀತಿ ಕೆಲಸ ಮಾಡಬಹುದೆಂದೆಲ್ಲ ಕೇವಲ ಊಹಿಸುವುದಷ್ಟೇ ಅಲ್ಲ, ಗ್ರಹಿಸುತ್ತೇವೆ ಕೂಡ. ಈ ಮಗುವಿನ ಮುಖಲಕ್ಷಣ ಮತ್ತು ಅದರ ಒಟ್ಟೂ ಗ್ರಹಿಕೆಯನ್ನು ವಿನ್ಯಾಸದ ಸಾರ್ವತ್ರಿಕತತ್ವದಡಿಯಲ್ಲಿ ಮಗುವಿನ ಮುಖಲಕ್ಷಣದ ಒಲವು ಅಥವಾ “ಬೇಬಿ ಫೇಸ್‌ ಬಯಾಸ್‌’ ಎಂದು ಕರೆಯುತ್ತಾರೆ. (ಹೆಚ್ಚಾಗಿ “ಒಲವು’ ಶಬ್ದವನ್ನು ಧನಾತ್ಮಕವಾಗೇ ಬಳಸುವುದುಂಟು. “ಬಯಾಸ್‌’ಗೆ ಪೂರಕವಾಗಿ “ಪಕ್ಷಪಾತ’ ಶಬ್ದವು ಹೆಚ್ಚು ಸಮಂಜಸ. ಆದರೆ, ಮಗುವೆನ್ನುವ ಉಲ್ಲೇಖ ಬಂದಾಗ ಒಲವು ಶಬ್ದ ಹೆಚ್ಚು ಹೊಂದಿಕೊಳ್ಳುತ್ತದೆ!)

ವ್ಯಕ್ತಿ ಅಥವಾ ಪ್ರಾಡಕ್ಟಿಗೆ ಮಗುವಿನ ಮುಖ ಲಕ್ಷಣವಿದ್ದರೆ (ದೊಡ್ಡತಲೆ, ಎತ್ತರ ಹಣೆ, ಚಿಕ್ಕಗದ್ದ, ಚಿಕ್ಕ ಮೂಗು, ಹೊರಚಾಚಿದ ಕಿವಿ ಇತ್ಯಾದಿ.) ಅವುಗಳನ್ನು ಮಗುವಿನಂತೇ ಗ್ರಹಿಸಿ, ಮಗುವಿಗಿರುವ ಗುಣಲಕ್ಷಣಗಳಾದ ಮುಗ್ಧತೆ, ನಿಷ್ಕಪಟತೆ, ಅವುಗಳಲ್ಲಿ ಇರುತ್ತದೆ ಎನ್ನುವ ಒಲವು (ಪಕ್ಷಪಾತ) ಎಲ್ಲ ವಯೋಮಿತಿಯಲ್ಲೂ, ಸಂಸ್ಕೃತಿಯಲ್ಲೂ ಕಂಡುಬರುತ್ತದೆ. ಜನರಲ್ಲಿ ಈ ಒಲವು ಎಷ್ಟರ ಮಟ್ಟಿಗೆ ಪ್ರಭಾವಿಸಿದೆ ಎಂದರೆ ಮಗುವಿನ ಮುಖಲಕ್ಷಣಗಳು ಹೆಚ್ಚು ಬಲವಾಗಿರುವ ಮಕ್ಕಳನ್ನೂ ಪ್ರೀತಿಸುವುದು ಹೆಚ್ಚು. ಅದೇ ತಲೆ ಗುಂಡಗಿರದ, ಕಾಂತಿಯಿರದ ಸಣ್ಣ ಕಣ್ಣಿರುವ ಮಗುವಿನ ಕಡೆ ನಮ್ಮ ಗಮನವೂ ಕಡಿಮೆ. ಮಾನಸಿಕವಾಗಿ ಬೆಳವಣಿಗೆಯಾಗದ ಮಗುವಿಗೆ ನಮ್ಮಿಂದ ಹೆಚ್ಚಿನ ಪ್ರೀತಿ, ಆರೈಕೆ ದೊರೆಯಬೇಕಿತ್ತು. ಆದರೆ, ವಿಷಾದದ ಸಂಗತಿಯೆಂದರೆ ಅವರನ್ನು ದುರುಪಯೋಗ ಮಾಡಿಕೊಳ್ಳುವುದು ಉಳಿದ ಮಕ್ಕಳಿಗಿಂತ ಸುಮಾರು ಶೇ. ಮುನ್ನೂರರಷ್ಟು ಎಂದು ತಿಳಿದಾಗ ನಮ್ಮ ಈ ಒಲವು ಎಷ್ಟು ಅಪಾಯಕಾರಿ ಎಂದು ಅರ್ಥವಾಗುತ್ತದೆ.

ಒಂದು ವಿಷಯವೆಂದು ಬಂದರೆ ಅದಕ್ಕೆ ಒಲವು ಅಥವಾ ಪಕ್ಷಪಾತವು ಸಹಜವೇ! ಈ ಮೊದಲು ಮಗುವಿನ ಮುಖಲಕ್ಷಣಗಳು ಹೆಚ್ಚು ಬಲವಾಗಿರುವ ಮಕ್ಕಳನ್ನು ಪ್ರೀತಿಸುವುದೂ ಹೆಚ್ಚು ಎಂದು ಉಲ್ಲೇಖೀಸಿದೆ. ಈ ಪಕ್ಷಪಾತ ದೊಡ್ಡವರ ವಿಷಯದಲ್ಲೂ ಇದೆ. ಹೆಚ್ಚು ಆಕರ್ಷಣೆಯಿರುವ (ಆಕಾರ/ರೂಪದ ಪರಿಭಾಷೆಯಲ್ಲಿ) ವ್ಯಕ್ತಿಗಳನ್ನು ನಾವು ಬಹಳ ಬುದ್ಧಿವಂತರೆಂದು ಅಂದುಕೊಳ್ಳುತ್ತೇವೆ. ವಾಸ್ತವಿಕವಾಗಿ ಅವರು ಹಾಗೆ ಇರಲಿ ಇರದೇ ಇರಲಿ ಕಂಪೆನಿಯಲ್ಲಿ ಸೇರಿಸಿಕೊಳ್ಳುವುದರಿಂದ ಹಿಡಿದು ಭಡ್ತಿ ಇತ್ಯಾದಿಗಳು, ಅಥವಾ ಕಡಿಮೆ ಕೆಲಸ ಮಾಡಿ ಹೆಚ್ಚು ಹಣ ತೆಗೆದುಕೊಳ್ಳುವವರೆಗಿನ ಪಕ್ಷಪಾತವನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ. ಈ ವಿದ್ಯಮಾನವನ್ನು ನಾವು ಊರಲ್ಲಿ ಅವರ ಇವರ ಬಾಯಿಯಲ್ಲಿ “ಗಾಂವಿr’ಯಾಗಿ ಕೇಳಿರುತ್ತೇವೆ. “ಅವನಿಗೆ ಅಥವಾ ಅವಳಿಗೆ ಚಂದದ ಮಳ್ಳು !’ ಎಂದು. ಇಲ್ಲಿನ ಮಳ್ಳು ಎನ್ನುವ ಪ್ರಯೋಗ ಅತಿ ಒಲವು ಅಥವಾ ಪಕ್ಷಪಾತಕ್ಕೆ ಸಂಬಂಧಿಸಿದ್ದೇ. ಇದನ್ನು ನಾವು “ಆಕರ್ಷಣೆಯ ಪಕ್ಷಪಾತ’ವೆಂದು ಕರೆಯುತ್ತೇವೆ. ವಿನ್ಯಾಸದ ಮೊದಲ ಉದ್ದೇಶವೇ ನೋಡುಗನ/ಗ್ರಾಹಕನ ಗ್ರಹಿಕೆಯ ಮೇಲೆ ಪ್ರಭಾವ ಬೀರುವುದಾದ್ದರಿಂದ ಇದರ ಬಳಕೆ ವಸ್ತು ವಿನ್ಯಾಸದಲ್ಲೂ ಹೆಚ್ಚು. ಆದರೆ, ಮಗುಮುಖದ ಒಲವಿನ (ಪಕ್ಷಪಾತ) ವಿಚಾರಕ್ಕೂ ಆಕರ್ಷಣೆಯ ಪಕ್ಷಪಾತಕ್ಕೂ ನೇರವಾಗಿ ಹೋಲಿಸುವಂತಿಲ್ಲ. ಈ ವಿಚಾರದ ಬಗ್ಗೆ ಮುಂದೆ ಯಾವಾಗಲಾದರೂ ಚರ್ಚೆ ಮಾಡೋಣ. ಪುನಃ ನಾವು ಮೊದಲು ಎತ್ತಿಕೊಂಡ ಮಗು ಮುಖದ ಒಲವಿನ ವಿಚಾರವನ್ನು ಮುಂದುವರಿಸೋಣ.

ಹಾಗೆಯೇ ಮಕ್ಕಳ ಮುಖದಂತಿರುವ ದೊಡ್ಡವರನ್ನೂ ನಾವು ಮುಗ್ಧ, ನಿಷ್ಕಪಟಿ, ಪ್ರಾಮಾಣಿಕ ಎಂದೇ ಗ್ರಹಿಸುತ್ತೇವೆ. ಬೇರೆ ಯಾವ ಮಾಹಿತಿ ಇಲ್ಲದೇ ಈ ಗ್ರಹಿಕೆಯೊಂದನ್ನೇ ಇಟ್ಟುಕೊಂಡು ವಿಚಾರವನ್ನು ಒಪ್ಪುವುದು ಸರಿ ಅಲ್ಲವಾದರೂ ಕಾಲ ಮತ್ತು ಸಂಖ್ಯೆಯ ಮಾಹಿತಿಯ ಬಲವಾದ ಹಿನ್ನೆಲೆಯಲ್ಲೇ ಈ ಗ್ರಹಿಕೆ ಬೆಳೆದಿದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಹಾಗಾಗಿಯೇ ಈ ಗ್ರಹಿಕೆಯನ್ನು ವ್ಯಾಪಾರ-ವಾಣಿಜ್ಯ ಕ್ಷೇತ್ರ ನಗದಾಗಿಸುವುದು. ವಾಟರ್‌ ಪ್ಯೂರಿಫ‚ಾಯರ್‌ ತರಹದ ಹೊಸ ತಂತ್ರಜ್ಞಾನದ ಪ್ರಾಡಕ್ಟ್ ಗಳು, ಕೋಲ್ಗೇಟ್‌ ಸೆನ್ಸಿಟಿವ್‌ನ ಜಾಹೀರಾತಿನಲ್ಲಿ ಬರುವ ರೂಪದರ್ಶಿಗಳು ಸಾಮಾನ್ಯವಾಗಿ ಮಗುಮುಖದವರಾಗಿರುವುದಿಲ್ಲ. ತುಂಬಾ ಜವಾಬ್ದಾರಿ ಜಾಗದಲ್ಲೂ ಮಗು ಮುಖದವರನ್ನು ಕೂರಿಸಲು ಸಂಸ್ಥೆ ಹಿಂದೇಟು ಹಾಕುತ್ತದೆ. ಚಲನಚಿತ್ರದಲ್ಲಿ ಖಳನಾಯಕನೋ ಅಥವಾ ಅವನಂತೇ ಇರುವ ಅವನ ಮಗನ ಸುತ್ತ ಈ ಮುಖಗಳನ್ನು ಬಳಸುವುದಿಲ್ಲ. ಕಾರಣ, ಅಲ್ಲಿ ದುರುಳ, ಪಾತಕಿ ಲಫ‌ಂಗತನವನ್ನು ವಿಜೃಂಭಿಸಬೇಕಾಗುತ್ತದೆ. ಆದರೆ, ಹೀರೋನ ಸುತ್ತ ಇರುವ ಸಹನಟರಲ್ಲಿ ಈ ತರದ ಮುಖದ ಒಂದಿಬ್ಬರಿರುವುದನ್ನು ಗಮನಿಸಿರುತ್ತೀರಿ. ಕಾರಣ, ಅಲ್ಲಿ ಹೀರೋನನ್ನು ಬುದ್ಧಿವಂತನೆಂದು “ಕಾಂಟ್ರಸ್ಟ್‌’ ಮಾಡಿ ತೋರಿಸಬೇಕಾಗಿದೆ. ಅಪರಾಧದ ವಿಚಾರಣೆಯ ಸಂದರ್ಭದಲ್ಲಿ ಜನರು ಮಗುಮುಖದ ದೊಡ್ಡವನ ಮಾತನ್ನು ನಂಬುತ್ತಾರೆ. ಹಾಗೆಯೇ ಹೆಚ್ಚಾಗಿ ನಿರ್ಲಕ್ಷ್ಯದಿಂದಾದ ಅಪರಾಧದ ಕಾರಣೀ ಪುರುಷರೂ ಮಗುಮುಖದವರಾಗಿರುತ್ತಾರೆ. ಆದರೆ, ಮಗುಮುಖದವರ ಅಪರಾಧ ಒಮ್ಮೆ ಸಾಬೀತಾದರೆ (ನಿರ್ಲಕ್ಷ್ಯ ಹೊರತುಪಡಿಸಿ) ಅವರಿಗೆ ದೊರಕುವ ಶಿಕ್ಷೆ ಪ್ರಬುದ್ಧ ಮುಖಕ್ಕೆ ದೊರಕುವುದಕ್ಕಿಂತಲೂ ಹೆಚ್ಚಿನದಿರುತ್ತದೆ.

Advertisement

ಈ ಮೊದಲು ಮುಗ್ಧ ಎನ್ನುವ ಮಾತು ಪ್ರಸ್ತಾಪವಾಯಿತು.ಮುಖಲಕ್ಷಣಗಳನ್ನು ಹೊರತುಪಡಿಸಿ ಗುಣಲಕ್ಷಣದ ಬಗ್ಗೆ ವಿಚಾರ ಮಾಡಿದಾಗಲೂ ಯಾವುದು ಮುಗ್ಧತೆ, ಯಾವುದು ಹೆಡ್ಡತನ, ಯಾವುದು ವಂಚನೆ, ಯಾವುದು ಮೂರ್ಖತನವೆಂದು ಗುರುತಿಸುವುದು ಕಷ್ಟವೇ. ಇಲ್ಲೂ ಒಲವು (ಪಕ್ಷಪಾತ) ಮೇಲ್ಗೆ„ ಸಾಧಿಸುತ್ತದೆ. ವ್ಯಕ್ತಿ ಶತಹೆಡ್ಡನಾದರೂ ನಮಗೆ ಪ್ರಿಯನಾಗಿದ್ದರೆ ಅವನನ್ನು ಹೆಡ್ಡ ಎಂದು ಕರೆಯಲು ಮನಸ್ಸು ಒಪ್ಪದೇ ನಾವು “ಮುಗ್ಧ’ ಎಂದು ಕರೆದುಬಿಡುತ್ತೇವೆ. ಅದನ್ನು ಕೇಳಿದ ನಮ್ಮ ಮುಂದಿರುವ ಜನ ನಾಟಕ ಪುಸ್ತಕದಲ್ಲಿ ಬರುವಂತೇ “ಸ್ವಗತದಲ್ಲಿ ನಗುವರು!’

ನನಗೆ ಬೇಬಿ ಫೇಸ್‌ ಬಯಾಸ್‌ ಬಗ್ಗೆ ವಿಚಾರ ಮಾಡಿದಾಗಲೆಲ್ಲ ನನ್ನ ನೆಚ್ಚಿನ ಕನ್ನಡದ ಹಿರಿಯ ಕತೆಗಾರ್ತಿ ವೈದೇಹಿಯವರು ಹೇಳಿದ ಒಂದು ಕತೆ ನೆನಪಾಗುವುದು. ಆ ಕತೆಯಲ್ಲಿ- ಊರಲ್ಲಿ ಒಂದು ಗಂಡ-ಹೆಂಡತಿ ಇರುತ್ತಾರೆ. ಗಂಡ ಯಾವತ್ತೂ ಸಿಡುಕು. ಕಂಡಕಂಡಲ್ಲಿ ಹೆಂಡತಿಗೆ ಬೈಯುತ್ತಾನೆ. ಅವನಿಗೆ ಅವಳು ಅಲ್ಲಿ ಕುಂತದ್ದು ಸರಿಯಿಲ್ಲ. ಇಲ್ಲಿ ನಿಂತದ್ದು ಸರಿಯಿಲ್ಲ. ಕಾರಣವೇ ಬೇಡ ಆತನಿಗೆ ಹೆಂಡತಿಯನ್ನು ಬೈಯಲು. ಆದರೆ, ಅವಳು ಒಂದು ಮಾತೂ ತಿರುಗಿ ಹೇಳುವವಳಲ್ಲ. ಹೀಗೆ ಒಂದು ದಿನ ಊರಲ್ಲಿ ಮದುವೆ ಇರುತ್ತದೆ. ಗಂಡಹೆಂಡತಿ ಇಬ್ಬರೂ ಹೋಗಿರುತ್ತಾರೆ. ನೂರಾರು ಜನ ತುಂಬಿದ ಮನೆಯಲ್ಲೂ ಗಂಡ ತನ್ನ ಚಾಳಿ ಬಿಡುವುದಿಲ್ಲ. ಅಲ್ಲೂ ಸಿಕ್ಕ ಸಿಕ್ಕಲ್ಲಿ ಹೆಂಡತಿಗೆ “ಕಿಸಿಲ್‌’ ಎನ್ನುತ್ತಾನೆ. ಮದುವೆಗೆ ಬಂದ ಜನರಿಗೂ ಅದನ್ನು ನೋಡಿ ಅವಳ ಗಂಡನ ಮೇಲೆ ಸಿಟ್ಟು ಬರುತ್ತದೆ. ಹೆಂಡತಿ ಒಬ್ಬಳೇ ಒಳಗೆ ಮದುವೆ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಕೆಲವು ದೊಡ್ಡ ಹೆಣ್ಣು ಮಕ್ಕಳು, “ನಿನ್ನ ಗಂಡ ಇಷ್ಟು ಸಲ ಬೈದ, ನೀ ಯಾಕೆ ಸುಮ್ನಿಪ್ದು, ನೀನೂ ಒಂದು ಸರಿ ಬೈ ಕಾಂಬ ಅವನಿಗೆ’ ಎನ್ನುತ್ತಾರೆ. ಅದಕ್ಕೆ ಗಂಡನಿಂದ ಬೈಸಿಕೊಳ್ಳುತ್ತಿರುವ ಅವನ ಹೆಂಡತಿ, “ಬೈಲಿ ಬಿಡೆ, ನಾ ಎಲ್ಲಾದ್ರೂ ಬೈದ್ರೆ ಅವ ಮುಖ ಸಣ್ಣ ಮಾಡ್ಕಂತ, ನನಗೆ ನೋಡೂಕಾತಿಲೆ’ ಎನ್ನುತ್ತಾಳೆ. ಇಲ್ಲಿ ಎಲ್ಲವನ್ನೂ ತಿಳಿದು ಎಲ್ಲವನ್ನೂ ಕ್ಷಮಿಸುವ ಆ ದೊಡ್ಡಗುಣ/ಕರುಣೆ ಅವಳಲ್ಲಿರಬಹುದು. ಆದರೆ, ಇದು ಅಷ್ಟಕ್ಕೆ ನಿಲ್ಲುವುದೇ? ಇದಕ್ಕೆ ಇನ್ನೂ ಬೇರೆ ಮೂಲ ಕಾರಣಗಳೇ ಇಲ್ಲವೇ? ಹಾಗಾದರೆ ಇಲ್ಲಿ ಯಾರ್ಯಾರ ಮುಖ ಹೇಗಿರಲಿಕ್ಕೆ ಸಾಕು? ಇಲ್ಲಿ ಯಾರು ಮುಗ್ಧರು? ಯಾರು ಹೆಡ್ಡರು? ಯಾರು ಅಸಹಾಯಕರು? ಯಾರು ನಿಷ್ಕಪಟಿಗಳು? ಇದನ್ನೆಲ್ಲ ಕಂಡುಹಿಡಿದು ಈ ನನ್ನ ಪ್ರೀತಿಯ ಕತೆಯನ್ನು ವಾಚ್ಯ ಮಾಡಲು ಮನಸಿಲ್ಲ.

ಸಚ್ಚಿದಾನಂದ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next