ಲಕ್ನೋ: ಖಾಸಗಿ ಕಾಲೇಜಿನ 20 ವರ್ಷದ ವಿದ್ಯಾರ್ಥಿಯನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ಎಸ್‌ಯುವಿಯಲ್ಲಿ ಸೆರೆ ಹಿಡಿದು ಚಿತ್ರಹಿಂಸೆ ನೀಡಿ ಬಕ್ಷಿ-ಕಾ-ತಲಾಬ್ (ಬಿಕೆಟಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುತ್ತಿದ್ದಾರೆ.
ಅಪರಾಧದ ಹಿಂದಿನ ಉದ್ದೇಶವು ಆಸ್ತಿ ವಿಚಾರದ ಸಮಸ್ಯೆಗೆ ಸಂಬಂಧಿಸಿದಂತೆ ಸಂತ್ರಸ್ತ ಉತ್ಕರ್ಷ್ ಸಿಂಗ್ ನ ತಂದೆಯೊಂದಿಗಿನ ಹಳೆಯ ಜಗಳವು ಎಂದು ಹೇಳಲಾಗುತ್ತದೆ.
ಉತ್ಕರ್ಷ್ ಅವರು ಓದುತ್ತಿದ್ದ ಖಾಸಗಿ ಕಾಲೇಜು ಸಮೀಪ ಬುಧವಾರ ಎಸ್‌ಯುವಿಯಲ್ಲಿದ್ದ ವ್ಯಕ್ತಿಗಳು ಹಿಂಬಾಲಿಸಿದ್ದಾರೆ. ಸೀತಾಪುರದ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ:Accident: ನಿಶ್ಚಿತಾರ್ಥ ದಿನದಂದೇ ಭೀಕರ ಅಪಘಾತದಲ್ಲಿ ಕೊನೆಯುಸಿರೆಳೆದ ನಟ ಸೂರಜ್!
“ನಾನು ಬೆಳಿಗ್ಗೆ 8 ಗಂಟೆಗೆ ಲಕ್ನೋಗೆ ಹೊರಟೆ, 9 ಗಂಟೆಗೆ ಬಿಕೆಟಿಗೆ ಬಂದೆ. ಬಸ್ ನಿಂದ ಇಳಿದ ನಂತರ ಸ್ವಲ್ಪ ಸಮಯದ ನಂತರ ಎಸ್‌ಯುವಿ ನನ್ನ ಬಳಿ ನಿಂತಿತು. ಅದರಲ್ಲಿದ್ದವರು ನನ್ನನ್ನು ಹಿಡಿದು ಬಲವಂತವಾಗಿ ಎಸ್‌ಯುವಿ ಒಳಗೆ ಹಾಕಿದರು. ನನ್ನ ಬಟ್ಟೆಗಳನ್ನು ಹರಿದು ಹಾಕಿದರು. ನಾನು ಬೊಬ್ಬೆ ಹಾಕಬಾರದು ಎಂದು ನನ್ನ ತಲೆಗೆ ಗನ್ ಹಾಕಿ ಬೆದರಿಕೆ ಹಾಕಿದರು. ನಾನು ರಾಮ್ ನರೇಶ್ ಮತ್ತು ಅವನ ಮಕ್ಕಳಾದ ಆಶಿಶ್ ಮತ್ತು ಅರವಿಂದ್ ಮತ್ತು ಅವರ ಇಬ್ಬರು ಸಹಚರರನ್ನು ಗುರುತಿಸಿದೆ. ಅವರು ಸೀತಾಪುರದಿಂದ ಬಂದವರು” ಎಂದು ಉತ್ಕರ್ಷ್ ಪೊಲೀಸರಿಗೆ ತಿಳಿಸಿದ್ದಾರೆ.
“ಅವರು ನನ್ನ ಜೀವನವನ್ನು ಕೊನೆಗೊಳಿಸಲು ಉದ್ದೇಶಿಸಿರುವಂತೆ ತೋರುತ್ತಿದ್ದರಿಂದ ನಾನು ಬದುಕುಳಿಯುವ ಎಲ್ಲಾ ಭರವಸೆ ಕಳೆದುಕೊಂಡಿದ್ದೆ. ನಾನು ಎಸ್ಯುವಿಯಲ್ಲಿ ಕಬ್ಬಿಣದ ರಾಡನ್ನು ಗಮನಿಸಿದೆ. ಅವರು ವಾಹನವನ್ನು ನಿಲ್ಲಿಸಿದ ಬಳಿಕ ನಾನು ರಾಡ್ ಬಳಸಿ ಹಿಂದಿನ ಕಿಟಕಿಯನ್ನು ಒಡೆದು ಹಾಕಿ ಅದರ ಮೂಲಕ ತಪ್ಪಿಸಿಕೊಂಡೆ” ಎಂದು ಅವರು ಹೇಳಿದರು.