Advertisement

ಮಗಳಿಗಾಗಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸಿದ ತಂದೆ

03:49 PM Apr 04, 2019 | Team Udayavani |

ಅಭಿನವ್‌ ಬಿಂದ್ರಾ ಅವರ ತಂದೆ ಮಗನ ತರಬೇತಿಗಾಗಿ ಶೂಟಿಂಗ್‌ ರೇಂಜ್‌ ನಿರ್ಮಿಸಿಕೊಟ್ಟರು. ಇದಾದ ಬಳಿಕ ಬಿಂದ್ರಾ ಒಲಿಂಪಿಕ್‌ ಚಿನ್ನಕ್ಕೆ ಗುರಿಯಿಟ್ಟರು. ಅಂತೆಯೇ ಜೈಪುರದಲ್ಲೊಬ್ಬ ತಂದೆ ಮಗಳ ಕ್ರಿಕೆಟ್‌ ಭವಿಷ್ಯಕ್ಕಾಗಿ ಕ್ರಿಕೆಟ್‌ ಗ್ರೌಂಡನ್ನೇ ನಿರ್ಮಿಸಿ ಮಗಳ ಆಸೆಗೆ ನೀರೆರೆಯುತ್ತಾ ಬಂದರು. ಅವರೇ ಭಾರತದ ವನಿತಾ ಟಿ20ಯಲ್ಲಿ ಇತ್ತೀಚೆಗೆ ಸ್ಥಾನ ಪಡೆದ ಪ್ರಿಯಾ ಪೂನಿಯಾರ ತಂದೆ ಸುರೇಂದರ್‌.

Advertisement

ಡಿಸೆಂಬರ್‌ 21ರಂದು ನ್ಯೂಜಿಲ್ಯಾಂಡ್‌ ಪ್ರವಾಸಕ್ಕೆ ಭಾರತದ ವನಿತಾ ತಂಡದ ಪಟ್ಟಿ ಪ್ರಕಟಗೊಂಡಾಗ ಅದರಲ್ಲಿ ಸ್ಥಾನ ಪಡೆದವರು ಪ್ರಿಯಾ ಪೂನಿಯಾ.  ಅವರ ತಂದೆ ಸುರೇಂದರ್‌ ತಮ್ಮ ಆಸ್ತಿಯನ್ನು ಮಾರಿ ಮತ್ತು ಸಾಲ ತೆಗೆದು ಜೈಪುರದ ಹೊರವಲಯದಲ್ಲಿ 2010ರಲ್ಲಿ 22 ಲಕ್ಷ ಮೌಲ್ಯದ ಭೂಮಿ, 1.5 ಬಿಗಾ ಫ್ಲ್ಯಾಟ್‌ ಅನ್ನು ಖರೀದಿಸುತ್ತಾರೆ. ಅಲ್ಲಿ ಸ್ವತಃ ತಾವೇ ಸರಿಯಾದ ಪಿಚ್‌ ಮತ್ತು ನೆಟ್‌ ತರಬೇತಿ ವ್ಯವಸ್ಥೆಗಳನ್ನು ಮಾಡಿ ಮಗಳ ಕ್ರಿಕೆಟ್‌ ಭವಿಷ್ಯಕ್ಕೆ ನಾಂದಿ ಹಾಡಿದರು.

ಬ್ಯಾಡ್ಮಿಂಟನ್‌ ಬಿಟ್ಟು ಕ್ರಿಕೆಟ್‌ನಲ್ಲಿ ಆಸಕ್ತಿ ಹುಟ್ಟಿಸಿಕೊಂಡು ಹುಡುಗರೊಂದಿಗೆ ಆಡುತ್ತಿದ್ದ ಮಗಳನ್ನು ನೋಡಿದ ತಂದೆ ಅಂದೇ ಮಗಳಿಗೆ ಕ್ರಿಕೆಟ್‌ ಗೌಂಡ್‌ ನಿರ್ಮಿಸಬೇಕೆಂದು ಪಣತೊಟ್ಟರು.
2015ರಲ್ಲೇ ಭಾರತದ ಜರ್ಸಿ ನಿರೀಕ್ಷೆಯಲ್ಲಿದ್ದ ಪ್ರಿಯಾ ಪ್ರಿಯಾ 2015ರಲ್ಲಿ ಸ್ಥಳೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರ ಆಟದಲ್ಲಿ ನಾರ್ಥ್ ಝೋನ್‌ ತಂಡದ ಪರ ವೆಸ್ಟ್‌ ಝೋನ್‌ ವಿರುದ್ಧ ಹೊಡೆದ 95 ರನ್‌, ಅನಂತರ ಪ್ರವಾಸಿ ನ್ಯೂಜಿಲ್ಯಾಂಡ್‌ “ಎ’ ತಂಡದ ವಿರುದ್ಧ
42 ಎಸೆತಗಳಲ್ಲಿ 59 ಬಾರಿಸಿರುವುದು ಸೇರಿವೆ. ಇದು ಆತಿಥೇಯರಲ್ಲಿ ಅತೀ ಹೆಚ್ಚು ರನ್‌ ಗಳಿಕೆ.
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಪ್ರಿಯಾ ಆ ಇನ್ನಿಂಗ್ಸ್‌ ನಲ್ಲಿ ಆಟದಲ್ಲಿನ ಹಿಡಿತ ಮತ್ತು ಆತ್ಮವಿಶ್ವಾಸದಿಂದ ಎಲ್ಲರ ಗಮನ ಸೆಳೆದಿದ್ದರು. ಈ ಇಸವಿಯಲ್ಲೇ  ಭಾರತದ ತಂಡ ಜರ್ಸಿ ತೊಡುವ ನಿರೀಕ್ಷೆಯಲ್ಲಿದ್ದ ಅವರಿಗಂದು ನಿರಾಸೆಯಾಗಿತ್ತು. “ಅಂದು ನಾನು ಆಯ್ಕೆಯಾಗುತ್ತೇನೆ ಎಂಬ ನಿರೀಕ್ಷೆ ಹೆಚ್ಚಿತ್ತು. ಆ ವಿಷಯ ಬೇಸರ ಮೂಡಿಸಿತ್ತು. ಆದರೆ ನಾನು ಸುಮ್ಮನೇ ಕೂರಲಿಲ್ಲ. ಇನ್ನಷ್ಟು ತರಬೇತಿಯಲ್ಲಿ ತೊಡಗಿಸಿಕೊಂಡೆ’ ಎಂದು ನೆನಪಿಸುತ್ತಾರೆ ಪ್ರಿಯಾ.

ದೇಶಕ್ಕಾಗಿ ಕ್ರಿಕೆಟ್‌ ಆಡಬೇಕೆಂಬ ಕನಸು ಹೊಂದಿದ್ದ ಸುರೇಂದರ್‌ ರ ಆ ಕನಸನ್ನು ನನಸು ಮಾಡಿ ಕೊಂಡಿದ್ದು ಮಗಳು ಪೂನಿಯಾ. ರಾಜಸ್ಥಾನದ ಚಿರು ಎಂಬ ಪ್ರದೇಶದ ವರಾದ ಪ್ರಿಯಾ ಸ್ಥಳೀಯ ಕ್ರಿಕೆಟ್‌ನಲ್ಲಿ ಡೆಲ್ಲಿ ಪರ ಆಡುತ್ತಾರೆ. ಕಳೆದ ಎರಡು ಸ್ಥಳೀಯ ಆವೃತ್ತಿಗಳಲ್ಲಿ ಅವರು ರನ್‌ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅವಮಾನಕ್ಕೆ ತಕ್ಕ ಉತ್ತರ
ಕ್ರಿಕೆಟ್‌ ತರಬೇತಿಗಾಗಿ ಅಕಾಡೆಮಿನ ಸೇರಲೂ ಮುಂದಾದ ಪ್ರಿಯಾಗೆ ಅಲ್ಲಿನ ಕೋಚ್‌ “ಹುಡುಗಿಯಿಂದ ಏನು ಸಾಧ್ಯ’ ಎಂದು ಅಣಕಿಸುತ್ತಾರೆ. ಈ ಅವಮಾನ ಸಹಿಸಲಾರದ ಪ್ರಿಯಾ ಅಕಾಡೆಮಿ ಸೇರದಿರಲು ನಿರ್ಧರಿಸುತ್ತಾರೆ.

Advertisement

ಮಗಳ ತರಬೇತಿಗೆ ಬೇಕಾದ ಸೌಕರ್ಯಗಳ ಸಿದ್ಧತೆಯಲ್ಲಿದ್ದ ತಂದೆ ಮೈದಾನ ನೋಡಿಕೊಳ್ಳುವ ವ್ಯಕ್ತಿಯನ್ನು ಸಂಪರ್ಕಿಸಿದಾಗ ಆತ ಒಂದು ಲಕ್ಷ ರೂ. ಬೇಡಿಕೆ ಇಟ್ಟ. ಈ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದೇ ಕ್ರಿಕೆಟ್‌ ಪಿಚ್‌ ಅನ್ನು ಸ್ವತಃ ಅವರೇ ಸಿದ್ಧಪಡಿಸಲು ಮುಂದಾದರು. ಇದರ ನಿರ್ವಹಣೆಗೆ ಸುರೇಂದರ್‌ ತಿಂಗಳಿಗೆ 15,000 ರೂ. ಸವೆಸುತ್ತಾರೆ.

ಶಿಫಾರಸು ತಿರಸ್ಕರಿಸಿದ ಪ್ರಿಯಾ
ಬಿಸಿಸಿಐನ ಅಧ್ಯಕ್ಷರಾಗಿದ್ದ ಹಿಮಾಚಲ ಪ್ರದೇಶದ ಅನುರಾಗ್‌ ಠಾಕೂರು ಅವರ ಪರಿಚಯಸ್ಥರೊಬ್ಬರು ಪ್ರಿಯಾ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಖಚಿತವಿದೆ ಎಂದರು. ಇದರಿಂದ ಗೊಂದಲಗೊಂಡ ಸುರೇಂದರ್‌ ಮಗಳ ಬಳಿ ಬಂದು ಈ ಆಫ‌ರ್‌ ಬಗ್ಗೆ ಹೇಳುತ್ತಾರೆ. ಇದಕ್ಕೆ ಪ್ರಿಯಾ “ಶಿಫಾರಸಿನ ಮೂಲಕ ತಂಡದಲ್ಲಿ ಸ್ಥಾನ ಪಡೆಯುವುದರಲ್ಲಿ ಯಾವುದೇ ತೃಪ್ತಿ ಇಲ್ಲ’ ಎಂದರು.  ಅನಂತರ ಪ್ರಿಯಾ ಅವರ ಹೆಸರು ಭಾರತ ಟಿ20ಯಲ್ಲಿ ಸೇರಿಕೊಂಡಾಗ ಮಗಳಿಗಿಂತ ಖುಷಿ ಪಟ್ಟರು ಸುರೇಂದರ್‌.

 ರಮ್ಯಾ ಕೆದಿಲಾಯ

Advertisement

Udayavani is now on Telegram. Click here to join our channel and stay updated with the latest news.

Next