ನವದೆಹಲಿ: ಬಾಲ್ಯದಲ್ಲಿ ನನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ, ಆ ಆಘಾತವು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಕಾರಣವಾಯಿತು ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಶನಿವಾರ ಹೇಳಿದ್ದಾರೆ.
ಡಿಸಿಡಬ್ಲ್ಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿವಾಲ್, ತಾನು 4ನೇ ತರಗತಿಯಲ್ಲಿರುವವರೆಗೂ ನಿಂದನೆಯನ್ನು ಎದುರಿಸಿದ್ದೆ.ಬಾಲ್ಯದಲ್ಲಿದ್ದಾಗ ನನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ. ಆ ಸಮಯದಲ್ಲಿ ತಂದೆ ನನ್ನನ್ನು ಹೊಡೆಯುತ್ತಿದ್ದರು ಮತ್ತು ನಾನು ನನ್ನನ್ನು ಉಳಿಸಿಕೊಳ್ಳಲು ಹಾಸಿಗೆಯ ಕೆಳಗೆ ಅಡಗಿಕೊಳ್ಳುತ್ತಿದ್ದೆ”ಎಂದುಹೇಳಿದರು.
“ಹಾಸಿಗೆಯ ಕೆಳಗೆ ಅಡಗಿರುವಾಗ, ಮಹಿಳೆಯರು ಮತ್ತು ಮಕ್ಕಳನ್ನು ನಿಂದಿಸುವ ಇಂತಹ ಪುರುಷರಿಗೆ ನಾನು ಹೇಗೆ ಪಾಠ ಕಲಿಸುತ್ತೇನೆ ಮತ್ತು ಮಹಿಳೆಯರಿಗೆ ಅವರ ಹಕ್ಕುಗಳನ್ನು ಪಡೆಯಲು ನಾನು ಹೇಗೆ ಸಹಾಯ ಮಾಡಬಹುದು ಎಂದು ನಾನು ಯೋಚಿಸುತ್ತಿದ್ದೆ” ಎಂದು ಅವರು ಹೇಳಿದರು.
ತನ್ನ ಸಂಕಟವನ್ನು ವಿವರಿಸಿದ ಮಲಿವಾಲ್, ಆಕೆಯ ತಂದೆ ತನ್ನ ಜಡೆ ಹಿಡಿದು ಗೋಡೆಗೆ ಹೊಡೆಸಿ ತೀವ್ರ ರಕ್ತಸ್ರಾವವಾಗುವಂತೆ ಮಾಡಿದ್ದರು. ನಾನು 4 ನೇ ತರಗತಿಯಲ್ಲಿರುವವರೆಗೂ ಇದು ನಡೆದಿತ್ತು ಎಂದು ಅವರು ನೋವಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇತ್ತೀಚೆಗೆ, ನಟಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಖುಷ್ಬು ಸುಂದರ್ ಅವರು ತಮ್ಮ 8 ನೇ ವಯಸ್ಸಿನಲ್ಲಿ ತನ್ನ ತಂದೆಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳಿಕೊಂಡಿದ್ದರು.